Advertisement

ಡಿಸೆಂಬರ್‌ನಲ್ಲಿ ಪ್ರಕಾಶಕರಮೊಟ್ಟಮೊದಲ ಸಮ್ಮೇಳನ

01:58 PM Sep 14, 2017 | |

ಬೆಂಗಳೂರು: ರಾಜ್ಯದ ನೋಂದಾಯಿತ ಪ್ರಕಾಶಕರ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಪ್ರಕಾಶಕರ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ತಿಳಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ರಾಧಿಕಾರದಲ್ಲಿ ನೋಂದಾಯಿತ 461 ಪ್ರಕಾಶಕರನ್ನು ಒಟ್ಟು ಸೇರಿಸಿ ಬೆಂಗಳೂರಿನಲ್ಲಿ ಒಂದು ದಿನದ ಪ್ರಕಾಶಕರ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ವಿಶ್ವ ಕನ್ನಡ ಸಮ್ಮೇಳನ ಮತ್ತು ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೊಂದರೆಯಾಗದಂತೆ ಡಿಸೆಂಬರ್‌ನಲ್ಲಿ ಪ್ರಕಾಶಕರ ಸಮ್ಮೇಳನ ಆಯೋಜಿಸುವುದಾಗಿ ತಿಳಿಸಿದರು. ರಾಜ್ಯದಲ್ಲಿ ಕರಡಚ್ಚು ಓದುವವರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಹಸ್ತಪ್ರತಿ, ಕರಡಚ್ಚು ತಿದ್ದುವುದು ಸೇರಿದಂತೆ ಪುಸ್ತಕ ಪ್ರಕಾಶನಕ್ಕೆ ಅಗತ್ಯವಿರುವ ವಿಷಯಗಳ ಕುರಿತು ಮಹಿಳೆಯರಿಗಾಗಿ ಶಿಬಿರ ನಡೆಸಲು ಉದ್ದೇಶಿಸಲಾಗಿದೆ. ಜತೆಗೆ ರಾಜ್ಯದ ವಿವಿಧ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಕಾಶನದ ವಿವಿಧ ಹಂತಗಳಾದ ಹಸ್ತಪ್ರತಿಯಿಂದ ಆರಂಭಿಸಿ ಡಿಟಿಪಿ, ಕರಡಚ್ಚು ತಿದ್ದುವುದು, ಪುಸ್ತಕ ಪ್ರಕಟಣೆ, ಪ್ರಕಾಶನ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಡಿಪ್ಲೊಮೋ ಅಥವಾ ಸರ್ಟಿಫಿಕೇಟ್‌ ಕೋರ್ಸ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು
ಹೇಳಿದರು. 

ರಾಜ್ಯದಲ್ಲಿ ಪುಸ್ತಕಗಳತ್ತ ಓದುಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಾಧಿಕಾರ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ. ಬೀದರ್‌ ನಿಂದ ಕೊಡಗುವರೆಗೆ ಪುಸ್ತಕ ಜಾಥಾ ನಡೆಸಲು ಉದ್ದೇಶಿಸಲಾಗಿದ್ದು, ರಾಜ್ಯದ ಪ್ರಮುಖ ನಗರಗಳ ಜನನಿಬೀಡ ಪ್ರದೇಶಗಳಲ್ಲಿ ಜಾಥಾ ಆಯೋಜಿಸಲಾಗುವುದು. ಇನ್ನು ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆ ವತಿಯಿಂದ ಗ್ರಾಮೀಣ ಭಾಗದಲ್ಲಿ ಪುಸ್ತಕ ತಲುಪುವಂತೆ ಮಾಡುವುದು ಹಾಗೂ ಆನ್‌ಲೈನ್‌ನಲ್ಲಿ ಪುಸ್ತಕ ಮಾರಾಟಕ್ಕೆ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ವೆಬ್‌ಸೈಟ್‌ ಉನ್ನತೀಕರಣ : ಪ್ರಾಧಿಕಾರದ ವೆಬ್‌ಸೈಟ್‌ ಅನ್ನು ಪ್ರಸಕ್ತ ವಿದ್ಯಾಮಾನಕ್ಕೆ ತಕ್ಕಂತೆ ಉನ್ನತೀಕರಿಸಲು ಮತ್ತು ಸಾಮಾಜಿಕ ಜಾಲತಾಣಗಳನ್ನು ಪುಸ್ತಕಾಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ. ಜತೆಗೆ
ಪುಸ್ತಕೋದ್ಯಮವು ಹುಟ್ಟಿ ಅಭಿವೃದ್ಧಿ ಹೊಂದಿದ ಬಗ್ಗೆ ಸಾದ್ಯಂತವಾಗಿ ನಿರೂಪಿಸುವ ಗ್ರಂಥವೊಂದನ್ನು ಪ್ರಕಟಿಸಲು ಯೋಜಿಸಲಾಗಿದ್ದು, ಸಮಿತಿಯೊಂದನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದರು. 

ಈ ಬಾರಿ ದಸರಾ ಮೇಳದಲ್ಲಿ 50 ಮಳಿಗೆ ಆರಂಭಿಸಲಾಗುತ್ತಿದೆ. 8 ದಿನಗಳ ಮೇಳಕ್ಕೆ ಉಚಿತ ಮಳಿಗೆಗಳನ್ನು ನೀಡುತ್ತಿದ್ದು, ಪ್ರಾಧಿಕಾರದ ಮಳಿಗೆಗಳಲ್ಲಿ ಶೇ.30ರಿಂದ 50ರಷ್ಟು ರಿಯಾಯಿತಿ ನೀಡಲಾಗುವುದು.
ಡಾ.ವಸುಂಧರಾ ಭೂಪತಿ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ 

Advertisement
Advertisement

Udayavani is now on Telegram. Click here to join our channel and stay updated with the latest news.

Next