ಭಾರತೀನಗರ: “ನನ್ನ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಿಖಿಲ್‌ರನ್ನು ರಾಜಕೀಯಕ್ಕೆ ಕರೆತರಲಾಯಿತು’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾವೋದ್ವೇಗದಿಂದ ನುಡಿದಿದ್ದಾರೆ.
ನಗರದಲ್ಲಿ ನಿಖಿಲ್ ಪರ ಚುನಾವಣಾ ಪ್ರಚಾರ ನಡೆಸಿದ ಅವರು, “ನಮ್ಮ ಕುಟುಂಬ ಹೋರಾಟವನ್ನು ತನ್ನ ರಕ್ತದ ಕಣದಲ್ಲಿ ಮೈಗೂಡಿಸಿಕೊಂಡಿದೆ. ನಾನು ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ.
ನನಗೆ ಎರಡು ಮೇಜರ್ ಆಷರೇಷನ್ ಆಗಿದ್ದು, ನನ್ನ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನಿಖಿಲ್‌ರನ್ನು ರಾಜಕೀಯಕ್ಕೆ ಕರೆತರಲಾಯಿತು. ಮಂಡ್ಯದಲ್ಲಿ ಹಮ್ಮಿಕೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ನಿಖಿಲ್‌ಗೆ ರಾಜಕೀಯ ಪ್ರವೇಶ ಮಾಡಿಸಲಾಯಿತು.
ನಿಖಿಲ್ ನನ್ನ ಮಗನಲ್ಲ, ಇನ್ನು ಮುಂದೆ ನಿಮ್ಮ ಮಗ. ರೈತರ ಜೊತೆ ನಿಖಿಲ್ ನಿರಂತರವಾಗಿ ಜೊತೆಯಲ್ಲಿರುತ್ತಾನೆ’ ಎಂದರು. ಮುಂದಿನ 15 ದಿನಗಳಲ್ಲಿ ಕಬ್ಬಿನ ಬಾಕಿ ಹಣ ಪಾವತಿ ಮಾಡುವುದಾಗಿ ಭರವಸೆ ನೀಡಿದರು.
ಸುಮಲತಾಗೆ ಸಿಆರ್‌ಪಿಎಫ್ ಮಾತ್ರವಲ್ಲ, ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಾತನಾಡಿ, ಅಮೆರಿಕ ಕಮಾಂಡೋಸ್ ಭದ್ರತೆ ಕೊಡಿಸಲಿ. ನನ್ನ ಅಭ್ಯಂತರವಿಲ್ಲ ಎಂದರು. “ನಾನು ಸೈನ್ಯಕ್ಕೆ ಅವಮಾನ ಮಾಡಿಲ್ಲ. ಗುರು ಕುಟುಂಬದ ಸ್ಥಿತಿ ನೋಡಿ ಸತ್ಯ ಹೇಳಿದ್ದೇನೆ.
ಗುರು ಪತ್ನಿಗೆ ಉದ್ಯೋಗ ಕೊಟ್ಟಿದ್ದು ನಾನು, ಮೋದಿಯಲ್ಲ’ ಎಂದರು. ಪ್ರಚಾರದ ವೇಳೆ, ಭಾರತೀನಗರ ಸುತ್ತಮುತ್ತಲಿನ ಗ್ರಾಮದ ರೈತರು 3 ಲಕ್ಷ ರೂ.ಗಳನ್ನು ಸಿಎಂಗೆ ದೇಣಿಗೆಯಾಗಿ ನೀಡಿದರು.
ಇದೇ ವೇಳೆ, ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ಅನಿತಾ ಕುಮಾರಸ್ವಾಮಿ ರೋಡ್ ಶೋ ನಡೆಸಿ, ನಿಖಿಲ್ ಪರ ಮತಯಾಚಿಸಿದರು. ಅನಿತಾ ಕುಮಾರಸ್ವಾಮಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸಾಥ್ ನೀಡಿದರು.