ಕಲಾವಿದರು ಕಲೆಯನ್ನು ಉಳಿಸುತ್ತಾರೆ. ಪ್ರೇಕ್ಷಕರನ್ನು ರಂಜಿಸುವ ಅವರಿಗೆ ಹಣ ಮತ್ತು ಕೀರ್ತಿ ಗಳೆರಡೂ ಲಭಿಸುತ್ತವೆ. ಆದರೆ ಇವೆರಡರ ಪ್ರಯೋಜನವಿಲ್ಲದೆ ಕಲೆಯ ಸಂರಕ್ಷಣೆಯಲ್ಲಿ ಮೌನಪಾತ್ರ ವಹಿಸುವವರು ಕಲಾವಿದರಲ್ಲದ ಕಲಾವಿದರು. ಚೌಕಿಯ ಕೆಲಸ, ಡೇರೆಯ ಕೆಲಸ, ರಂಗಸ್ಥಳ ಕಟ್ಟುವ ಕೆಲಸ, ಕುಶಲ ಕರ್ಮಿಗಳು… ಹೀಗೆ ಕಲಾವಿದರೆಂದು ಕರೆಸಿಕೊಳ್ಳದ ಕಲಾವಿದರನೇಕರು ಈ ಕಲಾಲೋಕದೊಳಗಿ ದ್ದಾರೆ. ಇವರು ಕೇವಲ ಸಂಬಳಕ್ಕಾಗಿ ದುಡಿಯುವವರಲ್ಲ. ಇವರೊಳಗೆ ಯಕ್ಷಗಾನವನ್ನು ಉತ್ಕಟವಾಗಿ ಪ್ರೀತಿಸುವ ಹೃದಯವಿದೆ. ಮೇಳದ ಕಷ್ಟ- ಕಾರ್ಪಣ್ಯಗಳಲ್ಲೇ ಆನಂದವನ್ನು ಅನುಭವಿಸುವ ಕಲಾ ಅಸ್ಮಿತೆಯಿದೆ. ಇಂತಹ ಕಲಾವಿದರೊಳಗೊಬ್ಬ ಸಜಂಕಿಲ ರಘು ಪುರುಷ.
ಇತ್ತೀಚೆಗೆ ನಿಧನರಾದ ರಘು ಪುರುಷ ಬಾಲ್ಯ ದಲ್ಲೇ ಯಕ್ಷಗಾನದಿಂದ ಆಕರ್ಷಿತರಾದವರು. ಭವಿಷ್ಯ ಹೇಳುವ ಕುಲದಲ್ಲಿ ಹುಟ್ಟಿದ ಇವರು ಭವಿಷ್ಯ ಕಟ್ಟಿಕೊಳ್ಳಲು ಹೊರಟದ್ದು ಮೇಳಕ್ಕೆ. ಆರಂಭದಲ್ಲಿ ನಿತ್ಯವೇಷ ಕುಣಿಯುತ್ತಿದ್ದ ಇವರು ಮತ್ತೆ ಚೌಕಿ ಕೆಲಸಕ್ಕೆ ಸೇರಿಕೊಂಡರು. ಕರ್ನಾಟಕ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಜತೆಜತೆಗೆ ವೇಷಭೂಷಣ ತಯಾರಿಯಲ್ಲಿ ಆಸಕ್ತಿ ಮೊಳೆಯಿತು. ಬೇಸಗೆಯಲ್ಲಿ ಮೇಳ, ಮಳೆಗಾಲದಲ್ಲಿ ವೇಷಭೂಷಣ ತಯಾರಿ. ಹೀಗೆ ಯಕ್ಷಗಾನದಿಂದ ಬದುಕು ಸಾಗಿಸುತ್ತಿದ್ದ ರಘು ಪುರುಷ ಬಹುಬೇಗನೆ ಪ್ರಸಾದನ ಕಲಾವಿದರಾಗಿ ರೂಪುಗೊಂಡರು.
ತೆಂಕು ತಿಟ್ಟಿನ ಪ್ರಮುಖ ವೇಷಭೂಷಣ ಮತ್ತು ಪ್ರಸಾದನ ಸಂಸ್ಥೆಗಳಲ್ಲಿ ಒಂದಾದ ದೇವಕಾನ ಕೃಷ್ಣಭಟ್ಟರ ಶ್ರೀ ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯ ಪ್ರಧಾನ ಪ್ರಸಾಧನ ಕಲಾವಿದರಾಗಿದ್ದ ಇವರು ಯಕ್ಷಗಾನದ ಎಲ್ಲ ಬಗೆಯ ಕಿರೀಟ ತಯಾರಿಯಲ್ಲಿ ನಿಸ್ಸೀಮರು. ಎಡನೀರು, ಕಟೀಲು, ಕೊಲ್ಲಂಗಾನ ಮೇಳಗಳಲ್ಲಿ ಇವರ ಕರಕೌಶಲದ ಕಿರೀಟಗಳನ್ನು ಕಾಣಬಹುದು. ಮುಂಬಯಿ, ಪುಣೆ ಹಾಗೂ ಅಮೆರಿಕಗಳಿಗೂ ಇವರು ರಚಿಸಿದ ಕಿರೀಟಗಳು ಸಾಗಿವೆ. ಆರಾಧನಾ ಭಾವದಿಂದ ತನ್ನ ಪಾಡಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ರಘು ಪುರುಷ ತನ್ನ ಕೊನೆಯ ದಿನದ ತನಕವೂ ಕೆಲಸ ಮಾಡಿದ್ದಾರೆ.
ಬಾಯಾರು ಸಮೀಪದ ಸಜಂಕಿಲ ಸುಬ್ಬ ಪುರುಷ- ಕೊರಪ್ಪೊಳು ದಂಪತಿ ಪುತ್ರ ರಘು ಕೆಲವು ಕಾಲ ಅಡ್ಯನಡ್ಕದಲ್ಲಿ ವಾಸವಾಗಿದ್ದರು. ಕಮಲ ಲಕ್ಷ್ಮೀ ಮತ್ತು ಇಬ್ಬರು ಮಕ್ಕಳ ಜತೆ ವಾಸವಾಗಿದ್ದ ಅವರು ಗಣೇಶ ಕಲಾವೃಂದದ ಖಾಯಂ ಕಲಾವಿದರು. ಯಕ್ಷಗಾನದ ವೇಷಭೂಷಣ ತಯಾರಿಸುವ ಹೊಸ ಹೊಸ ಕೈಗಳು ಕಾಣದಿರುವ ಈ ಕಾಲದಲ್ಲಿ ಒಬ್ಬ ಅತ್ಯುತ್ತಮ ಯಕ್ಷ ಕುಶಲಕರ್ಮಿಯ ನಿರ್ಗಮನ ಕಲಾಕ್ಷೇತ್ರಕ್ಕೆ ದೊಡ್ಡ ನಷ್ಟ. ತನ್ನ ಕಲಾಪ್ರಜ್ಞೆ ಮತ್ತು ಕರಕೌಶಲದಿಂದ ಕಲಾವಿದರೆಲ್ಲರ ಪ್ರಶಂಸೆಗೆ ಹಾಗೂ ಅಭಿಮಾನಿಗಳ ಹಲವಾರು ಸಮ್ಮಾನಗಳಿಗೆ ಭಾಜನರಾದ ರಘು ಪುರುಷರು ಇನ್ನು ನೆನಪು ಮಾತ್ರ. ಅವರ ಕಿರೀಟಗಳು ರಂಗಸ್ಥಳದ ರಾಜಮಹಾರಾಜರ ಶಿರದಲ್ಲಿ ಶೋಭಿಸುತ್ತಿವೆ.
ತಾರಾನಾಥ ವರ್ಕಾಡಿ