“ಹೆಬ್ಬುಲಿ’ ನಂತರ ಸುದೀಪ್ ಜೊತೆಗೆ ಇನ್ನೊಂದು ಚಿತ್ರ ಮಾಡುವುದಾಗಿ, ಆ ಚಿತ್ರದ ನಿರ್ಮಾಪಕ ರಘುನಾಥ್ ಈ ಹಿಂದೆಯೇ ಘೋಷಿಸಿದ್ದರು. ಅಷ್ಟೇ ಅಲ್ಲ, ಆ ಚಿತ್ರವನ್ನು ರಿಶಭ್ ಶೆಟ್ಟಿ ನಿರ್ದೇಶಿಸುತ್ತಾರೆ ಎಂದು ಸಹ ಹೇಳಲಾಗಿತ್ತು. ಆ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ರಘುನಾಥ್ ಘೋಷಿಸಿದ್ದಾರೆ.
ಶನಿವಾರ ಮಧ್ಯಾಹ್ನ ಅವರ ಮಗ ವಾಗ್ಮಿ ಆರ್ ಯಜುರ್ವೇದಿ ನಿರ್ದೇಶಿಸಿರುವ “ಘ್ರಾಣ’ ಎಂಬ ಕಿರುಚಿತ್ರದ ಪ್ರದರ್ಶನ ನಂತರ ಮಾತನಾಡಿದ ಅವರು, ಸುದೀಪ್ ಜೊತೆಗೆ ಮುಂದಿನ ವರ್ಷ ಇನ್ನೊಂದು ಚಿತ್ರ ಮಾಡುತ್ತಿರುವುದಾಗಿ ಒಪ್ಪಿಕೊಂಡರು. ಈ ಚಿತ್ರದ ನಿರ್ದೇಶಕರು ಯಾರು? ಗೊತ್ತಿಲ್ಲ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ, ತಮ್ಮ ಹೊಸ ಚಿತ್ರಕ್ಕೆ ಕಮಿಷನ್ ನಿರ್ದೇಶಕರು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಅವರು.
“ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ ಎಂದು ಗೊತ್ತಿಲ್ಲ. ಇನ್ನೂ ಹುಡುಕಾಟ ನಡೆಯುತ್ತಿದೆ. ಆದರೆ, ನನಗೆ ಕಮಿಷನ್ ಪಡೆಯುವ ನಿರ್ದೇಶಕರು ಬೇಡ. ಇವತ್ತು ಚಿತ್ರರಂಗದಲ್ಲಿ 70 ಪರ್ಸೆಂಟ್ ಕಮಿಷನ್ ಪಡೆಯುವ ನಿರ್ದೇಶಕರೇ ಇದ್ದಾರೆ. ಹಾಗಾಗಿ ಹುಷಾರಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.
ಇಷ್ಟಕ್ಕೂ ರಘುನಾಥ್ ಅಂಥದ್ದೊಂದು ತೀರ್ಮಾನಕ್ಕೆ ಬರುವುದಕ್ಕೆ ಕಾರಣ ಯಾರು? ಯಾರಿಂದಾಗಿ ಅವರು ಆ ತೀರ್ಮಾನಕ್ಕೆ ಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ರಘುನಾಥ್ ಉತ್ತರಿಸುವುದಿಲ್ಲ. ಆದರೆ, ಗಾಂಧಿನಗರದ ಮೂಲಗಳ ಪ್ರಕಾರ, ರಘುನಾಥ್ ಅವರು ಇಂಥದ್ದೊಂದು ತೀರ್ಮಾನಕ್ಕೆ ಬರುವುದಕ್ಕೆ ಕಾರಣ ಅವರ ಹಿಂದಿನ ಎರಡು ಚಿತ್ರಗಳು.
“ಜಿಗರ್ ಥಂಡಾ’ ಚಿತ್ರವು ದೊಡ್ಡ ನಷ್ಟವಾದರೆ, ಎಸ್. ಕೃಷ್ಣ ನಿರ್ದೇಶನದ “ಹೆಬ್ಬುಲಿ’ ಚಿತ್ರವು ದೊಡ್ಡ ಹಿಟ್ ಆಯಿತು ಮತ್ತು ನಾಲ್ಕೇ ದಿನಗಳಲ್ಲಿ 30 ಕೋಟಿ ಕಲೆಕ್ಷನ್ ಆಯಿತು ಎಂದು ಬಿಂಬಿತವಾದರೂ, ರಘುನಾಥ್‌ಗೆ ಅಲ್ಲಿಂದಲ್ಲಿಗೆ ಆಯಿತಂತೆ. ಇದೆಲ್ಲಾ ಕೆಟ್ಟ ಅನುಭವದಿಂದಾಗಿ ಅವರು ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.