ಬೆಂಗಳೂರು: “ಅಂತ್ಯ’ ಸಿನಿಮಾದಲ್ಲಿ ಗಾಂಜಾ ಪರ ಗೀತೆ ರಚಿಸಿದ ವಿವಾದದ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಮುತ್ತು ಗುರುವಾರ ಸಿಸಿಬಿ ವಿಚಾರಣೆಗೆ ಹಾಜರಾದರು. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಗಮಿಸಿದ ಮುತ್ತು ಅವರನ್ನು ಸಂಜೆ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಈ ವೇಳೆ ನಿರ್ದೇಶಕ ಮುತ್ತು ಅವರು, ಈಗಾಗಲೇ ಅಂತ್ಯ ಚಿತ್ರದ ಹಾಡನ್ನು ಡಿಲೀಟ್ ಮಾಡಲಾಗಿದೆ. ಚಂದನ್ ಶೆಟ್ಟಿ ಅವರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಹಾಡು ಡಿಲೀಟ್ ಮಾಡಲಾಗಿದೆ. ಕೆಲವರು ವಿಡಿಯೋ ಡೌನ್‌ಲೋಡ್ ಮಾಡಿ ಮತ್ತೆ ಅಪ್‌ಲೋಡ್ ಮಾಡಿದ್ದಾರೆ. ಅವರ ವಿರುದ್ಧ ದೂರು ನೀಡಿ ಡಿಲೀಟ್ ಮಾಡಿಸುತ್ತೇನೆ. ಮತ್ತೆ ಇಂತಹ ತಪ್ಪುಗಳು ಆಗುವುದಿಲ್ಲ. ನಾವೇ ಖುದ್ದು ಮತ್ತೂಂದು ಹಾಡು ಮಾಡುವ ಮೂಲಕ ಮಾದಕ ವಸ್ತುವಿನ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿಕೆ ದಾಖಲಿಸಿರುವುದಾಗಿ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.
ಚಂದನ್‌ಶೆಟ್ಟಿ ಸಾಹಿತ್ಯ ರಚಿಸಿ ಹಾಡಿರುವ ಅಂತ್ಯ ಎಂಬ ಹೆಸರಿನ ಸಿನಿಮಾ ಗೀತೆಯಲ್ಲಿ ಪ್ರತಿ ಸಾಲುಗಳು ಗಾಂಜಾ ಸೇವನೆಗೆ ಪ್ರಚೋದನೆ ನೀಡುವಂತಿವೆ. ಈ ಹಾಡು ಕೇಳಿದ ಯುವ ಸಮೂಹ ಗಾಂಜಾ ವ್ಯಸನಿಗಳಾಗುವ ಸಾಧ್ಯತೆಯಿದೆ ಎಂಬುದು ಸಿಸಿಬಿ ಗಮನಕ್ಕೆ ಬಂದಿತ್ತು. ಹೀಗಾಗಿ ಸಿಸಿಬಿ ಅಧಿಕಾರಿಗಳು ಗೀತ ರಚನೆಕಾರ ಚಂದನ್ ಶೆಟ್ಟಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಚಂದನ್ ಶೆಟ್ಟಿ ಬುಧವಾರ ಅಧಿಕಾರಿಗಳ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದರು.
ಇದರ ಬೆನ್ನಲ್ಲೇ ಸಿನಿಮಾ ನಿರ್ದೇಶಕ ಮುತ್ತು ಅವರಿಗೂ ನೋಟಿಸ್ ನೀಡಲಾಗಿತ್ತು. ಹೀಗಾಗಿ ಗುರುವಾರ ಹಾಜರಾದ ಇವರು ಮತ್ತೂಮ್ಮೆ ಈ ರೀತಿ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು. ಬೆಂಗಳೂರಿನಲ್ಲಿ ಮಾದಕ ವಸ್ತು ಮಾರಾಟ ಜಾಲದ ಬಗ್ಗೆ ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ನಗರಾದ್ಯಂತ ಮಾದಕ ವಸ್ತು ಮಾರಾಟಗಾರರ ಬಗ್ಗೆ ನಿಗಾವಹಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ವಿಶೇಷ ಸಭೆ ನಡೆಸಿದ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ಎಲ್ಲ ಡಿಸಿಪಿಗಳಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಜತೆಗೆ ಸಿಸಿಬಿಯ ಮಹಿಳೆ ಮತ್ತು ಮಾದಕ ನಿಗ್ರಹದಳಕ್ಕೆ ವಿಶೇಷ ಕಾರ್ಯಾಚರಣೆ ನಡೆಸುವಂತೆಯೂ ಆದೇಶಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಸಿಬಿ ಮಾದಕ ವಸ್ತು ಮಾರಾಟಗಾರರು ಹಾಗೂ ಮಾದಕ ವಸ್ತು ಪ್ರಚೋದನೆ ಹಾಡುಗಳು, ಸಿನಿಮಾಗಳ ಮೇಲೆ ನಿಗಾವಿಹಿಸಿದ್ದಾರೆ. ಅಲ್ಲದೆ, ನಗರಾದ್ಯಂತ ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.