ಹುಬ್ಬಳ್ಳಿ: ಗುತ್ತಿಗೆ ಪೌರ ಕಾರ್ಮಿಕರ ಮಾಸಿಕ ವೇತನ, ಉಪಾಹಾರ ಭತ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲು ಮಹಾನಗರ ಪಾಲಿಕೆ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ನೇತೃತ್ವದಲ್ಲಿ ಗುತ್ತಿಗೆ ಪೌರಕಾರ್ಮಿಕರು ಇಲ್ಲಿನ ಪಾಲಿಕೆ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲವಾಗಿದ್ದರಿಂದ ನ.8ರಂದು ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಹಾಗೂ ಘನತ್ಯಾಜ್ಯ ನಿರ್ವಹಣಾ ವಿಭಾಗದ ಅಧಿಕಾರಿಗಳು ಬೇಡಿಕೆಗಳನ್ನು ಈಡೇರಿಸುವುದಾಗಿ ಲಿಖೀತವಾಗಿ ಭರವಸೆ ನೀಡಿದ್ದರು.
ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳ ವೇತನ ಎರಡು ಮೂರು ದಿನಗಳಲ್ಲಿ ಪಾವತಿ ಮಾಡುವುದು, 9 ತಿಂಗಳ ಉಪಾಹಾರ ಭತ್ಯೆಯನ್ನು ಎರಡು ದಿನದಲ್ಲಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವುದೇ ಡಿಕೆಗಳನ್ನು ಪಾಲಿಕೆ ಅಧಿಕಾರಿಗಳು ಈಡೇರಿಸಿಲ್ಲ. ಭರವಸೆ ನೀಡಿ 10 ದಿನ ಕಳೆದರೂ ಮಾಸಿಕ ವೇತನ ಹಾಗೂ ಸುರಕ್ಷಾ ಸಾಧನಗಳನ್ನು ಪೂರೈಸಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ ಮಾತನಾಡಿ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೀಡಿದ ಕೆಲವು ಸೂಚನೆಗಳನ್ನು ಪಾಲನೆ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬಯೋಮೆಟ್ರಿಕ್ ಯಂತ್ರಗಳ ದುರ್ಬಳಕೆ ತಡೆಯುವಲ್ಲಿ ವಲಯ ಕಚೇರಿಗಳ ಸಹಾಯಕ ಆಯುಕ್ತರು ಹಾಗೂ ಇನ್‌ಸ್ಪೆಕ್ಟರ್‌ಗಳು ವೈಫಲ್ಯ ಕಂಡಿದ್ದಾರೆ ಎಂದು ಆರೋಪಿಸಿದರು.
ಸೋಮು ಮೊರಬದ, ಗಂಗಮ್ಮ ಸಿದ್ರಾಮಪುರ, ನಾಗಮ್ಮ ಗೊಲ್ಲರ, ಶರಣಪ್ಪ ಅಮರಾವತಿ, ಕಸ್ತೂರೆವ್ವ ಬೆಂಗುಂದಿ, ಗಾಳೆಪ್ಪ ದ್ವಾಸಲಕೇರಿ, ಪರಶುರಾಮ ಕಡಕೋಳ, ಬಸವರಾಜ ದೊಡ್ಡಮನಿ, ಕನಕಪ್ಪ ಕೊಟಬಾಗಿ, ಮಂಜುನಾಥ ನಾಗನೂರ, ಕಾಶಿನಾಥ ಮಸರಕಲ್ಲ, ಆನಂದ ಬಾವೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.