Advertisement

ಮೂರ್‍ನಾಲ್ಕು ದಿನದಲ್ಲಿ ಮೊದಲ ಪಟ್ಟಿ ಪ್ರಕಟ

06:25 AM Apr 06, 2018 | Team Udayavani |

ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿ ಮೂರ್‍ನಾಲ್ಕು ದಿನಗಳಲ್ಲಿ ಹೊರಬೀಳಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್‌ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಎರಡು ದಿನಗಳಲ್ಲಿ ಅಭಿಪ್ರಾಯ ಸಂಗ್ರಹ ಪೂರ್ಣಗೊಳ್ಳಲಿದ್ದು ನಂತರ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಲಿದೆ. ಅದಾದ ನಂತರ ಇನ್ನೊಂದು ವಾರದಲ್ಲಿ ಎರಡನೇ ಹಂತದ ಪಟ್ಟಿಯೂ ಹೊರಬೀಳಲಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಆಯ್ಕೆಯಲ್ಲೂ ಪಾರದರ್ಶಕತೆ ಇದೆ. ಪ್ರತಿ ಕ್ಷೇತ್ರದ ಆಕಾಂಕ್ಷಿಗಳು, ಸ್ಥಳೀಯ ನಾಯಕರು, ಪಕ್ಷದ ಪದಾಧಿಕಾರಿಗಳು ಎಲ್ಲರ ಅಭಿಪ್ರಾಯ ಪಡೆದು ಸರ್ವಸಮ್ಮತ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತಿದೆ. ಬಿಜೆಪಿಯಲ್ಲಿ ಮಾತ್ರ ಇಂತಹ ವ್ಯವಸ್ಥೆ ನೋಡಲು ಸಾಧ್ಯ ಎಂದು ಹೇಳಿದರು.

ಬೇರೆ ಪಕ್ಷಗಳಿಂದ ಬರುವವರಿಗೆ ಕಾಯಲಾಗುತ್ತಿದೆಯಾ ಎಂಬ ಪ್ರಶ್ನೆಗೆ, ಅಭ್ಯರ್ಥಿಗಳ ಆಯ್ಕೆ  ಎಂಬುದೇ ಕಾರ್ಯತಂತ್ರ. ನಮಗೆ ಇತರೆ ಪಕ್ಷಗಳು ಏನು ಮಾಡುತ್ತವೆ ಎಂಬುದು ಮುಖ್ಯವಲ್ಲ. ನಮ್ಮದೇ ಆದ ಕಾರ್ಯತಂತ್ರದಡಿ ಕೆಲಸ ಮಾಡುತ್ತೇವೆ. ಯಾರೇ ಪಕ್ಷಕ್ಕೆ ಬಂದರೂ ಟಿಕೆಟ್‌ ಕೊಡುವುದಷ್ಟೇ ಭರವಸೆಯಲ್ಲ. ಅವರ ಭವಿಷ್ಯದ ಬಗ್ಗೆ ಕಾಳಜಿವಹಿಸುತ್ತೇವೆ ಎಂದು ಹೇಳಿ ಕರೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಕುಟುಂಬ ರಾಜಕಾರಣ
ಕುಟುಂಬ ರಾಜಕಾರಣ ಆರೋಪ ಬಿಜೆಪಿಯಲ್ಲೂ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಅಭ್ಯರ್ಥಿಗಳ ಪಟ್ಟಿ ನೋಡಿದ ನಂತರ ಆ ಬಗ್ಗೆ ಪ್ರಶ್ನೆ ಕೇಳಿ ಎಂದು ಹೇಳಿದರು. ಹಾಗಾದರೆ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್‌ ಸಿಗುವುದಿಲ್ಲವೇ ಎಂದಾಗ, ಪಟ್ಟಿ ಪ್ರಕಟಗೊಂಡಾಗ ನಿಮಗೆ ಗೊತ್ತಾಗುತ್ತದೆ. ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದರು.

Advertisement

ವಿಜಯೇಂದ್ರ  ಈಗಾಗಲೇ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಕೇಳಿದಾಗ, ನಾವು ಅವರನ್ನು ಹೋಗಬೇಡಿ ಎಂದು ಹೇಳಿಲ್ಲ. ಎಲ್ಲರೂ ಪಕ್ಷದ ಕೆಲಸ ಮಾಡುತ್ತಾರೆ. ಅದಕ್ಕೆ ಎಲ್ಲರೂ ಸ್ವತಂತ್ರರು. ಟಿಕೆಟ್‌ ನೀಡುವುದು ಬಿಡುವುದು ಪಕ್ಷಕ್ಕೆ ಬಿಟ್ಟದ್ದು ಎಂದು ಹೇಳಿದರು.

ಇಂದು ರಾಜ್ಯಾದ್ಯಂತ
ಸಂಪರ್ಕ ಅಭಿಯಾನ

ಬಿಜೆಪಿ ಸಂಸ್ಥಾಪನಾ ದಿನ ಅಂಗವಾಗಿ ಶುಕ್ರವಾರ(ಏ.6) ರಾಜ್ಯದ 57 ಸಾವಿರ ಮತಗಟ್ಟೆಗಳಲ್ಲಿ ಮತದಾರರ ಮನೆ ಮನೆಗೆ ಭೇಟಿ ನೀಡುವ “ಸಂಪರ್ಕ ಅಭಿಯಾನ’ ನಡೆಸಲು ಬಿಜೆಪಿ ತೀರ್ಮಾನಿಸಿದೆ. 

ಪಕ್ಷದ ಆರು ಲಕ್ಷ ಕಾರ್ಯಕರ್ತರು-ಮುಖಂಡರು ಏಕಕಾಲದಲ್ಲಿ ರಾಜ್ಯಾದ್ಯಂತ ಈ ಸಂಪರ್ಕ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್‌ರಾವ್‌ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಈ ಬಾರಿಯ ಸಂಪರ್ಕ ಅಭಿಯಾನದ ಪ್ರಮುಖ ಗುರಿ ಎಂದು ಹೇಳಿದರು.

ರಾಜ್ಯ ಸರ್ಕಾರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ ಅದರ ಮುನ್ಸೂಚನೆ ಎಂಬಂತೆ ಗೋಲಿಬಾರ್‌, ರೌಡಿಗಳ ಹಾವಳಿ ಪ್ರಕರಣಗಳು ನಡೆಯುತ್ತಿವೆ. ಈ ಎಲ್ಲ ವಿಷಯಗಳನ್ನು ಆಯೋಗದ ಗಮನಕ್ಕೆ ತರಲಿದ್ದೇವೆ.
– ಮುರಳೀಧರ್‌ರಾವ್‌, ರಾಜ್ಯ ಬಿಜೆಪಿ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next