Advertisement

ಮತ್ತೆ ಹೋರಾಟಕ್ಕಿಳಿಯಲಿದೆ ಚಿತ್ರರಂಗ

08:48 AM Dec 28, 2017 | Team Udayavani |

ಬೆಂಗಳೂರು: ಮಹದಾಯಿ ನದಿ ನೀರಿನ ಹೋರಾಟಕ್ಕೆ ಈಗಾಗಲೇ ಒಂದು ಬಾರಿ ಉತ್ತರ ಕರ್ನಾಟಕದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದ ಕನ್ನಡ ಚಿತ್ರರಂಗ ಮತ್ತೂಮ್ಮೆ ಹೋರಾಟ ಬೆಂಬಲಿಸಿ ಜನವರಿಯಲ್ಲಿ ನರಗುಂದಕ್ಕೆ ಹೋಗಲು ನಿರ್ಧರಿಸಿದೆ.

Advertisement

ಚಲನಚಿತ್ರ ವಾಣಿಜ್ಯ ಮಂಡಳಿಯ ಸುದ್ದಿಗೋಷ್ಠಿಯಲ್ಲಿ ನಟ ಶಿವರಾಜ್‌ಕುಮಾರ್‌ ಮಾತನಾಡಿ, ಚಿತ್ರರಂಗದ ಕಲಾವಿದರೆಲ್ಲರೂ ಈ ಹಿಂದೆ ರೈತರನ್ನು ಬೆಂಬಲಿಸಿದ್ದೀರಿ. ಈಗ ನರಗುಂದಕ್ಕೆ ಬಂದು ನಮ್ಮ ಹೋರಾಟಕ್ಕೆ ಸಾಥ್‌ ನೀಡಬೇಕು ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್‌ ಸೊಬರದ ಮಠ ಮನವಿ ಮಾಡಿದ್ದಾರೆ. ಹೋರಾಟಕ್ಕೆ ಎಲ್ಲರನ್ನೂ ಕರೆತರುವುದಾಗಿ ತಿಳಿಸಿದ್ದೇನೆ ಎಂದರು. “ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಕುಳಿತು ಪರಸ್ಪರ ಚರ್ಚಿಸಿ ತೀರ್ಮಾನಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಯುತ್ತದೆ. ಅದು ಬಿಟ್ಟು ರೈತರ ಪ್ರತಿಭಟನೆಗೆ ಕಲಾವಿದರೇ ಇಲ್ಲ ಎಂದು ದೂರುವುದು ಎಷ್ಟು ಸರಿ? ನಾವೂ ಸಾಮಾನ್ಯ ಮನುಷ್ಯರು ಎಂದರು.

ಕಲಾವಿದರಿಗೆ ಪಕ್ಷವಿಲ್ಲ: ಕಲಾವಿದರು ಯಾವುದೇ ಪಕ್ಷದ ಪರ ಇಲ್ಲ, ಜನರ ಪರ ಇದ್ದಾರೆ. ನರಗುಂದಕ್ಕೆ ಬರಲು ನಾವು ಸಿದ್ಧ. ಆ ಭಾಗದಲ್ಲಿ ಹೋರಾಟ ನಡೆಸಲು ಎರಡು ದಿನಾಂಕ ನಿಗದಿಪಡಿಸಿ. ದಿನಾಂಕವನ್ನು ನಿರ್ಧರಿಸಿ ನಾವು ಬರುತ್ತೇವೆ. ನಾನೂ ಸೇರಿದಂತೆ ಸುದೀಪ್‌, ದರ್ಶನ್‌, ಯಶ್‌, ಧ್ರುವ್‌ ಸರ್ಜಾ, ನಟ ಜಗ್ಗೇಶ್‌ ಹೀಗೆ ಕನ್ನಡದ ಎಲ್ಲಾ ನಟರು, ಕಲಾವಿದರೂ ಭಾಗಿಯಾಗಲಿದ್ದಾರೆ
ಎಂದು ಹೇಳಿದರು.

ಹೋರಾಟಕ್ಕೆ ಸಾಥ್‌: ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ವರನಟ ಡಾ.ರಾಜಕುಮಾರ್‌ ಹಿಂದಿನಿಂದಲೂ ನೆಲ, ಜಲ, ಭಾಷೆ ವಿಷಯಕ್ಕೆ ತೊಂದರೆಯಾದಾಗ ಹೋರಾಟಕ್ಕೆ ನಿಲ್ಲುತ್ತಿದ್ದರು. ಅವರ ಹಾದಿಯಲ್ಲಿಯೇ ಈಗಲೂ ಕಾವೇರಿಯಾಗಲಿ, ಮಹದಾಯಿಯಾಗಲಿ, ಮೇಕೆದಾಟು ವಿಷಯವೇ ಇರಲಿ ಕಲಾವಿದರು ಹೋರಾಟಕ್ಕೆ ಸಾಥ್‌ ಕೊಡುತ್ತಾರೆ ಎಂದರು. 

ಹೋರಾಟ ನಿಲ್ಲದು: ವೀರೇಶ್‌ ಸೊಬರದಮಠ  ಮಹದಾಯಿ ಹಾಗು ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ 5 ದಿನಗಳಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ, ಹೋರಾಟ ಇಲ್ಲಿಗೆ ಅಂತ್ಯಗೊಳ್ಳುವುದಿಲ್ಲ. ನರಗುಂದದಲ್ಲಿ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್‌ ಸೊಬರದಮಠ ಹೇಳಿದ್ದಾರೆ. ನಮ್ಮೊಂದಿಗೆ ಆಗಮಿಸಿದ್ದ ನೂರಾರು ರೈತರನ್ನು ವಾಪಸ್‌ ಕಳುಹಿಸಿದ್ದು, ಮುಖಂಡರು ಗುರುವಾರ ಕನ್ನಡಪರ ಸಂಘಟನೆಗಳು ನಡೆಸುವ ಕರಾಳದಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಿತ್ರರಂಗದವರು ಹೋರಾಟಕ್ಕೆ ಸಾಥ್‌ ನೀಡುತ್ತಿಲ್ಲ ಎಂದು ಧರಣಿ ವೇಳೆ ಕೆಲವರು ಆಪಾದಿಸಿದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ಕೆಲವರು ಈ ರೀತಿ ಆರೋಪಿಸರಬಹುದು. ಆದರೆ, ಯಾವತ್ತೂ ಚಿತ್ರರಂಗ ರೈತರ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದರು.

Advertisement

ಚೇತನ್‌ ಹೇಳಿಕೆಗೆ ಜಗ್ಗೇಶ್‌ ಬೇಸರ 
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಯುವ ನಟ ಚೇತನ್‌ ನೀಡಿದ್ದ ಹೇಳಿಕೆಗೆ ನಟ ಜಗ್ಗೇಶ್‌ ಬೇಸರ ವ್ಯಕ್ತಪಡಿಸಿದ್ದು, ಚೇತನ್‌ ಕೊಟ್ಟ ಹೇಳಿಕೆ ನೋವುಂಟು ಮಾಡಿದೆ. ಸುಮ್ಮನೆ ಇನ್ನೊಬ್ಬರತ್ತ ಬೆಟ್ಟು ಮಾಡಿ ತೋರಿಸಬೇಡಿ. ಕಲಾವಿದರಿಗೂ ರೈತರ ನೋವು ಗೊತ್ತು. ಇದೇ ಕಾರಣ ಇಟ್ಟಕೊಂಡು ಸಾಮಾಜಿಕ ಜಾಲತಾಣದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸರಿಯಲ್ಲ. ರೈತರ ಹೋರಾಟಕ್ಕೆ ಕಲಾವಿದರು ಬಂದಿಲ್ಲ ಎಂದು ಆರೋಪಿಸಬೇಡಿ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next