Advertisement

ನೋಟು ಅಮಾನ್ಯದಿಂದ ನೆಲಕಚ್ಚಿದ ಆರ್ಥಿಕ ವ್ಯವಸ್ಥೆ

12:09 PM Sep 02, 2017 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ನೋಟು ಅಮಾನ್ಯ ಕ್ರಮದಿಂದ ಕಪ್ಪು ಹಣ ಪತ್ತೆಯಾಗಿಲ್ಲ. ಬದಲಿಗೆ ಇಡೀ ದೇಶದ ಆರ್ಥಿಕ ವ್ಯವಸ್ಥೆ ನೆಲಕಚ್ಚಿದೆ ಎಂದು ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಕಳೆದ ವರ್ಷ ನ.8ರಂದು ರಾತ್ರೋರಾತ್ರಿ ನೋಟು ಅಮಾನ್ಯಗೊಳಿಸಿದರು.

Advertisement

ಈ ಕ್ರಮದಿಂದ ಕೋಟ್ಯಾಂತರ ರೂ. ಕಪ್ಪು ಹಣ ಹೊರಬರುತ್ತದೆ. ಕಪ್ಪು ಹಣ ಮಟ್ಟಹಾಕಿದರೆ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದು ಎಂದು ಹೇಳಿದ್ದರು. ಆದರೆ, ಅದೆಲ್ಲ ಸುಳ್ಳು ಎನ್ನುವುದು ಈಗಾಗಲೆ ಸಾಬೀತಾಗಿದೆ. ನೋಟು ಅಮಾನ್ಯದಿಂದ ಕಪ್ಪು ಹಣ ಹೊರ ಬರಲಿಲ್ಲ. ಬದಲಾಗಿ ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದು, ಬಡವರು ಕಷ್ಟಪಡಬೇಕಾಯಿತು ಎಂದು ತಿಳಿಸಿದರು. 

ನೋಟು ಅಮಾನ್ಯಗೊಳಿಸಿದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರು ಇದರಿಂದ ದೇಶದ ಜಿಡಿಪಿ ಕನಿಷ್ಠ ಶೇ.2ರಷ್ಟು ಮಟ್ಟಕ್ಕೆ ಕುಸಿಯುತ್ತದೆ ಎಂದು ಹೇಳಿದ್ದರು. ಅದೇ ರೀತಿ ಎನ್‌ಡಿಎ ಸರ್ಕಾರದ 40 ತಿಂಗಳ ಅವಧಿಯಲ್ಲಿ ಜಿಡಿಪಿ ಪ್ರಮಾಣ ಅದಕ್ಕಿಂತಲೂ ಹೆಚ್ಚಾಗಿಯೇ ಕುಸಿತ ಕಂಡಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ವ್ಯವಸ್ಥೆಯೇ ಹಳಿ ತಪ್ಪಿದಂತಾಗಿದೆ. ಇದನ್ನು ಸುಧಾರಿಸುವುದು ಅಷ್ಟು ಸುಲಭವಲ್ಲ. ಕೇಂದ್ರ ಸರ್ಕಾರ ಏನೇ ಕ್ರಮ ಕೈಗೊಂಡರೂ ಈಗಿನ ಜಿಡಿಪಿ ಹೆಚ್ಚು ಏರಿಕೆಯಾಗಲು ಸಾಧ್ಯವಿಲ್ಲ ಎಂದರು.

ಏನೂ ಸಾಧಿಸಿಲ್ಲ: ಕೇಂದ್ರ ಸರ್ಕಾರ ನೋಟು ಅಮಾನ್ಯದಿಂದ ಏನನ್ನೂ ಸಾಧಿಸಲಿಲ್ಲ. ಬದಲಾಗಿ ಬಡ ಜನರು ಹಣವಿಲ್ಲದೆ ಒದ್ದಾಡುವಂತಾಗಿತ್ತು. ಅವರ ಆರ್ಥಿಕತೆ ಮೇಲೆಯೇ ಭಾರೀ ಹೊಡತೆ ಬಿದ್ದಿತ್ತು. ಇದರಿಂದ ಅನೇಕ ಜನ ಪ್ರಾಣವನ್ನೇ ಕಳೆದುಕೊಂಡರು. ಇದರೊಂದಿಗೆ ಹೊಸ ನೋಟುಗಳ ಮುದ್ರಣ ಹಾಗೂ ವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ 21 ಸಾವಿರ ಕೋಟಿ ರೂ.ವೆಚ್ಚ ಮಾಡಿದೆ. ಇದೊಂದು ಅನುಪಯುಕ್ತ ವೆಚ್ಚ.

ಹೀಗಾಗಿ, ಪ್ರಧಾನಿ ಮೋದಿಯವರ ದೊಡ್ಡ ವೈಫ‌ಲ್ಯ ಇದಾಗಿದೆ. ಜೊತೆಗೆ ನೋಟು ಅಮಾನ್ಯದಿಂದ ದೇಶದಲ್ಲಿ ಬಂಡವಾಳ ಹೂಡಿಕೆ ಸಹ ಕಡಿಮೆ ಆಗಿದೆ. ಇದು ಉದ್ಯೋಗ ಸೃಷ್ಟಿಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮೇಕ್‌ ಇನ್‌ ಇಂಡಿಯಾ ಅನ್ನುವುದು ಬರೀ ಘೋಷಣೆಯಾಗಿ ಉಳಿದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next