Advertisement

ಮಹಿಳೆಗೊಲಿದ ಮೊದಲ ಬೋಗಿ

10:54 AM Feb 15, 2018 | |

ಬೆಂಗಳೂರು: ನಮ್ಮ ಮೆಟ್ರೋ ರೈಲಿನ ಮೊದಲ ಬೋಗಿಯ ಪ್ರವೇಶ ಮತ್ತು ನಿರ್ಗಮನವನ್ನು ಮಹಿಳೆಯರಿಗಾಗಿ ಮೀಸಲಿಡಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ನಿರ್ಧರಿಸಿದೆ. ಮಾರ್ಚ್‌ 1ರಿಂದ ಎಲ್ಲ ಮೆಟ್ರೋ ರೈಲುಗಳ ಲೋಕೊ ಪೈಲಟ್‌ (ಚಾಲಕ) ಆಸನದ ಹಿಂಭಾಗಕ್ಕೆ ಹೊಂದಿಕೊಂಡಿರುವ ಬೋಗಿಯ ಎರಡು ದ್ವಾರಗಳನ್ನು ಮಹಿಳೆಯರ ಪ್ರವೇಶ ಮತ್ತು ನಿರ್ಗಮನಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ.

Advertisement

ಪ್ರಾಯೋಗಿಕವಾಗಿ ಈ ವ್ಯವಸ್ಥೆ ಜಾರಿಗೊಳಿಸುತ್ತಿ ರುವುದಾಗಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದ್ದಾರೆ. ಬಿಇಎಂಎಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮೂರು ಹೆಚ್ಚುವರಿ ಮೆಟ್ರೋ ಬೋಗಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಪೀಕ್‌ ಅವರ್‌’ನಲ್ಲಿ ಮೆಟ್ರೋ ತುಂಬಿತುಳುಕುತ್ತದೆ. ಇಂಥ ಸಂದರ್ಭದಲ್ಲಿ ಎಷ್ಟೋ ಮಹಿಳಾ ಪ್ರಯಾಣಿಕರಿಗೆ ರೈಲು ಏರಲೂ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೂರು ಬೋಗಿಗಳ ಪೈಕಿ ಮೊದಲ ಒಂದು ಬೋಗಿಯನ್ನು ಮಹಿಳೆಯರ ಪ್ರವೇಶಕ್ಕೆ ಮೀಸಲಿಡಲಾಗುವುದು. ಉಳಿದ ಬೋಗಿಗಳಲ್ಲೂ ಮಹಿಳೆಯರು ರೈಲು ಹತ್ತಲು, ಇಳಿಯಲು ಅವಕಾಶ
ಇರುತ್ತದೆ. ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾದರೆ, ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

ಆದರೆ, ಸದ್ಯಕ್ಕೆ ಈ ಬೋಗಿಯ ಎರಡೂ ದ್ವಾರಗಳು ಮಹಿಳೆಯರ ಪ್ರವೇಶ ಮತ್ತು ನಿರ್ಗಮನಕ್ಕೆ ಮಾತ್ರ ನಿಗದಿಪಡಿಸಲಾಗಿದೆ. ಈ ಬೋಗಿಯಲ್ಲಿ ಪುರುಷ ಪ್ರಯಾಣಿಕರು ಓಡಾಡಲು ಅವಕಾಶ ಇರುತ್ತದೆ. ಆರು ಬೋಗಿಗಳ ಮೆಟ್ರೋ ಸೇವೆ ಆರಂಭಗೊಂಡ ನಂತರ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಮೀಸಲಿಡಲಾಗುವುದು ಎಂದು ಮಹೇಂದ್ರ ಜೈನ್‌ ಸ್ಪಷ್ಟಪಡಿಸಿದರು. ಏಪ್ರಿಲ್‌ ಅಂತ್ಯಕ್ಕೆ ಹೊಸ ಬೋಗಿ?: ಪ್ರಸ್ತುತ ನಮ್ಮ ಮೆಟ್ರೋದಲ್ಲಿ ನಿತ್ಯ ಸುಮಾರು ನಾಲ್ಕು ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, ಏಪ್ರಿಲ್‌ ಅಂತ್ಯಕ್ಕೆ ಇದು ದುಪ್ಪಟ್ಟಾಗಲಿದೆ.

ಕಾರಣ, ಬಿಇಎಂಎಲ್‌ನಿಂದ ಬಿಎಂಆರ್‌ಸಿಗೆ ಬುಧವಾರ ಹೆಚ್ಚುವರಿ ಮೂರು ಬೋಗಿಗಳು ಹಸ್ತಾಂತರಗೊಂಡಿದ್ದು, ಏಪ್ರಿಲ್‌ ಕೊನೆ ವೇಳೆಗೆ ಈ ಬೋಗಿಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಸಾರ್ಧಯತೆಯಿದೆ. ಬೋಗಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌, ಹಸ್ತಾಂತರಗೊಂಡ ಬೋಗಿಗಳು ಗುರುವಾರದಿಂದ ಎರಡು ತಿಂಗಳು ಪರೀಕ್ಷಾರ್ಥ ಸಂಚಾರ ಮಾಡಲಿವೆ. ನಂತರ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮೋದನೆ ಪಡೆದು, ಮೈಸೂರು ರಸ್ತೆ-ಬೈಯಪ್ಪನಹಳ್ಳಿ ನಡುವಿನ ರೈಲಿಗೆ ಹೆಚ್ಚುವರಿ ಬೋಗಿ ಜೋಡಿಸಲಾಗುವುದು. ಆರುಬೋಗಿಗಳ ರೈಲು “ಪೀಕ್‌ ಅವರ್‌’ನಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ಮಾತನಾಡಿ, ನಗರದ ಒಂದು ಕೋಟಿ ಜನರಿಗೆ ಬಿಇಎಂಎಲ್‌ ಪ್ರೇಮಿಗಳ ದಿನಾಚರಣೆಯಂದು ಪ್ರೀತಿಯ ಕೊಡುಗೆಯಾಗಿ ಈ ಬೋಗಿಗಳನ್ನು ನೀಡಿದೆ. ಇದರಿಂದ ಸಾರ್ವಜನಿಕ ಸಾರಿಗೆ ಮತ್ತಷ್ಟು ಆರಾಮದಾಯಕ ಆಗಲಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌, ಶಾಸಕರಾದ ಎಸ್‌. ರಘು, ಎಂ.
ನಾರಾಯಣಸ್ವಾಮಿ, ಬಿಇಎಂಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ.ಕೆ. ಹೋಟಾ, ಬಿಇಎಂಎಲ್‌ ನೌಕರರ ಅಸೋಸಿಯೇಷನ್‌ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ್‌ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.  

Advertisement

19ರ ಜೂನ್‌ಗೆ ಎಲ್ಲ ರೈಲಲ್ಲೂ 6 ಬೋಗಿ
2019ರ ಜೂನ್‌ ವೇಳೆಗೆ “ನಮ್ಮ ಮೆಟ್ರೋ’ದ ಎಲ್ಲ ರೈಲುಗಳು ಆರು ಬೋಗಿ ಹೊಂದಲಿವೆ ಎಂದು ಸಚಿವ ಕೆ.ಜೆ.
ಜಾರ್ಜ್‌ ತಿಳಿಸಿದರು. ಬಿಇಎಂಎಲ್‌ಗೆ 150 ಹೆಚ್ಚುವರಿ ಬೋಗಿಗಳಿಗೆ ಬೇಡಿಕೆ ಇಡಲಾಗಿತ್ತು. ಆ ಪೈಕಿ ಮೊದಲ  ಹಂತವಾಗಿ 3 ಬೋಗಿಗಳು ಹಸ್ತಾಂತರಗೊಂಡಿದ್ದು, ಉಳಿದ 147 ಬೋಗಿಗಳು 2019ರ ಜೂನ್‌ ಅಂತ್ಯದೊಳಗೆ ಸೇರ್ಪಡೆಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಪ್ರತಿ ಹಂತದಲ್ಲೂ ಪರೀಕ್ಷೆ ಮತ್ತು ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯುವ ಅವಶ್ಯಕತೆ ಇರುವುದಿಲ್ಲ. ಮೊದಲ ಮೂರು ಬೋಗಿಗಳಿಗೆ ಅನುಮತಿ ಪಡೆದರೆ ಸಾಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗಿರುವ ಬೋಗಿಗಳಿಗೂ ಹಾಗೂ ಸೇರ್ಪಡೆಗೊಳ್ಳುವ ಬೋಗಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಮಾಹಿತಿ ನೀಡಿದರು. 

ಎರಡು ತಿಂಗಳಲ್ಲಿ 3 ಹೆಚ್ಚುವರಿ ಬೋಗಿ ಸೇರ್ಪಡೆ
ಪೀಕ್‌ ಅವರ್‌ನಲ್ಲಿ ರೈಲು ತಪ್ಪಿಸಿಕೊಳ್ಳುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಉದ್ದೇಶ
ಮೊದಲ ಬೋಗಿಯ ಒಳಗೆ ಪುರುಷ ಪ್ರಯಾಣಿಕರು ಸಂಚರಿಸ ಬಹುದು
 ಆದರೆ, ಒಂದನೇ ಬೋಗಿ ದ್ವಾರಗಳ ಮೂಲಕ ಪುರುಷರ ಪ್ರವೇಶ ನಿಷಿದ್ಧ 
„ ಉಳಿದ ಬೋಗಿಗಳ ದ್ವಾರಗಳ ಮೂಲಕ ಸ್ತ್ರೀಯರು ಪ್ರವೇಶಿ ಸಲು ಅಡ್ಡಿಯಿಲ್ಲ
„ ಹೆಚ್ಚುವರಿ ಬೋಗಿಗಳ ಸೇರ್ಪಡೆ ನಂತರ ಮಹಿಳೆಯರಿಗೆ ಪ್ರತ್ಯೇಕ ಬೋಗಿ

Advertisement

Udayavani is now on Telegram. Click here to join our channel and stay updated with the latest news.

Next