ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟನ್ಸಿ ಮಧ್ಯೆ ಒಡಂಬಡಿಕೆಗೆ ಬುಧವಾರ ಸಹಿ ಹಾಕಲಾಯಿತು. ಪಾಲಿಕೆ ಆಯುಕ್ತರ ಕಚೇರಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಒಡಂಬಡಿಕೆ ನಡೆಯಿತು.
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟನ್ಸಿ 5 ವರ್ಷಗಳವರೆಗೆ ಯೋಜನೆ ಅನುಷ್ಠಾನ ಹಾಗೂ ನಿರ್ವಹಣೆ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಪ್ರೈಸ್ ವಾಟರ್‌ಕೂಪರ್, ಟಾಟಾ ಕನ್ಸಲ್ಟನ್ಸಿ ಸರ್ವೀಸ್ ಹಾಗೂ ಹೆಗಡೆ ಆ್ಯಂಡ್ ಅಮ್ಮಿನಬಾವಿ ಕನ್ಸಲ್ಟ್ ಸಂಸ್ಥೆಗಳು ಜಂಟಿಯಾಗಿ ಪ್ರಾಜೆಕ್ಟ್ ನಿರ್ವಹಣೆಗೆ ಮಾರ್ಗದರ್ಶನ ಮಾಡಲಿವೆ.
ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯವಾಗಿದೆ. ಜನರಿಗೆ ಯೋಜನೆ ಕುರಿತು ಮಾಹಿತಿ ನೀಡಲು ಹಾಗೂ ಜನರ ಅಭಿಪ್ರಾಯ ಪಡೆಯಲು 10 ದಿನಗಳೊಳಗೆ ಸಮಾಲೋಚನೆ ಮಾಡಲಾಗುವುದು ಎಂದರು. ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ 6 ಸಮಿತಿಗಳನ್ನು ಮಾಡಿ ಅದಕ್ಕೆ ಕನಿಷ್ಟ 20 ವರ್ಷ ಅನುಭವ ಹೊಂದಿದವರನ್ನು ನೇಮಕ ಮಾಡಲಾಗುವುದು.
ಸಿವಿಲ್, ಮಾಹಿತಿ ತಂತ್ರಜ್ಞಾನ, ಘನ ತ್ಯಾಜ್ಯ ವಿಲೇವಾರಿ, ಕೆರೆ ಅಭಿವೃದ್ಧಿ, ಹಣಕಾಸು ಸೇರಿದಂತೆ 6 ಸಮಿತಿಗಳನ್ನು ರಚಿಸಲಾಗುವುದು ಎಂದರು. ಸ್ಮಾಟ್ ಸಿಟಿ ಯೋಜನೆ ಕುರಿತು ಇನ್ನೆರಡು ತಿಂಗಳಲ್ಲಿ ವೆಬ್‌ಸೈಟ್ ಆರಂಭಿಸಲಾಗುವುದು. ಜನರಲ್ಲಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.
ಸಮೀಕ್ಷೆ ಕಾರ್ಯ ಪೂರ್ಣಗೊಂಡು ಅಕ್ಟೋಬರ್ ವೇಳೆಗೆ ಬಹುತೇಕ ಕಾಮಗಾರಿಗಳಿಗೆ ಅಕ್ಟೋಬರ್‌ನಲ್ಲಿ ಟೆಂಡರ್ ಕರೆಯಲಾಗುವುದು. ಇದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕಾಮಗಾರಿ ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳಲು ಪೂರಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರೈಸ್‌ವಾಟರ್‌ಹೌಸ್‌ಕೂಪರ್ ಇಂಟರ್ ನ್ಯಾಷನಲ್ ಲಿಮಿಟೆಡ್‌ನ ಪ್ರತಿನಿಧಿ ಅನ್ವೇಷ ಗುಪ್ತಾ ಮಾತನಾಡಿ, ಯೋಜನೆಯನ್ನು ಸಾಧ್ಯವಾದಷ್ಟು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಉತ್ಸುಕರಾಗಿದ್ದೇವೆ. ಈಗ ಕೆಲವು ಕಾಮಗಾರಿಗಳ ಸಮೀಕ್ಷೆ ನಡೆಯುತ್ತಿದ್ದು, ನಂತರ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು. ಅಜೀಜ್ ದೇಸಾಯಿ, ಎಸ್.ಎಚ್ .ನರೇಗಲ್ ಸಭೆಯಲ್ಲಿ ಇದ್ದರು.