Advertisement

ವೈಟ್‌ಟಾಪಿಂಗ್‌ ರಸ್ತೆಯಲ್ಲಿ ಅತಿವೇಗ

11:26 AM Feb 22, 2018 | Team Udayavani |

ಬೆಂಗಳೂರು: ನಗರದ ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸುವುದು ಹಾಗೂ ಮಾರ್ಗಗಳ ಭವ್ಯತೆಯನ್ನು
ಹೆಚ್ಚಿಸುವ ನಿಟ್ಟಿನಲ್ಲಿ ವೈಟ್‌ಟಾಪಿಂಗ್‌ ಮಾಡಲಾಗುತ್ತಿದೆ. ಆದರೆ ವೈಟ್‌ಟಾಪಿಂಗ್‌ ಮಾರ್ಗಗಳಲ್ಲಿ ವಾಹನ ಸವಾರರು
ನಿಯಂತ್ರಿಸಲಾಗದಷ್ಟು ವೇಗದಲ್ಲಿ ಸಾಗಿ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ವಾಹನ ಸವಾರರ ವೇಗ ನಿಯಂತ್ರಿಸುವುದೇ ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Advertisement

ಡಾಂಬರು ರಸ್ತೆಗಳಲ್ಲಿ ಗುಂಡಿಗಳು, ಹಂಪ್‌ಗ್ಳು ಸರ್ವೇಸಾಮಾನ್ಯ. ಹಾಗಾಗಿ, ವಾಹನಗಳ ವೇಗಮಿತಿ ಕಡಿಮೆ
ಇರುತ್ತದೆ. ಆದರೆ, ವೈಟ್‌ಟಾಪಿಂಗ್‌ನಲ್ಲಿ ಇದಾವುದರ ಕಿರಿಕಿರಿಯೂ ಇರುವುದಿಲ್ಲ. ಗುಂಡಿಮುಕ್ತ, ದೀರ್ಘ‌ ಬಾಳಿಕೆ
ಮತ್ತು ನಗರದ ಪ್ರತಿಷ್ಠೆಯನ್ನು ಹೆಚ್ಚಿಸಲು 93.47 ಕಿ.ಮೀ. ಉದ್ದದ 29 ರಸ್ತೆಗಳು ಮತ್ತು ಆರು ಜಂಕ್ಷನ್‌ಗಳಲ್ಲಿ ವೈಟ್‌
ಟಾಪಿಂಗ್‌ ರಸ್ತೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಪೈಕಿ ಈಗಾಗಲೇ ಏಳು ರಸ್ತೆಗಳನ್ನು ವಿವಿಧ ಹಂತಗಳಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ. ಈ ರಸ್ತೆಗಳಲ್ಲಿ ವಾಹನಗಳ ವೇಗಮಿತಿ ಹೆಚ್ಚಳವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ ಎಂದು ಸಂಚಾರ ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರೆ.

ಕೇವಲ 3 ಕಿ.ಮೀ. ಉದ್ದದ ಹೊರವರ್ತುಲ ರಸ್ತೆಯಲ್ಲೇ 11 ಕಡೆ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ಜತೆಗೆ ಪೈ
ಲೇಔಟ್‌ನಿಂದ ಹೊರಮಾವು ಸೇತುವೆ ಮಧ್ಯೆ ಬೀದಿದೀಪಗಳನ್ನು ಅಳವಡಿಸುವಂತೆ ಪಾಲಿಕೆಗೆ ಸಂಚಾರ
ಪೊಲೀಸರು ಮನವಿ ಮಾಡಿದ್ದಾರೆ. 

ಬೇಡಿಕೆ ಬಂದರೆ ಕ್ರಮ; ಅಧಿಕಾರಿ: ಸಾಮಾನ್ಯ ರಸ್ತೆಗಳಲ್ಲಿ ಗುಂಡಿಗಳು ಸೇರಿದಂತೆ ಒಂದಿಲ್ಲೊಂದು ಅಡತಡೆಗಳು
ಇರುತ್ತವೆ. ಹಾಗಾಗಿ, ವಾಹನಗಳ ವೇಗ ತುಸು ಕಡಿಮೆ ಇರುತ್ತದೆ. ಇಲ್ಲಿ ಅಡತಡೆಗಳು ಇಲ್ಲದಿರುವುದ ರಿಂದ
ವೇಗವಾಗಿ ಹೋಗುತ್ತಾರೆ. ಇದು ವಾಹನ ಸವಾರರ ಸಮಸ್ಯೆ. ಅಷ್ಟಕ್ಕೂ ಐಆರ್‌ಸಿ (ಇಂಡಿಯನ್‌ ರೋಡ್ಸ್‌
ಕಾಂಗ್ರೆಸ್‌) ನಿಯಮದ ಪ್ರಕಾರ ನಗರದ ರಸ್ತೆಗಳಲ್ಲಿ ಉಬ್ಬುಗಳನ್ನು ನಿರ್ಮಿಸುವಂತಿಲ್ಲ. ಆದರೆ ಸಂಚಾರ
ಪೊಲೀಸರಿಂದ ಬೇಡಿಕೆಗಳು ಬಂದರೆ, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ
ಎಂಜಿನಿಯರೊಬ್ಬರು ತಿಳಿಸುತ್ತಾರೆ.

ಈ ಮಧ್ಯೆ ಪರ್ಯಾಯ ಮಾರ್ಗ ಕಲ್ಪಿಸದೆ ಬಹುತೇಕ ಕಡೆ ಕಾಮಗಾರಿ ಕೈಗೊಳ್ಳಲಾಗಿದ್ದು, ಇದರಿಂದ ವಾಹನದಟ್ಟಣೆ
ಉಂಟಾಗಿ, ವಾಹನಗಳ ವೇಗಮಿತಿ ಅರ್ಧಕ್ಕರ್ಧ ಕಡಿಮೆಯಾಗಿದೆ. ಜತೆಗೆ ಸಂಚಾರದಟ್ಟಣೆಯಿಂದ ಜನ ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಕಾಮಗಾರಿ ಪೂರ್ಣಗೊಳಿಸಿದ ಬಳಿಕವಷ್ಟೇ ಮುಂದಿನ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಈವರೆಗೆ ಒಟ್ಟಾರೆ 13.35 ಕಿ.ಮೀ. ಉದ್ದದ ರಸ್ತೆಯನ್ನು ಸೇವೆಗೆ ಮುಕ್ತಗೊಳಿಸಲಾಗಿದೆ. 

Advertisement

ವರ್ಷದಲ್ಲಿ 21 ಪಾದಚಾರಿಗಳು ಬಲಿ 
ಹೊಸೂರು ರಸ್ತೆಯೊಂದರಲ್ಲೇ ಸುರಂಗ ಮಾರ್ಗಗಳಿದ್ದರೂ ಉಪಯೋಗಿಸದ ಸ್ಥಿತಿ ಇದ್ದು, ಇದರಿಂದ
ಕಳೆದ ಒಂದು ವರ್ಷದಲ್ಲಿ 21 ಜನ ಪಾದಚಾರಿಗಳು ಬಲಿಯಾಗಿದ್ದಾರೆ! ಹೌದು, ಹೊಸೂರು ರಸ್ತೆಯಲ್ಲಿ ನಾಲ್ಕು ಸುರಂಗ ಮಾರ್ಗಗಳಿದ್ದರೂ ಅವುಗಳ ಸಮರ್ಪಕ ಬಳಕೆ ಆಗುತ್ತಿಲ್ಲ. ರಾತ್ರಿ 9ರ ನಂತರ ಈ ಸುರಂಗ ಮಾರ್ಗಗಳನ್ನು ಮುಚ್ಚಲಾಗುತ್ತದೆ. ಪರಿಣಾಮ ರಸ್ತೆ ಅಪಘಾತಗಳಲ್ಲಿ ಪಾದಚಾರಿಗಳು ಬಲಿಯಾಗುತ್ತಿದ್ದು, ಈ ಸಾವುಗಳು ರಾತ್ರಿ ವೇಳೆಯಲ್ಲೇ ನಡೆದಿರುವುದು ಬೆಳಕಿಗೆಬಂದಿದೆ.

ಆದ್ದರಿಂದ ಕೂಡಲೇ ಹಾಲಿ ಇರುವ ಸುರಂಗ ಮಾರ್ಗಗಳು ದಿನದ 24 ಗಂಟೆ ಕಾರ್ಯನಿರ್ವಹಿಸುವಂತಾಗಬೇಕು. ಸುರಂಗ ಮಾರ್ಗದ ಎರಡೂ ಬದಿಗಳಲ್ಲಿ ಗಾಡ್‌ಗಳನ್ನು ನೇಮಿಸಬೇಕು. ಶಿಥಿಲಗೊಂಡ ಮಾರ್ಗಗಳನ್ನು ತುರ್ತಾಗಿ ದುರಸ್ತಿಗೊಳಿಸಬೇಕು. ಸುರಂಗ ಮಾರ್ಗದಲ್ಲಿ ಯುಪಿಎಸ್‌ಸಹಿತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದೂ ಅಭಿಷೇಕ್‌ ಗೋಯಲ್‌ ಮನವಿ ಮಾಡಿದ್ದಾರೆ.

ರಸ್ತೆ ಉಬ್ಬುಗಳು ಅವೈಜ್ಞಾನಿಕ; ಕೆಲವೆಡೆ ತೆರವು
ಹೆಣ್ಣೂರು ಸೇತುವೆಯಿಂದ ಕಸ್ತೂರಿನಗರದ ನಡುವಿನ ವೈಟ್‌ಟಾಪಿಂಗ್‌ ರಸ್ತೆಯಲ್ಲಿ ಈ ಮೊದಲು ಉಬ್ಬುಗಳನ್ನು ಹಾಕಲಾಗಿತ್ತು. ಆದರೆ, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ತೆರವುಗೊಳಿಸಲಾಯಿತು. ವೈಟ್‌ಟಾಪಿಂಗ್‌ ರಸ್ತೆಗಳ ನಿರ್ಮಾಣದ ಉದ್ದೇಶ ಸರಾಗವಾಗಿ ವಾಹನಗಳ ಸಂಚಾರ. ಆದರೆ, ಅಲ್ಲಿ ಉಬ್ಬುಗಳನ್ನು ಹಾಕಿರುವುದು ಅವೈಜ್ಞಾನಿಕವಾಗಿದೆ. ಇದು ಐಆರ್‌ಸಿ ನಿಯಮಕ್ಕೂ ವ್ಯತಿರಿಕ್ತವಾಗಿದೆ. ಹಾಗಾಗಿ, ತೆರವುಗೊಳಿಸುವಂತೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ತೆಗೆದುಹಾಕಲಾಗಿದೆ. ಮೂರು ಕಿ.ಮೀ. ಉದ್ದದ ರಸ್ತೆಯಲ್ಲಿ ಒಟ್ಟಾರೆ ಮೂರು ರಸ್ತೆ ಉಬ್ಬುಗಳನ್ನು ಅಳವಡಿಸಲಾಗಿತ್ತು.

ವೈಟ್‌ಟಾಪಿಂಗ್‌ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಆದರೆ, ವೇಗ ನಿಯಂತ್ರಣಕ್ಕೆ
ಉಬ್ಬುಗಳನ್ನು ಹಾಕಿದರೆ, ಜನರಿಂದಲೇ ಆಕ್ಷೇಪ ವ್ಯಕ್ತವಾಗುತ್ತಿದೆ. ನಿಯಂತ್ರಕಗಳನ್ನು ಅಳವಡಿಸದಿದ್ದರೆ, ಅಪಘಾತಕ್ಕೆ
ಎಡೆಮಾಡಿಕೊಟ್ಟಂತಾಗುತ್ತದೆ. ಹಾಗಾಗಿ, ಈ ನಿಟ್ಟಿನಲ್ಲಿ ಸಂಚಾರ ಪೊಲೀಸರ ಸಲಹೆ-ಸೂಚನೆಗಳನ್ನು ಪಡೆದು,
ಮುಂದುವರಿಯುತ್ತೇವೆ. 
ಎನ್‌. ಮಂಜುನಾಥ ಪ್ರಸಾದ್‌, ಆಯುಕ್ತರು, ಬಿಬಿಎಂಪಿ.

ಹೆಣ್ಣೂರು ಸೇತುವೆ-ಕಸ್ತೂರಿನಗರ ಮಧ್ಯೆ ತಿಂಗಳಲ್ಲಾದ ರಸ್ತೆ ಅಪಘಾತಗಳು
ಜ. 03: ನಿಂತ ಲಾರಿಗೆ ಇನ್ನೊವಾ ಕಾರು ಡಿಕ್ಕಿ. ಸಿ.ಎಂ. ಕುಮಾರ್‌ ಎಂಬಾತ ಗಂಭೀರ ಗಾಯ.
ಜ. 07: ಬೈಕ್‌ಗಳು ಪರಸ್ಪರ ಡಿಕ್ಕಿ. ಆರ್‌. ರಾಹುಲ್‌ ತೀವ್ರಗಾಯಗೊಂಡು, ಕೈಕಾಲುಗಳು ಊನ.
ಜ. 19: ಕಾರಿಗೆ ಬೈಕ್‌ ಡಿಕ್ಕಿ. ಬೈಕ್‌ ಸವಾರ ನಾಗಾರ್ಜುನ್‌ ಕುಮಾರ್‌ ಗಂಭೀರ ಗಾಯ.
ಜ. 24: ಪಾದಚಾರಿಗೆ ಬೈಕ್‌ ಡಿಕ್ಕಿ. ನರಸಿಂಹಲು (60) ಎಂಬಾತ ಸಾವು.
ಜ. 27: ರಸ್ತೆ ವಿಭಜಕಕ್ಕೆ ಬೈಕ್‌ ಡಿಕ್ಕಿ. ಎಡ್ವಿನ್‌ (18), ಅಲ್ವಿನ್‌ (21) ಸಾವು.
ಜ. 29: ವಾಹನಕ್ಕೆ ಬೈಕ್‌ ಡಿಕ್ಕಿ. ಬಸವರಾಜು ಎಂಬುವವರಿಗೆ ಗಂಭೀರ ಗಾಯ.
ಫೆ. 06: ರಸ್ತೆ ಬದಿ ನಿಂತಿದ್ದ ಟೈಲರ್‌ ಲಾರಿಯ ಕ್ಲಿನರ್‌ ಬಸವರಾಜುಗೆ ವಾಹನ ಡಿಕ್ಕಿ. ತೀವ್ರ ಗಾಯ. 

ಸೇವೆಗೆ ಮುಕ್ತಗೊಂಡ ರಸ್ತೆಗಳು
„ ಹೊರವರ್ತುಲ ರಸ್ತೆಯ ಹೆಣ್ಣೂರು ಸೇತುವೆ ಯಿಂದ ಕಸ್ತೂರಿನಗರದವರೆಗೆ 3 ಕಿ.ಮೀ.
„ ರಾಜ್‌ಕುಮಾರ್‌ ಸಮಾಧಿ ಸ್ಥಳದಿಂದ ಸುಮನಹಳ್ಳಿವರೆಗೆ 900 ಮೀ.
„ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಬಳಿ 450 ಮೀ.
„ ಆಡುಗೋಡಿ ರಸ್ತೆಯ ಆನೆಪಾಳ್ಯದಿಂದ ಸೇಂಟ್‌ ಜಾನ್ಸ್‌ ಆಸ್ಪತ್ರೆ ಜಂಕ್ಷನ್‌ವರೆಗೆ 3 ಕಿ.ಮೀ.
„ ಮಾಗಡಿ ರಸ್ತೆಯ ವಿಜಯನಗರದ ಬಳಿ1.50 ಕಿ.ಮೀ.
„ ಮೈಸೂರು ರಸ್ತೆಯಲ್ಲಿ ಬ್ರಿಯಾಂಡ್‌ ಚೌಕದಿಂದ ವೃಷಭಾವತಿ ಕಾಲುವೆವರೆಗೆ 3 ಕಿ.ಮೀ.
„ ಕೋರಮಂಗಲದ 20ನೇ ಮುಖ್ಯರಸ್ತೆಯಲ್ಲಿ1.50 ಕಿ.ಮೀ.

Advertisement

Udayavani is now on Telegram. Click here to join our channel and stay updated with the latest news.

Next