ಬೆಂಗಳೂರು: ಬಿಪಿಎಲ್ ಕುಟುಂಬಗಳಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ಅಂಗಾಂಗ ಕಸಿ ಯೋಜನೆ’ಯಡಿ ನಾರಾಯಣ ಹೆಲ್ತ್ ಸಿಟಿಯಲ್ಲಿ ನಡೆದ ಮೊದಲ ಹೃದಯ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಹೃದಯ ಸಮಸ್ಯೆಯಿಂದ ಬಾಗಲಕೋಟೆಯ ನಿವಾಸಿ ಸಂಜು ಹೊಸಮನಿ (39) ಎಂಬುವವರು ನಾರಾಯಣ ಹೆಲ್ತ್ ಸಿಟಿಯಲ್ಲಿ ದಾಖಲಾಗಿದ್ದರು. ಅವರಿಗೆ ಹೃದಯ ಕಸಿ ಅಗತ್ಯವಿತ್ತು. ಧರ್ಮ (28) ಎಂಬ ಯುವಕನೊಬ್ಬ ಅಪಘಾತದಿಂದ ಮೃತನಾಗಿದ್ದು, ಅವರ ಹೃದಯವನ್ನು ಶನಿವಾರ ಸಂಜು ಎಂಬುವವರಿಗೆ ಹೃದಯ ಕಸಿ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಹೃದಯ ಕಸಿ ಕಾರ್ಯ ಯಶಸ್ವಿಯಾದ ಹಿನ್ನೆಲೆ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರು ಭೇಟಿ ನೀಡಿ ರೋಗಿಯ ಆರೋಗ್ಯ ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ಕಸಿ ಯಶಸ್ವಿಯಾಗಿದ್ದು ಯುವಕ ಆರೋಗ್ಯವಾಗಿದ್ದಾನೆ. ಸರ್ಕಾರ 10 ಲಕ್ಷ ರೂ. ವೆಚ್ಚ ಭರಿಸಿದೆ. ಅಂಗಾಂಗ ಕಸಿ ಯೋಜನೆಯಡಿ ಖಾಸಗಿ ಆಸ್ಪತ್ರೆಯಲ್ಲಿಯೂ ಉಚಿತವಾಗಿ ಬಡವರು ಅಂಗಾಂಗ ಕಸಿ ಮಾಡಿಸಿಕೊಳ್ಳಬಹುದು. ಅಂಗಾಂಗ ಕಸಿ ಅಗತ್ಯವಿರುವ ಪ್ರತಿಯೊಬ್ಬರು ಸರ್ಕಾರದ ಸೌಲಭ್ಯವನ್ನ ಉಪಯೋಗ ಮಾಡಿಕೊಳ್ಳಬೇಕು ಎಂದರು.
ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಆದ್ದರಿಂದ ಇಲಾಖೆಯ ವತಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವೈದ್ಯಾಧಿಕಾರಿಗಳು ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಡೆಂಘೀ ಹಾವಳಿ ಹೆಚ್ಚಾಗಿರುವ ಕಾರಣದಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಿಬಿಎಂಪಿಗೆ ತಿಳಿಸಲಾಗಿದೆ. ರಾಜ್ಯದಲ್ಲಿ ಔಷಧಿಗಳ ಕೊರತೆ ಉಂಟಾಗಿಲ್ಲ. ಎಲ್ಲಾ ಆಸ್ಪತ್ರೆಗಲ್ಲೂ ಔಷಧ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗಿದೆ. ಕೊರತೆ ಇದ್ದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ಕೂಡಲೇ ತರಬಹುದು ಎಂದು ಅವರು ತಿಳಿಸಿದರು.
ಏನಿದು ಅಂಗಾಂಗ ಕಸಿ ಯೋಜನೆ?: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಗಳ ಅಂಗಾಂಗ ಕಸಿಗೆ ಸರ್ಕಾರವೇ ವೆಚ್ಚ ಭರಿಸಲಿದೆ. ರಾಜ್ಯ ಸರ್ಕಾರ 2018 ಡಿಸೆಂಬರ್‌ನಲ್ಲಿ ಬಡವರಿಗಾಗಿ ರಾಜ್ಯ ಅಂಗಾಂಗ ಕಸಿ ಯೋಜನೆ ಆರಂಭಿಸಿ ಅನುದಾನ ಮೀಸಲಿಟ್ಟಿದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಈ ಯೋಜನೆಯ ನಿರ್ವಹಣೆ ಮಾಡುತ್ತಿದೆ. ಉಚಿತವಾಗಿ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡಿಸಿಕೊಳ್ಳಬಹುದಾಗಿದೆ. ಈ ಯೋಜನೆಯಡಿ ಇದುವರೆಗೂ ಐದು ಮಂದಿ ಕಿಡ್ನಿ ಕಸಿ ಹಾಗೂ ಒಬ್ಬರು ಹೃದಯ ಕಸಿ ಸೇರಿದಂತೆ ಆರು ಮಂದಿ ಅಂಗಾಂಗ ಕಸಿ ಶಸಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಅಂಗಾಂಗ ಕಸಿಗೆ ಹಣದ ನೆರವು ಎಷ್ಟು?
-ಕಿಡ್ನಿ ಕಸಿ – 2 ಲಕ್ಷ ರೂ. ಹಾಗೂ ಔಷಧ ವೆಚ್ಚ 1 ಲಕ್ಷ ರೂ.
-ಹೃದಯ ಕಸಿ – 10 ಲಕ್ಷ ರೂ. ಹಾಗೂ ಔಷಧ ವೆಚ್ಚ 1 ಲಕ್ಷ ರೂ.
-ಯಕೃತ್ (ಲಿವರ್) ಕಸಿ – 11 ಲಕ್ಷ ರೂ. ಹಾಗೂ ಔಷಧ ವೆಚ್ಚ 1 ಲಕ್ಷ ರೂ.