ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕದವತಿಯಿಂದ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಬೊಮ್ಮನಹಳ್ಳಿ ಕೆರೆ ಅಭಿವೃದ್ಧಿಗೆ ಕೈಗೊಂಡಿದ್ದ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿದ್ದು, ಎರಡನೇ ಹಂತದ ಕಾಮಗಾರಿ ಕೈಗೊಳ್ಳಲು ಅನುದಾನ ಒದಗಿಸಲಾಗುಮದು ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಡಿ.ರಂದೀಪ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು. ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಆರ್‌ಬಿಐ ವತಿಯಿಂದ ಕೈಗೊಳ್ಳುವ ಎಲ್ಲಾ ಕೆಲಸಗಳಿಗೂ ಜಿಲ್ಲಾಡಳಿತ ಸಹಕಾರ ನೀಡುತ್ತದೆ.
ಕಾಲ ಮಿತಿಯಲ್ಲಿ ಎಲ್ಲಾ ಕೆಲಸಗಳನ್ನು ನಿರ್ವಹಿಸಬೇಕು ಎಂದು ಕಾಮಗಾರಿಯ ಜವಾಬ್ದಾರಿ ಹೊತ್ತಿರುವ ಮೈಸೂರು ಮಹಾ ನಗರಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.ಮೊದಲ ಹಂತದಲ್ಲಿ ಒಂದು ಭಾಗದ ಕಾಲುದಾರಿ, ಕೆರೆ ಏರಿ ದುರಸ್ತಿ ಕೆಲಸ ನಿರ್ವಹಿಸಲಾಗಿದೆ. ಕೆರೆಗೆ ಬರುತ್ತಿದ್ದ ಕೊಳಚೆ ನೀರನ್ನು ತಡೆಯಲಾಗಿದೆ.
ಎರಡನೇ ಹಂತದಲ್ಲಿ ಇನ್ನೊಂದು ಭಾಗದ ಕಾಲು ಹಾದಿ ನಿರ್ಮಾಣ, ತೆರವುಗೊಳಿಸುವುದು ಹಾಗೂ ಶುದ್ಧ ನೀರು ತುಂಬಿಸಲು ಅಗತ್ಯ ಕೆಲಸವನ್ನು ನಿರ್ವಹಿ ಸಲಾಗುವುದು ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
2017-18ನೇ ಸಾಲಿನಲ್ಲಿ ಸ್ಥಳೀಯ ಗ್ರಾಪಂ ಜೊತೆಯಲ್ಲಿ ಆರ್‌ಬಿಐ ನೋಟು ಮುದ್ರಣ ಘಟಕದ ಮುಂದಿನ ರಸ್ತೆ ದತ್ತು ಪಡೆದುಕೊಂಡು, ಅಭಿವೃದ್ಧಿ ಪಡಿಸಲಾಗುವುದು ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ವಿವಿಧ ಉದ್ಯಾನಗಳನ್ನು ದತ್ತು ಪಡೆಯಲಾಗುವುದು.
ಅಂಗನವಾಡಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. ಸಭೆಯಲ್ಲಿ ಆರ್‌ಬಿಐನ ಪ್ರಧಾನ ವ್ಯವಸ್ಥಾಪಕ ಠಾಕೂರ್ ದೇಸಾಯಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್. ರಾಮಕೃಷ್ಣೇಗೌಡ ಮತ್ತಿತರರು ಭಾಗವಹಿಸಿದ್ದರು.