ಅಪರೂಪದ ಪ್ರಕರಣವೊಂದರಲ್ಲಿ ಅಮೆರಿಕದ ಹಸುಗೂಸು ವೈರಸ್ ಗೆ ಬಲಿಯಾಗಿದೆ. ಷಿಕಾಗೋದಲ್ಲಿ ಇನ್ನೂ ಒಂದು ವರ್ಷ ತುಂಬಿರದ ಶಿಶುವಿಗೆ ಇತ್ತೀಚೆಗೆ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿತ್ತು. ಭಾನುವಾರ ಈ ಶಿಶು ಕೊನೆಯುಸಿರೆಳೆದಿದೆ ಎಂದು ಗವರ್ನರ್ ಜೆಬಿ ಪ್ರಿಜ್ಕರ್ ಮಾಹಿತಿ ನೀಡಿದ್ದಾರೆ. ಕೋವಿಡ್ 19 ವೈರಸ್ ಗೆ ಅಮೆರಿಕದಲ್ಲಿ ಹಸುಗೂಸು ಸಾವಿಗೀಡಾಗಿದ್ದು ಇದೇ ಮೊದಲು. ಶಿಶುವಿನ ಸಾವಿಗೆ ಕಾರಣವೇನು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಎರಡು ಸಾವಿರ ಸಾವು: ಅಮೆರಿಕದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೋವಿಡ್ 19 ವೈರಸ್, ಈವರೆಗೆ ಅಲ್ಲಿ 2,000ಕ್ಕಿಂತಲೂ ಹೆಚ್ಚು ರೋಗಿಗಳನ್ನು ಬಲಿತಗೆದುಕೊಂಡಿದೆ ಎಂದು ಜಾನ್ಸ್ ಹಾಪ್‌ಕಿನ್ಸನ್ ವಿವಿ ಹೇಳಿದೆ.
ಗುರುವಾರದಿಂದ ಈಚೆಗೆ, ಅಲ್ಲಿ ಸರಾಸರಿ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಗುರುವಾರ ಅಲ್ಲಿ 1,000 ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಅಮೆರಿಕಾದ್ಯಂತ 1,22,666 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಲಾಕ್‌ಡೌನ್ ಮಾಡಲು ಹಿಂದೇಟು
ನ್ಯೂಯಾರ್ಕ್‌ನಲ್ಲಿ ಸಾವಿನ ಸಂಖ್ಯೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ನ್ಯೂಯಾರ್ಕ್, ನ್ಯೂ ಜೆರ್ಸಿ, ಕನೆಕ್ಟಿಕಟ್ ನಗರಗಳನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಬಗ್ಗೆ ಅಧ್ಯಕ್ಷ ಟ್ರಂಪ್ ಪ್ರಸ್ತಾಪಿಸಿದ್ದರು. ಈ ಬಗ್ಗೆ ಪ್ರಬಲ ಟೀಕೆಯ ಬಳಿಕ ಆ ಚಿಂತನೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ.