ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರ್ಕಾರ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ 40 ಸಾವಿರ ಕೋಟಿ ರೂ.ಗಳ ಹಗರಣ ನಡೆಸಿದ್ದು, ಬಿಜೆಪಿಯ ಭ್ರಷ್ಟಾಚಾರದ ಮುಖವನ್ನು ಜನತೆಗೆ ತೋರಿಸಲು ಕಾಂಗ್ರೆಸ್ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದೆ.
ನಗರದಲ್ಲಿ ಭಾನುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ಖಾತೆ ಮಾಜಿ ರಾಜ್ಯ ಸಚಿವ ಪಲ್ಲಂರಾಜು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಪಲ್ಲಂರಾಜು ಮಾತನಾಡಿ, ರಫೇಲ್ ವಿಮಾನ ಖರೀದಿಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಫ್ರಾನ್ಸ್ ಸರ್ಕಾರದೊಂದಿಗೆ ಭಾರತ ಮಾಡಿಕೊಂಡ ಒಪ್ಪಂದವನ್ನು ಬಿಜೆಪಿ ಸರ್ಕಾರ ತಿದ್ದುವ ಮೂಲಕ ಭಾರೀ ಅವ್ಯವಹಾರ ನಡೆಸಿದೆ.
ಯುಪಿಎ ಅವಧಿಯಲ್ಲಿನ ಒಪ್ಪಂದದಂತೆ ತಂತ್ರಜ್ಞಾನ ವರ್ಗಾವಣೆಯಿಂದ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆಯಲ್ಲಿ ಉದ್ಯೋಗ ಸೃಷ್ಟಿ ಮಾಡುವುದರ ಜತೆಗೆ ಆರ್ಥಿಕ ಅಭಿವೃದ್ಧಿಗೂ ಅನುಕೂಲವಾಗುತ್ತಿತ್ತು. ಆದರೆ, ಮೋದಿ ಸರ್ಕಾರ ಈ ಒಪ್ಪಂದವನ್ನು ಸಂಪೂರ್ಣವಾಗಿ ರದ್ದು ಮಾಡಿ, ರಕ್ಷಣಾ ಕ್ಷೇತ್ರದಲ್ಲಿ ಏನೇನೂ ಅನುಭವವಿಲ್ಲದ ತಮ್ಮ ಆಪ್ತರಾದ ಅನಿಲ್ ಅಂಬಾನಿಯವರ ಹೊಸ ಕಂಪನಿ ಇದರ ಗುತ್ತಿಗೆ ಪಡೆಯಲು ಅನುವು ಮಾಡಿಕೊಟ್ಟು ದಲ್ಲಾಳಿಗಳಾಗಿದ್ದಾರೆ ಎಂದು ಆರೋಪಿಸಿದರು.
ಯುಪಿಎ ಒಪ್ಪಂದದ ಪ್ರಕಾರ ಪ್ರತಿ ವಿಮಾನಕ್ಕೆ 526.10 ಕೋಟಿ ರೂ.ನಿಗದಿ ಮಾಡಲಾಗಿತ್ತು. ಮೋದಿಯವರು ಮಾಡಿಕೊಂಡ ಒಪ್ಪಂದದಂತೆ ಪ್ರತಿ ವಿಮಾನಕ್ಕೆ 1670.70 ಕೋಟಿ ರೂ.ಬೆಲೆ ನಿಗದಿಯಾಗಿದೆ. ಸರ್ಕಾರ ರಫೇಲ್ ವಿಮಾನದ ಬೆಲೆ 670 ಕೋಟಿ ರೂ. ಎಂದು ಸಂಸತ್ತಿಗೆ ತಿಳಿಸಿದ್ದರೂ ದಸ್ಸಾಲ್ಟ್ ಕಂಪನಿಯ ವಾರ್ಷಿಕ ವರದಿಯಲ್ಲಿ ಇದರ ಬೆಲೆ 1,670 ಕೋಟಿ ರೂ. ಎಂದು ನಮೂದಿಸಿರುವುದು ಇದರಲ್ಲಿ ಪಾರದರ್ಶಕ ವ್ಯವಹಾರ ನಡೆದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹರಿಹಾಯ್ದರು.
ರಫೇಲ್ ವಿಮಾನ ಖರೀದಿ ವ್ಯವಹಾರ 40 ಸಾವಿರ ಕೋಟಿ ರೂ.ಗಳ ಬಹು ದೊಡ್ಡ ಹಗರಣ. ಮೋದಿ ಸರ್ಕಾರ ರಕ್ಷಣಾ ಇಲಾಖೆಯಲ್ಲಿ ನಡೆಸಿರುವ ಈ ಹಗರಣವನ್ನು ಕಾಂಗ್ರೆಸ್ ಜನತೆಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದರ ವಿರುದ್ಧ ಬೀದಿಗಿಳಿದು ಹೋರಾಡುತ್ತೇವೆ.
– ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ