Advertisement
ಕನಸುಗಳು ನನ್ನ ಕಣ್ಣ ರೆಪ್ಪೆಯ ಮೇಲೆಯೇ ಚಕ್ಕಲಮಕ್ಕಲ ಹಾಕಿ ಕುಳಿತಿದ್ದವು. ಇನ್ನು ನಿದ್ದೆಯಾದರೂ ಎಲ್ಲಿಂದ ಬರಬೇಕು? ಬೆಳಗ್ಗೆ ನಾಲ್ಕಕ್ಕೇ ಎದ್ದು ಟ್ರ್ಯಾಕ್ ಶೂ ಕಟ್ಟಿಕೊಳ್ಳುವಾಗ ಎವರೆಸ್ಟ್ ಮೇಲೆಯೇ ಪಾದಗಳಿರುವಂತೆ ಪುಳಕಗೊಳ್ಳುತ್ತಿದ್ದೆ. ಆದರೆ, ಆಗ ನಾನಿರುತ್ತಿದ್ದುದ್ದು, ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಸಮೀಪದ ನನ್ನ ಮನೆಯಲ್ಲಿ. ತುರಹಳ್ಳಿ ಫಾರೆಸ್ಟ್‌ನಲ್ಲಿ ನಿತ್ಯವೂ ಓಡಿ ಕಾಲುಗಳನ್ನು ಹುರಿಗೊಳಿಸುತ್ತಿದ್ದೆ. ಅಷ್ಟು ಮುಂಜಾನೆ ಎದ್ದು ಓಡೋದನ್ನು ನೋಡಿ ಕೆಲವರು, ಮುಸಿ ಮುಸಿ ನಗೋರು. ಎರಡು ಮಕ್ಕಳ ತಾಯಿ. ವಯಸ್ಸು ನಲ್ವತ್ತೂಂದು ಜಿಗಿದಿದೆ. ಈ ವಯಸ್ಸಿನಲ್ಲೂ ಓಡೋದು ಅಂದ್ರೆ ಅಂತ ಅಂದುಕೊಂಡರೋ ಏನೋ. ಭಾನುವಾರವೂ ನಾನು ಸುಮ್ಮನೆ ಕೂರುತ್ತಿರಲಿಲ್ಲ. ನಂದಿಬೆಟ್ಟಕ್ಕೆ ಕೊರಕಲು- ಮುರುಕಲು ಇದ್ದ ಜಾಗವನ್ನೇ ಆಯ್ದುಕೊಂಡು, ಓಡಿ, ಅರ್ಧ ಗಂಟೆಯಲ್ಲಿ ತುದಿ ತಲುಪುತ್ತಿದ್ದೆ. ವಾರದಲ್ಲಿ 500 ಕಿ.ಮೀ. ನಡೆಯುತ್ತಿದ್ದೆ!ಇವೆಲ್ಲವೂ ಮೌಂಟ್ ಎವರೆಸ್ಟ್ ಮೇಲೆ ಓಡುವ ಮುನ್ನ ನಾನು ನಡೆಸಿದ ತಾಲೀಮು. ಎವರೆಸ್ಟ್ ಅನ್ನು ಅನೇಕರು ಏರಿದ್ದಾರೆ. ಆದರೆ, ಅದರ ಮೇಲೆ ಓಡಿದ ಕಾಲುಗಳು ಕಡಿಮೆ. ಹಾಗೆ ಓಡಿ, ಮೊದಲ ಭಾರತೀಯ ಮಹಿಳೆಯಾಗಿ ತಿರಂಗಾ ನೆಟ್ಟು ಬರಬೇಕೆಂಬ ಛಲವೇ ಗೌರಿಶಂಕರದ ಬುಡದಲ್ಲಿ ನನ್ನನ್ನು ತಂದುನಿಲ್ಲಿಸಿತ್ತು. ಅದು ಅಲ್ಟ್ರಾ ಮ್ಯಾರಥಾನ್. ಬೇಸ್ ಕ್ಯಾಂಪ್‌ನಿಂದ 60 ಕಿ.ಮೀ. ಓಡುತ್ತಲೇ ಎವರೆಸ್ಟ್ ಅನ್ನು ಏರುವ ಅತ್ಯಪರೂಪದ ಮ್ಯಾರಥಾನ್ ಅದು. ಪ್ರಪಂಚದ ಅತಿ ಎತ್ತರದ, ಅತಿ ಕಠಿಣ ಮ್ಯಾರಥಾನ್ ಕೂಡ ಇದೇ ಆಗಿದೆ. ಬೆಂಗಳೂರಿನಿಂದ ನನ್ನೊಂದಿಗೆ ತಾಹೀರ್ ಜತೆಯಾಗಿದ್ದರು.
Related Articles
Advertisement
ಪುಣ್ಯ! ಮರುದಿನ ಮೇ 29ರ ಬೆಳಗ್ಗೆ ಅದಾಗಲೇ ಹೈಪೋಥರ್ಮಿಯಾದಿಂದ ಹೊರಬಂದಿದ್ದೆ. ಬೆಳಗ್ಗೆ 6ಕ್ಕೆ ಮ್ಯಾರಥಾನ್ ಆರಂಭ. ಘೋರ ಚಳಿಯಲ್ಲಿ ಓಡುತ್ತಾ ಹೋಗಬೇಕು. ಇಪ್ಪತೂರು ಕಿ.ಮೀ. ತನಕ ಓಡಲು ಒಳ್ಳೆಯ ಹಾದಿಯೇ ಇತ್ತು. ಹಸಿರು ಮರ, ಬೆಟ್ಟಗಳ ಮೇಲೆ ಮುಚ್ಚಿಗೆಯಂತೆ ಬಿದ್ದಿದ್ದ ಹಿಮದ ವೈಭವವನ್ನು ನೋಡುತ್ತಾ ಓಡುತ್ತಿದ್ದೆ. 23 ಕಿ.ಮೀ. ಮುಗಿದ ಮೇಲೆಯೇ ನನಗೆ ಚಾಲೆಂಜ್ ಎದುರಾಗಿದ್ದು. ಅಲ್ಲಿಂದ ನಾವು ಸೆವೆನ್ ಹಿಲ್ಸ್ ಅನ್ನು ದಾಟಬೇಕು. ಆ ಏಳು ಕಣಿವೆಯಲ್ಲಿ ಹಿಮಗಡ್ಡೆಯ ಮೇಲೆಯೇ 5 ಕಿ.ಮೀ. ಓಡಬೇಕು. ಸುತ್ತಮುತ್ತಲಿನ ನಿಸರ್ಗದ ಸೌಂದರ್ಯದ ಮೇಲೆ ದೃಷ್ಟಿ ನೆಡುವ ಹಾಗೆಯೇ ಇಲ್ಲ. ಎಡವಿದರೆ ಪಾತಾಳ. ಅರೆಕ್ಷಣ ಮೈ ಮರೆತರೂ ಬೆನ್ನ ಹಿಂದೆ ಇದ್ದವರು ಹಿಂದಾØಕುತ್ತಾರೆಂಬ ಕಳವಳ. ಅಲ್ಲಿ ಬೆಳ್ಳಿಬೆಟ್ಟ ಬಹಳ ಸುಂದರವಾಗಿತ್ತಂತೆ, ಅದನ್ನು ಆಸ್ವಾದಿಸಲಾಗಲಿಲ್ಲ ಎನ್ನುವ ಬೇಸರ ಈಗಲೂ ಕಾಡುತ್ತಿದೆ. ಒಂದೈದು ನಿಮಿಷ ವೇಗವಾಗಿ ಓಡಿಬಿಟ್ಟರೆ, ತೀವ್ರ ಏರು ಇಲ್ಲವೇ ತೀವ್ರ ಇಳಿಜಾರು ಇದ್ದಂಥ ಪ್ರದೇಶವದು. ಸಂಜೆ ಆರು ಗಂಟೆಯ ಹೊತ್ತಿಗೆ ಮಂಜು ಬೀಳಲು ಶುರು. ತಾಹೀರ್ ಅಲ್ಲೇ ನಿಂತು, “ನಾಳೆ ಓಡ್ತೀನಿ’ ಅಂದುಬಿಟ್ಟರು. ಆದರೆ, ನಾನು ಅಲ್ಲೊಂದು ವಿರಾಮ ತಗೊಂಡು ರಾತ್ರಿ 7ರ ಸುಮಾರಿಗೆ ಓಟ ಮುಂದುವರಿಸಿದ್ದೆ.
ಬೆಳಕಿನ ವಿಳಾಸವೇ ಇಲ್ಲದಂಥ ಕಗ್ಗತ್ತಲು. ಎಲ್ಲೋ ಅಲ್ಲಲ್ಲಿ ಬೀದಿದೀಪದ ವ್ಯವಸ್ಥೆಯಿತ್ತು. ಹಿಮಚ್ಛಾದಿತ ಕಾಡುಹಾದಿ ಬೇರೆ. ರಾತ್ರಿ 9.30ರ ವರೆಗೆ ಓಡಿದ್ದೆ. ಕಾಲುಗಳು ಕೊಂಚ ದಣಿದಿದ್ದವು. ಮತ್ತೆ ಎರಡನೇ ವಿರಾಮ ತೆಗೆದುಕೊಂಡು, ನೂಡಲ್ಸ್ ಸೂಪ್ ಹೀರಿದೆ. ಅನೇಕ ಓಟಗಾರರು ನೂಡಲ್ಸ್, ಮೊಮೊಸ್‌ಗಳನ್ನು ಮೆಲ್ಲುತ್ತಿದ್ದರು. ಅಲ್ಲಲ್ಲಿ ಟೀ ಹೌಸ್‌ಗಳಿದ್ದವಾದರೂ, ನಾನು ಕುಡಿದಿದ್ದು ಕಾಫೀ. ದೇಹಕ್ಕೆ ಕೆಫೀನ್ ಸೇರಿದರೆ ಅದು ಸ್ವಲ್ಪ ಶಕ್ತಿ ಕೊಡುತ್ತೆ, ನಿದ್ದೆ ಬರೋಲ್ಲ ಎಂದು ಎಲ್ಲ ದಕ್ಷಿಣ ಭಾರತೀಯ ಕಾಫೀಪ್ರಿಯರಂತೆ ನಾನೂ ನಂಬಿದ್ದೆ. ಅಲ್ಲಿಂದ ಮತ್ತೆ ಹೊರಟೆ.
ಕಾಡ ಹಾದಿ. ಬೆಟ್ಟದ ಮೇಲಿನ ಅಲ್ಲೊಂದು ಹಳ್ಳಿಯಲ್ಲಿ ಒಬ್ಬ ಪುಟ್ಟ ನೇಪಾಳಿ ಹುಡುಗ ಸಿಕ್ಕಿದ. ನನಗೆ ದಾರಿ ತೋರಿಸಿದ್ದು ಅವನೇ. ಅವನಿಗೆ ಹಿಂದಿನೂ ಬರೋಲ್ಲ, ಇಂಗ್ಲಿಷೂ ತಿಳಿದಿರಲಿಲ್ಲ. ಜಗತ್ತಿನ ಎಲ್ಲ ಭಾಷಿಕರ ಕೈಸನ್ನೆ, ಪರಿಸ್ಥಿತಿ- ಸನ್ನಿವೇಶಗಳನ್ನು ಅರಿಯುವ ಬಹುದೊಡ್ಡ ಜ್ಞಾನವನ್ನು ದೇವರು ಅವನಿಗೆ ದಯಪಾಲಿಸಿದ್ದ. ಅವನೂ ನನ್ನೊಂದಿಗೆ ಓಡುತ್ತಾ ಬಂದ. ಆತ ಹೆಜ್ಜೆ ಇಟ್ಟಲ್ಲಿ, ನಾನು ಹೆಜ್ಜೆ ಇಡುತ್ತಿದ್ದೆ. ಅವನಿಗೆ ಆ ರಸ್ತೆಯ ಎಲ್ಲ ಗುಂಡಿಗಳೂ ಪರಿಚಿತ. ನಾನು ತಲೆಗೆ ಕಟ್ಟಿಕೊಂಡ ಹೆಡ್‌ಲ್ಯಾಂಪ್‌ನಿಂದ ದಾರಿ ಕಾಣುತ್ತಿತ್ತು. ಆದರ, ಕೆಲವೆಡೇ ಅವನಿಗೆ ಬೆಳಕಿನ ಅಗತ್ಯವೇ ಇದ್ದಿರಲಿಲ್ಲ.
ಮರುದಿನ ಮಧ್ಯಾಹ್ನ 1 ಗಂಟೆಗೆ ಅಂತಿಮ ಗೆರೆಯನ್ನು ಮುಟ್ಟಿದೆ. ನಾನು ಗುರಿ ಮುಟ್ಟಿದ್ದೇನೆಂದು ಅಲ್ಲಿಯ ತನಕ ಗೊತ್ತೇ ಇರಲಿಲ್ಲ. ಅಲ್ಲಿ ಆಯೋಜಕರು ಪದಕ ಹಿಡಿದು ನನಗಾಗಿ ಕಾಯುತ್ತಿದ್ದರು! 60 ಕಿ.ಮೀ. ಅನ್ನು 19 ಗಂಟೆ 50 ನಿಮಿಷಗಳಲ್ಲಿ ಓಡಿ ಮುಗಿಸಿದ್ದೆ. ಎರಡೇ ಎರಡು ಸಲ ಮಾತ್ರ ವಿರಾಮ ತೆಗೆದುಕೊಂಡಿದ್ದೆನಷ್ಟೇ.
ಈ ಮ್ಯಾರಥಾನ್‌ನಲ್ಲಿ ನಾನು ನಾಮೆ ಬಜಾರ್ ಅನ್ನು ನಾಲಾ ಮಾರ್ಗದ ಮೂಲಕ ಮುಟ್ಟಿದ್ದೆ. ಎವರೆಸ್ಟ್‌ನ ತುದಿಗೆ ಅಲ್ಲಿಂದ ಆರೇ ದಿನದ ಚಾರಣ. ಆದರೆ, ಅಲ್ಲಿಂದ ಮೇಲಿನ ಶಿಖರಕ್ಕೆ ಓಡಲು ಅನುಮತಿ ಇಲ್ಲ. ಓಡುವುದೂ ಅಸಾಧ್ಯ.
ಅದೊಂದು ಗ್ರೇಟ್ ಎಸ್ಕೇಪ್ಬೇಸ್ಕ್ಯಾಂಪ್ ದಾಟಿ ಸೆವೆನ್ ಹಿಲ್ಸ್‌ನ ಹಾದಿಯಲ್ಲಿ ಬರೀ ಕಾಡೇ. ಕಾಲಿಟ್ಟರೆ ಎಲ್ಲಿ ಪಾತಾಳ ಸೇರುತ್ತೇವೋ ಎನುವ ಭಯ ಒಂದೆಡೆಯಾದರೆ, ಅಲ್ಲಿನ ಮತ್ತೂಂದು ಭಯ ಕಾಡುಮೃಗಗಳದ್ದು. ಹಿಮಚಿರತೆಗಳು ಯಾವಾಗ ಎಲ್ಲಿ ಅಡಗಿ ಕುಳಿತಿದ್ದಾವೋ ಎಂಬ ಭಯ. ಹಿಮಾಲಯನ್ ಕಪ್ಪುಕರಡಿಗಳು, ಟಹ್‌ಗಳೂ ಅಲ್ಲಿದ್ದವಂತೆ. ಆ ಕತ್ತಲ ರಾತ್ರಿಯಲ್ಲಿ ವೇಗವಾಗಿ ಓಡಿಬಿಟ್ಟರೆ, ಈ ಪ್ರಾಣಿಗಳಿಂದ ತಪ್ಪಿಸಿಕೊಳ್ಳಬಹುದೆಂದೇ ಹೆಜ್ಜೆ ಹಾಕತೊಡಗಿದ್ದೆ.
– ದೀಪಾ ಭಟ್, ಬೆಂಗಳೂರು ಜಮುನಾ ರಾಣಿ ಎಚ್.ಎಸ್.