Advertisement

ಹುಲುಮಾನವರ ಹುಲಿಯಾಟ

11:28 AM Jun 17, 2017 | Team Udayavani |

ಅಪ್ಪನಿಗೆ ತನ್ನ ಮಗ ಬ್ಯಾಂಕ್‌ ಮ್ಯಾನೇಜರ್‌ ಆಗಬೇಕೆಂಬ ಆಸೆ. ಮಗನಿಗೆ ತಾನು ಪೊಲೀಸ್‌ ಆಫೀಸರ್‌ ಆಗಬೇಕಂತ ಆಸೆ. ಅದೇ ಕಾರಣಕ್ಕೆ ಅಪ್ಪ-ಮಗನಿಗೆ ಸದಾ ತಿಕ್ಕಾಟ. ಮಗ ತಾನು ವರ್ಕೌಟ್‌ ಮಾಡಿ ಪೊಲೀಸ್‌ ಹುದ್ದೆಗೆ ಕಟ್ಟುಮಸ್ತಾಗಿರಬೇಕೆಂದು ಅಲಾರ್ಮ್ ಇಟ್ಟುಕೊಂಡರೆ, ಅಪ್ಪಾ ಅದನ್ನು ಆರಿಸಿ ಲೇಟ್‌ ಆಗಿ ಏಳುವಂತೆ ಮಾಡುತ್ತಾನೆ. ಮಗನಿಗೆ ಪೊಲೀಸ್‌ ಎಕ್ಸಾಮ್‌ನಲ್ಲಿ ಭಾಗವಹಿಸುವುದಕ್ಕೆ ಪತ್ರ ಬಂದರೆ, ಅಪ್ಪ ಅದನ್ನು ಬಚ್ಚಿಡುತ್ತಾನೆ. ಇಷ್ಟಕ್ಕೂ ಅಪ್ಪನಿಗ್ಯಾಕೆ ಪೊಲೀಸರ ಕಂಡರೆ ಅಷ್ಟಕ್ಕಷ್ಟೇ?

Advertisement

ಇಷ್ಟಕ್ಕೂ ಅಪ್ಪ ಯಾಕೆ ತನ್ನ ಮಗ ಪೊಲೀಸ್‌ ಅಧಿಕಾರಿಯಾಗುವುದನ್ನು ತಡೆಯುತ್ತಾನೆ? ಇಂತಹ ಪ್ರಶ್ನೆಗಳು “ಟೈಗರ್‌’ನ ಮೊದಲಾರ್ಧದ ಪೂರಾ ಪ್ರೇಕ್ಷಕನನ್ನು ಕಾಡುತ್ತಲೇ ಇರುತ್ತದೆ. ಆದರೆ, ಚಿತ್ರ ಮುಗಿಯುವ ಹೊತ್ತಿಗೆ, ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಷ್ಟೇ ಅಲ್ಲ, ಪರಿಸ್ಥಿತಿ ಉಲ್ಟಾ ಆಗಿರುತ್ತದೆ. ಅಪ್ಪನಿಗೆ ತನ್ನ ಮಗ ಪೊಲೀಸ್‌ ಆಫೀಸರ್‌ ಆಗಬೇಕೆಂಬ ಆಸೆ. ಮಗನಿಗೆ ಮಾತ್ರ ಬ್ಯಾಂಕ್‌ ಮ್ಯಾನೇಜರ್‌ ಆಗುವ ಬಯಕೆ.

ಹಾಗಿದ್ದ ಅಪ್ಪ-ಮಗನ ಯೋಚನೆ, ಸಿನಿಮಾ ಮುಗಿಯುವ ಹೊತ್ತಿಗೆ ಯಾಕೆ ಮತ್ತು ಹೇಗೆ ಬದಲಾಗಿರುತ್ತದೆ ಎಂದು ಗೊತ್ತಾಗಬೇಕಿದ್ದರೆ, “ಟೈಗರ್‌’ ನೋಡಬೇಕು. ಈ ಚಿತ್ರ ತನ್ನನ್ನು ಒಬ್ಬ ನಟನನ್ನಾಗಿ ಮರುಪರಿಚಯಿಸುತ್ತದೆ ಎಂದು ಪ್ರದೀಪ್‌ ಹೇಳಿಕೊಂಡಿದ್ದರು. ಒಬ್ಬ ಹೀರೋನನ್ನು ಪರಿಚಯ ಮಾಡುವುದಕ್ಕೆ ಏನೆಲ್ಲಾ ಸರಕುಬೇಕೋ ಅದನ್ನೆಲ್ಲವೂ ಸೇರಿಸಿ, ಚಿತ್ರ ಮಾಡಿದ್ದಾರೆ ನಂದಕಿಶೋರ್‌. ಹಾಗೆ ನೋಡಿದರೆ, ಚಿತ್ರದಲ್ಲಿ ನೋಡದ, ಕೇಳದ ಕಥೆಯೇನಿಲ್ಲ. ಈ ತರಹದ ಚಿತ್ರಗಳು ಬಂದಿಲ್ಲ ಎಂದಲ್ಲ.

ಉದಾಹರಣೆಗೆ, “ಕೋಟಿಗೊಬ್ಬ’ ಚಿತ್ರದಲ್ಲಿ ವಿಷ್ಣುವರ್ಧನ್‌ ಅವರ ಪಾತ್ರಕ್ಕೆ ಒಬ್ಬ ಮಗನಿದ್ದರೆ? ಆತ ತನ್ನ ತಂದೆಯ ಪರವಾಗಿ ಹೋರಾಟಕ್ಕೆ ನಿಂತರೆ ಏನಾಗುತ್ತದೋ ಅದನ್ನು “ಟೈಗರ್‌’ನಲ್ಲಿ ನೋಡಬಹುದು. “ಕೋಟಿಗೊಬ್ಬ’ ಚಿತ್ರದಲ್ಲಿ ಒಂದು ಸಿಂಹವಿತ್ತು. ಆದರೆ, ಇಲ್ಲಿ ಎರಡು ಟೈಗರ್‌ಗಳಿವೆ. ಹೇಗೆ ಆ ಟೈಗರ್‌ಗಳು ಚಿತ್ರದುದ್ದಕ್ಕೂ ಹೇಗೆ ಘರ್ಜಿಸುತ್ತವೆ ಎನ್ನುವುದು ಚಿತ್ರದ ಕಥೆ. ಇಲ್ಲಿ ನಂದಕಿಶೋರ್‌ ಅವರ ಉದ್ದೇಶ ಸ್ಪಷ್ಟವಿದೆ. ಪ್ರದೀಪ್‌ಗೆ ಈ ಚಿತ್ರದ ಮೂಲಕ ಬ್ರೇಕ್‌ ಕೊಡುವ ಜವಾಬ್ದಾರಿ ಅವರ ಮೇಲಿದೆ.

ಅದಕ್ಕೆ ಏನೇನು ಸರಕುಗಳು ಬೇಕೋ ಅದು ನಿರ್ದೇಶಕರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಬೇರೆ ತರಹ ಪ್ರಸೆಂಟ್‌ ಮಾಡುತ್ತಾ ಹೋಗಿದ್ದಾರೆ. ಉದಾಹರಣೆಗೆ, ನಾಯಕನ ಇಂಟ್ರೋಡಕ್ಷನ್‌ ಫೈಟು. ಈ ಫೈಟಿನಲ್ಲಿ ನಾಯಕನಿಗೆ ಈಶ್ವರನ ಗೆಟಪ್‌ ತೊಡಿಸಿ, ಪರಿಚಯಿಸಿದ್ದಾರೆ. ಇನ್ನು ಚಿತ್ರ ಪ್ರಾರಂಭವಾಗುವುದೂ ಸ್ವಾರಸ್ಯಕರವಾಗಿದೆ. ಇಲ್ಲಿ ನಾಯಕ, ತನ್ನ ಅಪ್ಪನಿಗೇ ಸುಪಾರಿ ಕೊಟ್ಟಿರುತ್ತಾನೆ. ಇದೆಲ್ಲದರಿಂದ, ಹಳೆಯ ಕಥೆಯೇ ಆದರೂ, ಅದನ್ನು ಸ್ವಾರಸ್ಯಕರವಾಗಿ ನಿರೂಪಿಸುವ ಪ್ರಯತ್ನವನ್ನು ನಂದ ಮಾಡಿದ್ದಾರೆ.

Advertisement

ಹೀಗಿದ್ದರೂ, ಚಿತ್ರ ಅಲ್ಲಲ್ಲಿ ಬೋರ್‌ ಆಗುತ್ತದೆ. ಚಿತ್ರಕ್ಕೆ ಒಂದು ವೇಗ ಬರುವುದೇ ಇಂಟರ್‌ವೆಲ್‌ ಪಾಯಿಂಟ್‌ನಲ್ಲಿ. ಅಲ್ಲಿಯವರೆಗೂ ಕೆಲವೇ ಪಾತ್ರಗಳು ಮತ್ತು ವಿಷಯಗಳ ಸುತ್ತ ಸುತ್ತುವ ಚಿತ್ರವು, ದ್ವಿತೀಯಾರ್ಧದಲ್ಲಿ ದೊಡ್ಡದಾಗುತ್ತಾ ಹೋಗುತ್ತದೆ. ಆಗ ಇನ್ನಷ್ಟು ವಿಷಯಗಳು ಮತ್ತು ಪಾತ್ರಗಳು ಸೇರಿ, ಚಿತ್ರಕ್ಕೆ ಇನ್ನೊಂದು ಆಯಾಮವನ್ನು ತಂದುಕೊಡುತ್ತದೆ. ಅದರಲ್ಲೂ ರವಿಶಂಕರ್‌ ಎರಡನೆಯ ಬಾರಿಗೆ ಎಂಟ್ರಿ ಕೊಟ್ಟು, ನಾಯಕನ ಜೊತೆಗೆ ಮೈಂಡ್‌ಗೆಮ್‌ ಆಡುವುದಕ್ಕೆ ಪ್ರಾರಂಭಿಸಿದ ಮೇಲಂತೂ ಚಿತ್ರ ಮಜವಾಗುತ್ತದೆ.

ಆದರೂ ಚಿತ್ರದ ಅವಧಿ ಕಡಿಮೆಯಾಗಿ, ಇನ್ನಷ್ಟು ಚುರುಕಾಗಿದ್ದರೆ, ಇನ್ನಷ್ಟು ಕಳೆಗಟ್ಟುವ ಸಾಧ್ಯತೆ ಇತ್ತು. ತಮ್ಮ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ಪ್ರದೀಪ್‌ ಸಾಕಷ್ಟು ಮಾಗಿದ್ದಾರೆ. ಆ್ಯಕ್ಷನ್‌ ದೃಶ್ಯಗಳಲ್ಲಿ ಹೆಚ್ಚು ಗಮನಸೆಳೆಯುತ್ತಾರೆ. ಬಹಳ ವರ್ಷಗಳ ನಂತರ ನಟಿಸಿರುವ ಶಿವರಾಮ್‌ ಸಹ ಕೆಲವು ಕಡೆ ಇಷ್ಟವಾಗುತ್ತಾರೆ. ಆದರೆ, ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗಮನಸೆಳೆಯುವುದೆಂದರೆ ಅದು ರವಿಶಂಕರ್‌ ಮತ್ತು ದೀಪಕ್‌ ಶೆಟ್ಟಿ. ಕ್ಲೈಮ್ಯಾಕ್ಸ್‌ನಲ್ಲಿ ರವಿಶಂಕರ್‌ ಅಭಿನಯದ ಬಗ್ಗೆ ಹೇಳುವುದಕ್ಕಿಂತ, ನೋಡಿ ಆನಂದಿಸಬೇಕು.

ದೀಪಕ್‌ ಶೆಟ್ಟಿ ಸಹ ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಚಿಕ್ಕಣ್ಣ, ಸಾಧು, ರಂಗಾಯಣ ರಘು ನಗಿಸುವಲ್ಲಿ ಮತ್ತು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಜೇಶ್‌ ನಟರಂಗ, ಅವಿನಾಶ್‌ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನಿರ್ದೇಶನದಲ್ಲಿ ದೆವ್ವದ ಹಾಡು ಮಜ ಕೇಳುವುದಕ್ಕೂ, ನೋಡುವುದಕ್ಕೂ ಖುಷಿ ಕೊಡುತ್ತದೆ. ಛಾಯಾಗ್ರಾಹಕ ಸುಧಾಕರ್‌ ರಾಜ್‌ ಇಡೀ ಚಿತ್ರವನ್ನು ಖುಷಿಯಾಗುವಂತೆ ಸೆರೆಹಿಡಿದಿದ್ದಾರೆ.

ಚಿತ್ರ: ಟೈಗರ್‌
ನಿರ್ಮಾಪಕಿ: ಚಿಕ್ಕಬೋರಮ್ಮ
ನಿರ್ದೇಶನ: ನಂದಕಿಶೋರ್‌
ತಾರಾಗಣ: ಪ್ರದೀಪ್‌, ಮಧುರಿಮಾ, ಶಿವರಾಮ್‌, ರವಿಶಂಕರ್‌, ಸಾಧು ಕೋಕಿಲ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next