ಬೆಂಗಳೂರು: ಹಿಂದೂ ಯುವತಿಯನ್ನು ಪ್ರೀತಿಸಿ ನಿಯಮ ಬಾಹಿರವಾಗಿ ಇಸ್ಲಾಂಗೆ ಮತಾಂತರಿಸಿದ ಆರೋಪದಲ್ಲಿ ಯಶವಂತಪುರ ಬಿಕೆ ನಗರದ ನಿವಾಸಿ ಸಯ್ಯದ್ ಮುಯೀನ್ (23) ಎಂಬಾತನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಬೆಂಗಳೂರಿನಲ್ಲಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.
ಉತ್ತರ ಪ್ರದೇಶದ ಗೋರಖ್‌ಪುರ ಮೂಲದ 19 ವರ್ಷದ ಯುವತಿಯ ತಂದೆ ನಗರದಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, 15 ವರ್ಷಗಳಿಂದ ಬಿ.ಕೆ.ನಗರದಲ್ಲಿ ವಾಸವಿದ್ದಾರೆ. ಅದೇ ವ್ಯಾಪ್ತಿಯಲ್ಲಿ ಚಿಕನ್ ಅಂಗಡಿ ಇಟ್ಟುಕೊಂಡಿದ್ದ ಸಯ್ಯದ್ 6 ತಿಂಗಳ ಹಿಂದೆ ಯುವತಿಗೆ ಪ್ರೇಮ ನಿವೇದನೆ ಮಾಡಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿದ್ದರು. ಬಳಿಕ ಮತಾಂತರವಾದರೆ ಮಾತ್ರ ಮಾತ್ರ ವಿವಾಹವಾಗುವುದಾಗಿ ಸಯ್ಯದ್ ಹೇಳಿದ್ದ.
ಅ.5ರಂದು ಅಂಗಡಿಗೆ ಹೋಗಿ ಬರುವುದಾಗಿ ತೆರಳಿದ್ದ ಯುವತಿ ನಾಪತ್ತೆಯಾಗಿದ್ದು, ಹೆತ್ತವರು ದೂರು ದಾಖಲಿಸಿದ್ದರು. ವಾರದ ಬಳಿಕ ಆಕೆ ಬುರ್ಖಾ ಧರಿಸಿ ಮನೆಗೆ ಆಗಮಿಸಿದ್ದಳು. ಈ ಬಗ್ಗೆ ಆರೋಪಿ ವಿರುದ್ಧ ದೂರು ದಾಖಲಿಸಲಾಗಿತ್ತು. ಪೊಲೀಸರು ಸಯ್ಯದ್‌ನನ್ನು ಕರೆಸಿ ವಿಚಾರಿಸಿದಾಗ, ಆಂಧ್ರದ ಪೆನುಕೊಂಡ ದಲ್ಲಿರುವ ಮಸೀದಿಯೊಂದಕ್ಕೆ ಕರೆದೊಯ್ದು ಯುವತಿಯನ್ನು ಮತಾಂತರಿಸಿರುವ ಬಗ್ಗೆ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮತಾಂತರ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಮತಾಂತರ ಅಧಿಕೃತ ಹೇಗೆ ?
ಮತಾಂತರ ನಿಷೇಧ ಕಾಯ್ದೆಯನ್ವಯ ಮತಾಂತರ ಪ್ರಕ್ರಿಯೆಗೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಮತಾಂತರವಾಗುವ ವ್ಯಕ್ತಿ ಮೊದಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಬಳಿಕ ಜಿಲ್ಲಾಧಿಕಾರಿ ಆ ವ್ಯಕ್ತಿಯ ಪಾಲಕರು ಹಾಗೂ ಆಪ್ತರ ಅಭಿಪ್ರಾಯ ಪಡೆದು 30 ದಿನಗಳ ಗಡುವು ನೀಡುತ್ತಾರೆ. ಯಾವುದೇ ತಕರಾರು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಡೆಯಿಂದ ಅನುಮತಿ ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ನಿಯಮ ಪಾಲಿಸಿಲ್ಲ ಎಂದು ತಿಳಿದು ಬಂದಿದೆ.
ಮುಸ್ಲಿಮರು ಬಲವಂತದ ಮತಾಂತರ ಮಾಡುವುದಿಲ್ಲ ಎಂಬ ವಾದ ಸುಳ್ಳಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಮೇಲೆ ಇದು ಮೊದಲ ಪ್ರಕರಣವಾಗಿದೆ.
-ಆರ್. ಅಶೋಕ್, ಕಂದಾಯ ಸಚಿವ