Advertisement

ಸಿಎಎ ವಿರುದ್ಧದ ಹೋರಾಟದಿಂದ ಒಳ್ಳೆಯದೇ ಆಗಿದೆ

08:42 PM Mar 01, 2020 | Lakshmi GovindaRaj |

ಹಾಸನ: ದೇಶದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ (ಸಿಎಎ) ವಿರೋಧಿಸಿ ಪ್ರತಿಭಟನೆಗಳ ನಡೆಸುತ್ತಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಏಕೆಂದರೆ, ದೇಶ ವಿರೋಧಿಗಳು ಕೂಡ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಬಂದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

Advertisement

ನಗರದ ಬಿ.ಎಂ.ರಸ್ತೆ ಕೃಷ್ಣ ಹೋಟೆಲ್‌ ಪಕ್ಕದ ಮೈದಾನದಲ್ಲಿ ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಎಚ್‌.ಕೆ. ಸುರೇಶ್‌ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಎ ಜಾರಿಗೆ ತರಬೇಕು ಎಂದು ಇಂದಿರಾಗಾಂಧಿ ಕಾಲದಲ್ಲೇ ಹೇಳುತ್ತಿದ್ದರು. ಆದರೆ, ಕಾಂಗ್ರೆಸ್‌ ಅವರ ಚಿಂತನೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ದೇಶದ ಬಗ್ಗೆ ಅಪಪ್ರಚಾರ ಮಾಡಿದವರು, ಸಾರ್ವಜನಿಕ ಆಸ್ತಿ ನಾಶಪಡಿಸಿದವರು ದೇಶ ದ್ರೋಹಿಗಳು ಎಂದು ಗಾಂಧಿ ಹೇಳಿದ್ದರು. ಪ್ರಸ್ತುತ ಸನ್ನಿವೇಶದಲ್ಲಿ ಯಾರು ದೇಶ ದ್ರೋಹಿಗಳು ಎಂದು ಈಗ ಜನರೇ ನಿರ್ಧರಿಸಬೇಕು ಎಂದರು.

ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಧಿಕಾರ: ಅಲ್ಪಸಂಖ್ಯಾತರಿಗೆ ಹೆಚ್ಚಿನ ಅಧಿಕಾರ ನೀಡಿರುವುದು ಭಾರತೀಯ ಜನತಾ ಪಾರ್ಟಿಯೇ ಹೊರತು ಬೇರಾವುದೇ ಪಕ್ಷವಲ್ಲ. ಬಿಜೆಪಿ ಬೆಂಬಲಿತ ಅಲ್ಪ ಸಂಖ್ಯಾತರು ಪ್ರಧಾನಿ, ರಾಷ್ಟ್ರಪತಿಯಂತಹ ಉನ್ನತ ಹಂತದ ಅಧಿಕಾರ ಅಲಕಂರಿಸಿದ್ದಾರೆ. ಆದರೆ, ಕೆಲವರು ಬಿಜೆಪಿ ಅಲ್ಪ ಸಂಖ್ಯಾತರ ವಿರೋಧಿ ಪಕ್ಷ ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.

ಗಲಭೆಯಲ್ಲಿ ಕಾಂಗ್ರೆಸ್‌ ಕೈವಾಡ: ಅಮೆರಿಕ ಅಧ್ಯಕ್ಷ ಟ್ರಂಪ್‌ ಭಾರತಕ್ಕೆ ಬಂದ ಸಂದರ್ಭದಲ್ಲಿ ದೆಹಲಿಯಲ್ಲಿ ಗಲಭೆ ಸೃಷ್ಟಿಸಲಾಯಿತು. ಇದರ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್‌ ಬೌದ್ಧಿಕ, ವೈಚಾರಿಕವಾಗಿ ದಿವಾಳಿಯಾಗಿದೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ತನ್ನ ಸೋಲಿನ ಭೀತಿಯಿಂದ ಅಮೇಥಿಯಿಂದ ಬಂದು ಕೇರಳದಲ್ಲಿ ಚುನಾವಣೆಗೆ ನಿಂತುಕೊಳ್ಳುತ್ತಾರೆ ಅಧಿಕಾರ ಬಂದಾಗ ತಾಯಿ ಭಾರತಾಂಬೆಯನ್ನು ಮರೆತು ಕುಟುಂಬದ ಅಭಿವೃದ್ಧಿಯ ಜಪ ಮಾಡಿದ್ದರ ಫ‌ಲವಾಗಿ ಕಾಂಗ್ರೆಸ್‌ಗೆ ಇಂತಹ ಸ್ಥಿತಿ ಬಂದಿದೆ.

ಬಿಜೆಪಿ ಮೈಮರೆತು ಕಾಂಗ್ರೆಸ್‌ ಮಾಡಿದ ತಪ್ಪನ್ನು ಎಂದೂ ಮಾಡಬಾರದು, ಮಾಡುವುದೂ ಇಲ್ಲ ಎಂದು ಹೇಳಿದರು. ಕಾಂಗ್ರೆಸ್‌ ಪಕ್ಷಕ್ಕೆ 6 ತಿಂಗಳಿನಿಂದ ರಾಜ್ಯಾಧ್ಯಕ್ಷರ ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರುಗಳನ್ನು ನೇಮಿಸಿ, ಮಂಡಲದ ಪ್ರಮುಖರನ್ನು ನೇಮಿಸುತ್ತಿದೆ. ನಮಗೆ ಪಕ್ಷಕ್ಕಿಂತ ದೇಶ ಶ್ರೆಷ್ಠ. ಸದಾ ತಾಯಿ ಭಾರತಾಂಬೆಯ ಏಳ್ಗೆಗೆ ಶ್ರಮಿಸುತ್ತೇವೆ ಎಂದ ಅವರು, ನೂತನ ಜಿಲ್ಲಾಧ್ಯಕ್ಷರು ಪಕ್ಷ ಸಂಘಟಿಸಲು ಹಗಲಿರುಳು ಶ್ರಮಿಸಲಿದ್ದಾರೆ.

Advertisement

ಮುಂಬರುವ ದಿನಗಳಲ್ಲಿ ಜಿಲ್ಲೆ ಜನತಾದಳ ಮುಕ್ತ ಜಿಲ್ಲೆಯಾಗಲಿದೆ ಎಂದು ಹೇಳಿದರು. ದೇಶವನ್ನು ವಿಶ್ವಗುರುವಾಗಿಸಬೇಕು ಎಂಬ ಧ್ಯೇಯದಲ್ಲಿ ಬಿಜೆಪಿ ನಡೆದುಕೊಂಡು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ. ಇದಕ್ಕೆ ಕಾರ್ಯಕರ್ತರು ಹೆಗಲುಕೊಡುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.

ಆರ್‌ಎಸ್‌ಎಸ್‌ ದೇಶಭಕ್ತರ ಸೃಷ್ಟಿಸುವ ಕಾರ್ಖಾನೆ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜಕೀಯ ಸಲುವಾಗಿ ಈಚೆಗೆ ಆರ್‌ಎಸ್‌ಎಸ್‌ ಅನ್ನು ಕೀಳುಮಟ್ಟದಲ್ಲಿ ಟೀಕಿಸಿದ್ದಾರೆ. ಆರ್‌ಎಸ್‌ಎಸ್‌ ರಾಜಕೀಯ ಮಾಡಲು ಅಥವಾ ಶಾಸಕ, ಸಂಸದರನ್ನು ಹುಟ್ಟುಹಾಕಲು ಇರುವ ಸಂಘಟನೆಯಲ್ಲ. ಅದೊಂದು ರಾಷ್ಟ್ರಭಕ್ತರ ಹುಟ್ಟುಹಾಕುವ ಕಾರ್ಖಾನೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರವಧಿಯಲ್ಲಿ ತಾಜ್‌ ಹೋಟೆಲ್‌ನಲ್ಲೇ ಹೆಚ್ಚಿನಕಾಲ ಕಳೆದರು. ಇದರಿಂದ ಬೇಸತ್ತ ಶಾಸಕರು ರಾಜೀನಾಮೆಕೊಟ್ಟು ಹೊರ ಬಂದು ಬಿಜೆಪಿ ಅಧಿಕಾರ ನಡೆಸಲು ಸಹಕಾರಿಯಾಯಿತು. ಯಡಿಯೂರಪ್ಪ ರೈತಪರ ಕಾಳಜಿಹೊತ್ತು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ಸಿದ್ಧರಾಮಯ್ಯ ತನ್ನ ಅಧಿಕಾರವಧಿಯಲ್ಲಿ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು ? ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಮರಳು ಮಾಫಿಯಾ ಬೆಳೆಸಿದದು ಅಷ್ಟೇ ಎಂದು ಟೀಕಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿಜಯಶಂಕರ್‌, ಶಾಸಕ ಪ್ರೀತಂ ಜೆ. ಗೌಡ, ಮಾಜಿ ಶಾಸಕರಾದ ಎಚ್‌.ಎಂ. ವಿಶ್ವನಾಥ್‌, ಬಿ.ಆರ್‌. ಗುರುದೇವ್‌, ನೂತನ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಕೆ. ಸುರೇಶ್‌, ಮಾಜಿ ಅಧ್ಯಕ್ಷ ನàಲೆ ಅಣ್ಣಪ್ಪ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣುಕುಮಾರ್‌, ಶ್ವೇತಾ, ದಯಾನಂದ್‌, ಮರಿಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ರಾಜಕೀಯ ಎಂಬ ಕಾಲೆಳೆಯುವ ಕಬ್ಬಡ್ಡಿಯಾಟದಲ್ಲಿ ಹಾಸನ ಜಿಲ್ಲೆಯಲ್ಲಿ ಅಪ್ಪ ಪ್ರಧಾನಿಯಾದರೆ, ಮಗ ಮಂತ್ರಿಯಾಗಬೇಕು, ಸೊಸೆ ಶಾಸಕಿಯಾಗಬೇಕು. ಮೊಮ್ಮಕ್ಕಳು ಸಂಸದರಾಗಬೇಕೆಂಬ ಧೋರಣೆಯಿದೆ. ಇಂತಹ ಜಿಲ್ಲೆಯಲ್ಲಿ ಮನೆ, ಮನೆಯಲ್ಲೂ ಕಮಲ ಅರಳಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು.
-ನಳಿನ್‌ ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next