Advertisement

ನಾಳೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಆಕಾಂಕ್ಷಿಗಳಲ್ಲಿ ಕಾತರ

09:28 PM Mar 21, 2023 | Team Udayavani |

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ ಎಂಬುದು ಮಾತ್ರ ನಿಗೂಢವಾಗಿದೆ.

Advertisement

ದಿಲ್ಲಿಯಲ್ಲಿ ಕಳೆದ ಶುಕ್ರವಾರ ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿಯು ರಾಜ್ಯದ 224 ಕ್ಷೇತ್ರಗಳ ಪೈಕಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆದರೆ ರಾಹುಲ್‌ ಗಾಂಧಿ ಬೆಳಗಾವಿ ಪ್ರವಾಸದ ಬಳಿಕ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಬುಧವಾರ ಯುಗಾದಿಯ ಶುಭದಿನ ಆಗಿರುವುದರಿಂದ ಅಂದೇ ಮೊದಲ ಪಟ್ಟಿ ಬಿಡುಗಡೆ ಎನ್ನುತ್ತಿದ್ದರೂ ಇದು ಗುರುವಾರಕ್ಕೆ ಹೋಗಬಹುದು ಎನ್ನಲಾಗಿದೆ. ಹೀಗಾಗಿ ಹಾಲಿ ಶಾಸಕರ ಜತೆಗೆ ಟಿಕೆಟ್‌ ಆಕಾಂಕ್ಷಿಗಳು ಪಟ್ಟಿ ಬಿಡುಗಡೆಗೆ ಜಾತಕಪಕ್ಷಿಯಂತೆ ಕಾಯುತ್ತಿದ್ಧಾರೆ. ಯುಗಾದಿಯ ಬೇವು-ಬೆಲ್ಲ ಯಾರಿಗೆ ಎಂಬುದು ಮಾತ್ರ ಕುತೂಹಲ ಕೆರಳಿಸಿದೆ.

ಹಾಲಿ 69 ಶಾಸಕರ ಪೈಕಿ ಪುಲಕೇಶಿನಗರ, ಕಲಬುರಗಿ ಉತ್ತರ, ಕುಂದಗೋಳ, ಶಿಡ್ಲಘಟ್ಟ, ಪಾವಗಡ, ಲಿಂಗಸುಗೂರು, ಅಫ‌ಜಲಪುರ, ಹರಿಹರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಗೆ ತಡೆ ಹಾಕಿರುವುದರಿಂದ ಹಾಲಿ 8 ಶಾಸಕರಲ್ಲಿ ತಳಮಳ ಸೃಷ್ಟಿಯಾಗಿದೆ. ಈ ಕ್ಷೇತ್ರಗಳಲ್ಲಿ ಗೊಂದಲಮಯ ವಾತಾವರಣ ಉಂಟಾಗಿದೆ. ಕೇವಲ ಆಕಾಂಕ್ಷಿಗಳು ಮಾತ್ರವಲ್ಲ ಕಾರ್ಯಕರ್ತರು ಸಹ ಟಿಕೆಟ್‌ ಯಾರಿಗೆ ಸಿಗಬಹುದೆಂದು ಕಾಯುತ್ತಿದ್ದಾರೆ.

ಗೊಂದಲದ ಗೂಡು
ಸಿದ್ದರಾಮಯ್ಯ ಸ್ಪರ್ಧೆ ಕುರಿತು ಉಂಟಾಗಿರುವ ಗೊಂದಲ 4 ದಿನ ಕಳೆದರೂ ಬಗೆಹರಿದಿಲ್ಲ. ಹಲವು ಕಾರಣಗಳಿಂದ ಕೋಲಾರದಲ್ಲಿ ಸ್ಪರ್ಧಿಸುವುದು ಬೇಡ ಎಂದು ಅವರಿಗೆ ರಾಹುಲ್‌ ಗಾಂಧಿ ನೀಡಿದ್ದಾರೆ ಎನ್ನಲಾದ ಸಲಹೆಯೇ ಗೊಂದಲಕ್ಕೆ ಮೂಲ ಕಾರಣ. ಈ ಮಧ್ಯೆ ಸಿದ್ದರಾಮಯ್ಯ ಅವರು, ಬಾದಾಮಿ, ವರುಣಾ, ಕಡೂರು, ಕೊಪ್ಪಳ ಮತ್ತಿತರ ಕಡೆಗೆ ಮುಖ ಮಾಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕೋಲಾರ, ವರುಣಾ ಜತೆಗೆ ಮತ್ತಷ್ಟು ಕ್ಷೇತ್ರಗಳು ಸೇರಿರುವುದರಿಂದ ಸಿದ್ದರಾಮಯ್ಯ ಸ್ಪರ್ಧೆ ಕಾಂಗ್ರೆಸ್‌ ಪಾಳಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದೆ. ಸ್ವತಃ ಸಿದ್ದರಾಮಯ್ಯ ಅವರಲ್ಲಿಯೇ ಸ್ಪಷ್ಟತೆ ಇಲ್ಲದಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ.

ಬೆಂಗಳೂರಿನಲ್ಲಿ ಮಾತನಾಡುವಾಗ ಕೋಲಾರದಿಂದ ಸ್ಪರ್ಧಿಸುವುದಿಲ್ಲವೆಂದು ತಾವು ಹೇಳಿಲ್ಲ ಎಂದು ಹೇಳಿದ್ದರೆ, ಮೈಸೂರಿನಲ್ಲಿ ಮಾತನಾಡುವಾಗ ಪುತ್ರ ವರುಣಾದಿಂದಲೇ ಸ್ಪರ್ಧಿಸುತ್ತಾನೆ ಎಂದು ಹೇಳಿದ ಮರುಕ್ಷಣವೇ ಬಾದಾಮಿ, ಕೋಲಾರ, ವರುಣಾ ನನ್ನ ಆಯ್ಕೆ. ಆದರೆ ನಾನು ಎಲ್ಲಿಂದ ಸ್ಪರ್ಧಿಸಬೇಕೆಂಬುದನ್ನು ಹೈಕಮಾಂಡ್‌ ತೀರ್ಮಾನಿಸುತ್ತದೆ ಎಂದಿದ್ದಾರೆ. ಇವೆಲ್ಲವೂ ಅವರಲ್ಲಿರುವ ಗೊಂದಲವನ್ನು ಸ್ಪಷ್ಟಪಡಿಸಿವೆ. ಹೀಗಾಗಿ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರು ಇರುತ್ತದೋ ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next