ಧಾರವಾಡ: ಆಯಾ ಕಾಲಮಾನಕ್ಕೆ ತಕ್ಕಂತ ಆವಿಷ್ಕಾರ ಮಾಡಲು ಹೊಸ ಕಲ್ಪನೆ, ಚಿಂತನೆಯನ್ನು ವಿಜ್ಞಾನಿಗಳು ಮಾಡುವ ಅಗತ್ಯವಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ನಗರದ ಕವಿಸಂನಲ್ಲಿ ಹಮ್ಮಿಕೊಂಡಿದ್ದ ಡಾ| ಎಸ್.ಟಿ. ನಂದಿಬೇವೂರ ದತ್ತಿ ಉದ್ಘಾಟನೆ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಲೋಕಕಲ್ಯಾಣಕ್ಕಾಗಿ ಬೇಕಾದಂಥ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆವಿಷ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎಂದರು. ಜಗತ್ತಿನ ಎಲ್ಲ ರಾಷ್ಟ್ರಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಮ್ಮ ದೇಶದ ವಿಶಿಷ್ಟ ಕೊಡುಗೆ ಅದ್ವಿತೀಯ. ಆರ್ಯಭಟ, ಭಾಸ್ಕರ ಉಡಾವಣೆ ಯಶಸ್ವಿಯಾಗುವಲ್ಲಿ ಭಾರತದ ವಿಜ್ಞಾನಿಗಳು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ.
ಮಾನವನ ಸಹಜವಾದ ನಡವಳಿಕೆ ಕಲ್ಪನೆಗೂ ಮೀರಿ ವಿಮಾನ ಕಂಡು ಹಿಡಿದು ರೈಟ್ಸ್ ಸಹೋದರರನ್ನು ಶ್ಲಾಘಿಸಿದ ಅವರು, ಅವರ ಸಾಧನೆಯಂತೆ ಇತರ ವಿಜ್ಞಾನಿಗಳ ಸಾಧನೆಯೂ ಮಾನವ ಕುಲಕ್ಕೆ ಪೂರಕವಾಗುವಂತಿರಬೇಕು ಎಂದರು. ಡಾ| ಬಿ.ಆರ್. ಹಾವಿನಾಳೆ ಮಾತನಾಡಿ, ಸ್ವಾರ್ಥ ಜೀವನ ಮತ್ತು ಸಾರ್ಥಕ ಜೀವನ ನಡೆಸುವ ಪ್ರಕ್ರಿಯೆ ನಮ್ಮ ಕೈಯಲ್ಲಿಯೇ ಇದೆ.
ಪರರ ಹಿತಕ್ಕಾಗಿ ದುಡಿಯುವ ಸ್ವಭಾವ ಇದ್ದರೆ ಸಮಾಜಕ್ಕೆ, ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಕುಲಪತಿ ಡಾ| ಎಸ್.ಕೆ. ಸೈದಾಪುರ ಮಾತನಾಡಿ, ಸಂಶೋಧನೆ ಮಾಡುವವರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು.
ಉತ್ತಮ ಗುಣಮಟ್ಟದ ಪ್ರಬಂಧಗಳು ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಚರ್ಚೆಯಾಗಿ ಆಯಾ ದೇಶಗಳಿಗೆ ಅನುಕೂಲ ಆಗುವಂತಿರಬೇಕು ಎಂದರು. ಯುವ ವಿಜ್ಞಾನಿ ಪ್ರಶಸ್ತಿ ಸ್ವೀಕರಿಸಿದ ಆಶಿಸ ಆನಂದ ಅನಿಸಿಕೆ ಹಂಚಿಕೊಂಡರು. ಡಾ| ಎಸ್. ಟಿ. ನಂದಿಬೇವೂರ ಹಾಗೂ ದತ್ತಿದಾನಿಗಳ ಪರವಾಗಿ ಅರುಣಾ ನಂದಿಬೇವೂರ ಮಾತನಾಡಿದರು.
ದೇವರಹುಬ್ಬಳ್ಳಿಯ ಸಿದ್ಧಾಶ್ರಮದ ಶ್ರೀ ಸಿದ್ಧ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಕಾರ್ಯಾಧ್ಯಕ್ಷ ಡಾ| ಡಿ.ಎಂ.ಹಿರೇಮಠ ಇದ್ದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಅರ್ಚನಾ ನಂದಿಬೇವೂರ ಸ್ವಾಗತಿಸಿದರು. ಶ್ರದ್ಧಾ ಮೂರಶಿಳ್ಳಿ ಪ್ರಾರ್ಥಿಸಿದರು. ಡಾ| ಶಿವಕುಮಾರಗೌಡ ಪಾಟೀಲ ವಂದಿಸಿದರು.