ಹುಣಸೂರು: ನಗರಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಬೇಡಿಕೆ ಇದೆ. 31 ಕ್ಷೇತ್ರಕ್ಕೆ 91 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಉಪ ಚುನಾವಣೆ ವೇಳೆ ಪಕ್ಷಕ್ಕೆ ಬಂದಿರುವವರನ್ನೂ ಪರಿಗಣಿಸಿ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಟಿಕೆಟ್ ಸಿಗದವರಿಗೆ ಮುಂದೆ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಎಚ್.ಪಿ.ಮಂಜುನಾಥ್ ಭರವಸೆ ನೀಡಿದರು.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಗೆಲುವನ್ನೇ ಮಾನದಂಡವಾಗಿಸಿಕೊಂಡು ಪ್ರತಿ ವಾರ್ಡ್‌ನಲ್ಲೂ ಸಮೀಕ್ಷೆ ನಡೆಸಿ, ಜನಾಭಿಪ್ರಾಯ ಸಂಗ್ರಹಿಸಲಾಗುವುದು. ಮುಖ್ಯವಾಗಿ ಜನಪ್ರಿಯತೆ, ಚುನಾವಣಾ ವೆಚ್ಚ ಭರಿಸುವ ಶಕ್ತಿ ಇರುವವರಿಗೆ ಟಿಕೆಟ್ ನೀಡಲಾಗುವುದು. ಇದನ್ನು ಎಲ್ಲಾ ಆಕಾಂಕ್ಷಿಗಳು ಅರ್ಥ ಮಾಡಿಕೊಳ್ಳಬೇಕು ಎಂದರು.
ಕೆಲ ವಾರ್ಡ್‌ಗಳಲ್ಲಿ ಮತದಾರರ ಪಟ್ಟಿಯಲ್ಲಿ ಸಾಕಷ್ಟು ದೋಷ ಉಂಟುಮಾಡಿದ್ದಾರೆ. ಕೆಲವರು ಪ್ರಭಾವ ಬೀರಿ ತಮಗೆ ಬೇಕಾದ ವಾರ್ಡ್‌ಗಳಿಗೆ ವರ್ಗಾಯಿಸಿಕೊಂಡಿರುವ ಬಗ್ಗೆ ಜಿಲ್ಲಾಕಾರಿಗಳೊಂದಿಗೆ ಚರ್ಚಿಸಿ, ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲು ಮನವಿಮಾಡಿದ್ದೇನೆ. ತೊಂದರೆಗೊಳಗಾದವರು ಜಿಲ್ಲಾಧಿಕಾರಿಗೆ ದೂರು ನೀಡಬೇಕೆಂದು ಕೋರಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಜಿ.ಜೆ.ವಿಜಯಕುಮಾರ್ ಮಾತನಾಡಿ, ಕೆಪಿಸಿಸಿ ಮಾರ್ಗಸೂಚಿಯಂತೆ ಅಭ್ಯರ್ಥಿಗಳ ಆಯ್ಕೆಗೆ 10 ಮಂದಿ ಸ್ಕ್ರೀನಿಂಗ್ ಸಮಿತಿ ನೇಮಿಸಲಿದ್ದು, ಪ್ರತಿವಾರ್ಡ್‌ಗೆ ಭೇಟಿ ನೀಡಿ ಸಾರ್ವಜನಿಕ ಅಭಿಪ್ರಾಯ ಪಡೆಯಲಾಗುವುದು. ಜ.27 ರಂದು ಅಂತಿಮ ಪಟ್ಟಿ ಸಿದ್ದವಾಗಲಿದ್ದು, ಅಂದೇ ಬಿ.ಫಾರಂ ವಿತರಿಸಲಾಗುವುದು ಎಂದರು.
ಸಭೆಯಲ್ಲಿ ಕಾಂಗ್ರೆಸ್ ನಗರ ಅಧ್ಯಕ್ಷ ಶಿವಯ್ಯ, ಮಾಜಿ ಅಧ್ಯಕ್ಷ ಕೆಂಪೇಗೌಡ, ಜಿಪಂ ಉಪಾಧ್ಯಕ್ಷೆ ಗೌರಮ್ಮ, ತಾಪಂ ಅಧ್ಯಕ್ಷೆ ಪದ್ಮಮ್ಮ, ಉಪಾಧ್ಯಕ್ಷ ಪ್ರೇಮೇಗೌಡ, ಮುಖಂಡ ಅಶ್ವಿನ್ ಕುಮಾರ್ ರೈ ಇತರರಿದ್ದರು.