ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಸುಗ್ಗಿಹಬ್ಬ ಸಂಕ್ರಾಂತಿಯನ್ನು ಸಡಗರ, ಸಂಭ್ರಮದಿಂದ ಸೋಮವಾರ ಆಚರಿಸಲಾಯಿತು.
ದೇವಾಲಯಗಳಿಗೆ ಲಗ್ಗೆ: ವರ್ಷದ ಮೊದಲ ಹಬ್ಬ ಸಂಕ್ರಾಂತಿ ಅಂಗವಾಗಿ ಬೆಳಗ್ಗೆಯಿಂದಲೇ ಮನೆಗಳಲ್ಲಿ ಎಣ್ಣೆಮಜ್ಜನ, ಪೂಜೆ ಮುಗಿಸಿದ ನಂತರ ಎಳ್ಳು-ಬೆಲ್ಲ ತಿನ್ನುವ ಜತೆಗೆ ಹೋಳಿಗೆ, ಪೊಂಗಲ್ ಸವಿದರು. ಅನೇಕರು ಮುಂಜಾನೆಯೇ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ನಗರದ ಕೆಲವು ಭಾಗಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಾಸುಗಳಿಗೆ ಅರಿಶಿಣ ಹಚ್ಚಿ, ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅನೇಕರು ತಮ್ಮ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ ಹಂಚಿದರು.
ಮುಸ್ಲಿಂ ಮಕ್ಕಳಿಗೆ ಎಳ್ಳುಬೆಲ್ಲ: ಶಾಸಕ ವಾಸು ಮತ್ತು ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತ್‌ಗೌಡ ಅವರು, ದೇವರಾಜ ಶಾಲೆಯ ಬಳಿ ಹಿಂದು ಮತ್ತು ಮುಸ್ಲಿಂ ಮಕ್ಕಳಿಗೆ ಎಳ್ಳು ಬೆಲ್ಲ ವಿತರಣೆ ಮಾಡಿ ಸಂಕ್ರಾಂತಿ ಹಬ್ಬದ ಶುಭ ಕೋರಿದರು. ಜೆಪಿ ಅಭಿಮಾನಿ ಬಳಗದ ವತಿಯಿಂದ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ಎಳ್ಳು, ಬೆಲ್ಲ, ಕಬ್ಬು ವಿತರಣೆ ಮಾಡಿ ಸಂಕ್ರಾಂತಿ ಆಚರಿಸಲಾಯಿತು.
ವಿಠಲಧಾಮದಲ್ಲಿ ಸಂಭ್ರಮ: ಜೆ.ಪಿ.ನಗರದ ವಿಠಲಧಾಮದಲ್ಲಿ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು. ಮಾಜಿ ಸಚಿವ ಎಚ್.ಎ.ರಾಮದಾಸ್ ನೇತೃತ್ವದಲ್ಲಿ ನಡೆದ ಸಂಕ್ರಾಂತಿ ಹಬ್ಬದ ಆಚರಣೆಯಲ್ಲಿ ಎಚ್‌ಐವಿ ಪೀಡಿತ ಮಕ್ಕಳೊಂದಿಗೆ ಎಳ್ಳುಬೆಲ್ಲ ಹಂಚುವ ಮೂಲಕ ಸಂಕ್ರಾಂತಿ ಆಚರಣೆ ಮಾಡಲಾಯಿತು.
ಪೊಂಗಲ್ ಹಬ್ಬ ಆಚರಣೆ: ಕ್ಯಾಥೋಲಿಕ್ ತಮಿಳು ಟ್ರಸ್ಟ್ ವತಿಯಿಂದ ನಾಯ್ಡು ನಗರದ ಪುಷ್ಪಾ ಶ್ರಮದಲ್ಲಿರುವ ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಅನ್ನು ಸಡಗರದಿಂದ ಆಚರಿಸಲಾಯಿತು. ಬಲಿ ಪೂಜೆಯಿಂದ ಪೊಂಗಲ್ ಹಬ್ಬ ಆರಂಭಗೊಂಡಿತ್ತು.
ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ, ಮಾಜಿ ಮೇಯರ್ ಆಯೂಬ್ ಖಾನ್, ಅಜ್ಜು ಬ್ರದರ್ ಭಾಗಿಯಾಗಿದ್ದರು. ಹಬ್ಬ ಆಚರಣೆಯ ಬಳಿಕ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ಮಕ್ಕಳಿಂದ ನೃತ್ಯ, ಕಿರುನಾಟಕ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳ ಎಲ್ಲರ ಗಮನ ಸೆಳೆಯಿತು.