ರಾಯಚೂರು: ಆಶ್ರಯ ಯೋಜನೆ, ಪಿಂಚಣಿ ಯೋಜನೆ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳಿದ್ದರೂ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ನಗರ ಶಾಸಕ ಡಾ| ಶಿವರಾಜ ಪಾಟೀಲ್ ತಿಳಿಸಿದರು.
ನಗರದ ಅಶಾಪೂರ ರಸ್ತೆಯ ಕೆ.ಕೆ. ರೆಡ್ಡಿ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಹಾಗೂ ರಾಯಚೂರು ನಗರಸಭೆಯಿಂದ ಶುಕ್ರವಾರ ಏರ್ಪಡಿಸಿದ್ದ ಶಾಸಕರ ನಡೆ-ಜನ ಸಂಪರ್ಕದ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರು ಸರ್ಕಾರಿ ಕಚೇರಿಗಳಿಗೆ ವಿನಾಕಾರಣ ಅಲೆಯುವುದನ್ನು ತಪ್ಪಿಸಿ ಒಂದೇ ಸೂರಿನಡಿ ಎಲ್ಲ ಕೆಲಸ ಮಾಡಿಕೊಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು.
ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಅಹವಾಲು ಸ್ವೀಕರಿಸುತ್ತಿದ್ದು, ಪಕ್ಷಭೇದ ಮರೆತು ಎಲ್ಲ ಜನ ಸೌಲಭ್ಯ ಪಡೆಯಬೇಕು ಎಂದರು. ರಾಯಚೂರು ನಗರ ಕ್ಷೇತ್ರದ ವ್ಯಾಪ್ತಿಯಲ್ಲಿ ಗುಡಿಸಲು ಮುಕ್ತನಗರ ಮಾಡುವ ಕನಸು ಹೊಂದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ಮನೆಗಳ ಜೊತೆಗೆ ಹಕ್ಕು ಪತ್ರವನ್ನು ಸಹ ನೀಡಲಾಗುತ್ತದೆ.
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೋವಿಡ್ ಲಸಿಕೆ ಪಡೆಯುವ ಮೂಲಕ ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್ ಮಾತಾನಾಡಿ, ಸರ್ಕಾರವು ಸಾರ್ವಜನಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು. ಇದೇ ವೇಳೆ ವಾರ್ಡ್ ಗರ್ಭಿಣಿಯರಿಗೆ ಕಿಟ್ ಹಾಗೂ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪೌರಾಯುಕ್ತ ಕೆ.ಮುನಿಸ್ವಾಮಿ, ಶರಣಪ್ಪ, ತಾಲೂಕು ಅ ಧಿಕಾರಿಗಳು ಉಪಸ್ಥಿತರಿದ್ದರು