Advertisement

ಕಾರ್ಗೋ ಹಬ್‌ನಿಂದ ಭೂಮಿ ಕಳೆದುಕೊಳ್ಳುವ ಭೀತಿ

03:34 PM Dec 16, 2017 | |

ಬೆಳ್ಮಣ್‌: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಸ್ತಾರಗೊಳಿಸುವುದರೊಂದಿಗೆ ಕಾರ್ಗೋ ಹಬ್‌ (ಸರಕು ನಿರ್ವಹಣೆ ಕೇಂದ್ರ) ನಿರ್ಮಾಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರವು 2,500 ಎಕರೆಯಲ್ಲಿ ರೂಪುರೇಷೆಗಳನ್ನು ತಯಾರಿಸಿದೆ. ಇದರಿಂದ ಇನ್ನಾ, ಮುಂಡ್ಕೂರು, ಮುಲ್ಲಡ್ಕ ಗ್ರಾಮಗಳ ಗ್ರಾಮಸ್ಥರಲ್ಲಿ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ.  

Advertisement

ಬೃಹತ್‌ ಯೋಜನೆಗೆ ಕಾರ್ಕಳ ತಾಲೂಕಿನ ಇನ್ನಾ ಗ್ರಾಮ  ಕೇಂದ್ರೀಕರಿಸಿ ಬೆಳ್ಮಣ್‌, ಮುಲ್ಲಡ್ಕ, ಮುಂಡ್ಕೂರು ಸಹಿತ ಪಲಿಮಾರು, ಎಲ್ಲೂರು, ಸಾಂತೂರು, ನಂದಿಕೂರು, ಅತಿಕಾರಿಬೆಟ್ಟು ಹಾಗೂ ಉಡುಪಿ ತಾಲೂಕಿನ ಹಿರಿಯಡ್ಕ ಮತ್ತು ಕುಂದಾಪುರ ತಾಲೂಕಿನ ಬೈಂದೂರು, ಶೀರೂರು, ಸಿದ್ದಾಪುರ ಗ್ರಾಮಗಳಲ್ಲಿ ವಿಮಾನ ನಿಲುಗಡೆಗೆ ಜಾಗ ಗುರುತಿಸಲಾಗಿದೆ ಎಂಬ ಸುದ್ದಿಗಳಿವೆ. ಸುದ್ದಿಗೆ ಪೂರಕವಾಗಿ ಈ ಗ್ರಾಮಗಳ ಜಮೀನು ನೋಂದಣಿಗಳನ್ನು ನೋಂದಣಿ ಕಚೇರಿಗಳಲ್ಲಿ ನಿಲ್ಲಿಸಲಾಗಿದೆ. ಸುದ್ದಿಗೆ ಪೂರಕವಾಗಿ ಕಳೆದ ಜೂನ್‌ನಲ್ಲಿ ಬೆಂಗಳೂರಲ್ಲಿ ನಡೆದಿದ್ದ ವಿಮಾನ ನಿಲ್ದಾಣ ಪ್ರಾಧಿಕಾರದ ಸಭೆಯಲ್ಲಿ ಮೂರು ಕಡೆ ಪರ್ಯಾಯ ಜಾಗ ಗುರುತಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. 

  ನೋಟಿಸ್‌ ಜಾರಿ 
ವಿಮಾನ ನಿಲ್ದಾಣಕ್ಕೆ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಮಧ್ಯಭಾಗದಲ್ಲಿ  ಮೂರು ಕಡೆ ಪರ್ಯಾಯ ಜಮೀನುಗಳನ್ನು ಗುರುತಿಸುವಂತೆ ಈಗಾಗಲೇ ತಹಶೀಲ್ದಾರರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.  

ಜನರಲ್ಲಿ  ಆತಂಕ
ಸುದ್ದಿಯಿಂದ ಕಳವಳಗೊಂಡಿರುವ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ. ತಾವು ನೆಲೆ ಕಂಡುಕೊಂಡಿರುವ ಪಿತ್ರಾರ್ಜಿತ, ಸ್ವಯಾರ್ಜಿತ ಆಸ್ತಿ ಕೈಬಿಟ್ಟುಹೋಗುವುದರ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಸ್ಪಷ್ಟ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ. ಕೃಷಿಕರಿಗಂತೂ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 

ಹೆಚ್ಚಿದ ದಟ್ಟಣೆ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಳೆದ 5 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಈಗ ಪ್ರತಿನಿತ್ಯ 56 ವಿಮಾನಗಳು ಮಂಗಳೂರಿಂದ ಹಾರಾಟ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ  80 ರಿಂದ 102 ವಿಮಾನಗಳು ಹಾರಾಟ ನಡೆಸಲಿವೆ ಎನ್ನಲಾಗಿದೆ.

Advertisement

30 ಎಕರೆ ರನ್‌ವೇಗೆ 
ಮಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿ, ವಾಹನದಟ್ಟಣೆ ನಿಭಾಯಿಸುವ ನಿಟ್ಟಿನಲ್ಲಿ 30 ಎಕರೆ ಸ್ಥಳ ರನ್‌ವೇಗೆ ಮತ್ತು 3 ಎಕರೆ ಸ್ಥಳ ರನ್‌ವೇ ಕೊನೆಯಲ್ಲಿ ಸುರಕ್ಷೆಗೆ ಕಾದಿರಿಸಲು ತೀರ್ಮಾನಿಸಲಾಗಿದೆ. ಬಾಕಿ ಉಳಿದ ಕಾಮಗಾರಿ, ಸೇತುವೆ ನಿರ್ಮಾಣಕ್ಕೂ ಕೆಲ ಪ್ರಸ್ತಾವನೆ ಮಾಡಲಾಗಿದೆ.

ವಿಮಾನ ನಿಲ್ದಾಣಕ್ಕಾಗಿ ಇನ್ನಾ ಗ್ರಾಮ ಗುರುತಿಸಿದ್ದಾರೆ ಎನ್ನುವ ಮಾಹಿತಿ ಇದೆ. ಆದರೆ ಯಾವುದೇ ಸರ್ವೆ ಕಾರ್ಯ ನಡೆದ ಬಗ್ಗೆ ಮಾಹಿತಿ ಇಲ್ಲ. 
ರೇಷ್ಮಾ ಉದಯ್‌ ಶೆಟ್ಟಿ, ಜಿ.ಪಂ. ಸದಸ್ಯರು, ಬೆಳ್ಮಣ್‌

ಶರತ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next