ಹೂವಿನಹಡಗಲಿ: ಕೇವಲ ಉದ್ಯೋಗ ಸೃಷ್ಟಿಯೊಂದೇ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಪ್ರಮುಖ ಉದ್ದೇಶವಲ್ಲ. ಆದರ ಜತೆಯಲ್ಲಿ ಪರಿಸರ ಕಾಳಜಿ, ಪ್ರಕೃತಿ ಸಂರಕ್ಷಣೆ ಮುಂತಾದ ಮನುಷ್ಯ ಜೀವನ ಪ್ರೀತಿಯ ಯೋಜನೆಗಳು ಸಹ ಸೇರಿರುತ್ತವೆ ಎಂಬುದಕ್ಕೆ ತಾಲೂಕಿನ ಸೋವೇನಹಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಇಕೋ ಪಾರ್ಕ್ ಸಾಕ್ಷಿಯಾಗುತ್ತಿದೆ.
ಇಕೋ ಪಾರ್ಕ್‌ಗೆ ಸರ್ಕಾರದಿಂದ ಈಗಾಗಲೇ ಸುಮಾರು 1.16 ಕೋಟಿ ರೂ. ಮಂಜೂರಾತಿ ದೊರಕಿದ್ದು, ಇದಕ್ಕಾಗಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಬಳಿ ಸುಮಾರು 27 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ನರೇಗಾ ಯೋಜನೆಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ.
ಸಾಮಾನ್ಯ ಜನರಲ್ಲಿ ಹಸಿರಿನ ಬಗ್ಗೆ ಜಾಗೃತಿ ಮೂಡಿಸುವುದು, ವಿವಿಧ ರೀತಿಯ ಗಿಡ, ಬಳ್ಳಿ ಬೆಳೆಸಿ ಸುಂದರ ಪ್ರಕೃತಿಯ ರಮ್ಯ ತಾಣವನ್ನಾಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ರೈತ ಸಂಜೀವಿನಿ ಯೋಜನೆಯಾದ ಕೃಷಿ ಹೊಂಡದ ಮೂಲಕ ಹಳೇ ಕಾಲದ ಪುಷ್ಕರಣಿ ಹೋಲುವ ರೀತಿಯಲ್ಲಿ ರೈತರ ಹಳೇ ಬಾವಿ ನವೀಕರಿಸಿ ಜಲಮೂಲ ಸಂರಕ್ಷಣೆ ಮಾಡುವುದು ಯೋಜನೆಯ ಪ್ರಮುಖ ಆಂಶವಾಗಿದೆ.
ನಿರ್ವಹಣೆ ಹೇಗೆ?: ಯೋಜನೆ ಪೂರ್ಣಗೊಂಡ ಬಳಿಕ ಯೋಜನೆಯ ನಿರ್ವಹಣೆ ಹೊಣೆಯನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಿ ಅದರಿಂದ ಬರುವ ಆದಾಯದಲ್ಲಿ ಇಂತಿಷ್ಟು ಪ್ರಮಾಣದಲ್ಲಿ ಸರ್ಕಾರಕ್ಕೆ, ಉಳಿದಷ್ಟು ಸ್ವಸಹಾಯ ಗುಂಪುಗಳ ನಿರ್ವಹಣೆಗೆ ನೀಡಲಾಗುವುದು. ಪಾರ್ಕ್‌ನಲ್ಲಿ ಕರಡಿಧಾಮ ರೀತಿಯಲ್ಲಿ ಕರಡಿಗಳ ಭಾವಚಿತ್ರವನ್ನು ಸಿಮೆಂಟ್‌ನಲ್ಲಿ, ಉಳಿದಂತೆ ಆಟಿಕೆ ಸಾಮಾನುಗಳನ್ನು ಅಳವಡಿಸಲಾಗುವುದು. ಮಲ್ಲಿಗೆ ಸೇರಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಯಲು ಯೋಜನೆ ರೂಪಿಸಲಾಗಿದೆ.
ಲೋಕಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಭಾರಿ ಐಎಎಸ್ ಅಧಿಕಾರಿ ನಂದಿನಿ ಸೋವೇನಹಳ್ಳಿ ಗ್ರಾಮದ ಯೋಜನೆ ಪ್ರದೇಶಕ್ಕೆ ಭೇಟಿ ನೀಡಿ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೋಜನೆಯ ವೆಚ್ಚ ಹೆಚ್ಚಾದರೂ ಪರವಾಗಿಲ್ಲ. ಸರ್ಕಾರದಿಂದ ಅನುದಾನ ಪಡೆಯಬಹುದು. ಯೋಜನೆಯನ್ನು ಕಾರ್ಯರೂಪಕ್ಕೆ ತನ್ನಿ ಎಂದು ಕಿವಿ ಮಾತು ಹೇಳಿದ್ದಾರೆ.
ರಾಜ್ಯದಲ್ಲಿ ಇದು ಪ್ರಥಮ ಇಕೋ ಪಾರ್ಕ್ ಆಗಿದ್ದು, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಯೋಜನೆ ರೂಪುಗೊಂಡಿದೆ. ಅದೇ ಮಾದರಿಯಲ್ಲಿ ಯೋಜನೆ ರೂಪುಗೊಳ್ಳುತ್ತಿದೆ. ಪ್ಲಾಸ್ಟಿಕ್ ಹಾಗೂ ಕಬ್ಬಿಣ ವಸ್ತುಗಳ ಬಳಕೆ ನಿಷೇಧಿಸಿರುವುದು ಇಲ್ಲಿನ ವಿಶೇಷ. ಪ್ರಕೃತಿ ಕುರಿತು ಜಾಗೃತಿ ಮೂಡಿಸುವ ಯೋಜನೆ ಇದಾಗಿದ್ದು, ಹಳೆ ಕಾಲದ ಜನಜೀವನ ಪರಿಚಯಿಸುವ ಯೋಜನೆ ಇದಾಗಿದೆ.
-ಯು.ಎಚ್.ಸೋಮಶೇಖರ್, ತಾಪಂ ಇಒ.
* ವಿಶ್ವನಾಥ ಹಳ್ಳಿಗುಡಿ