ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಸೆ.22 ರಿಂದ 24ರವರೆಗೆ ರೈತ ದಸರಾ ಆಯೋಜಿಸಲಾಗಿದೆ ಎಂದು ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರಾದ ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮಸುಂದ್ರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ರೈತ ದಸರಾದಲ್ಲಿ ಸಾವಯವ ಕೃಷಿ, ಸಿರಿಧಾನ್ಯ ಬೆಳೆಗಳಿಗೆ ಉತ್ತೇಜನ ಹಾಗೂ ಕೃಷಿಯಲ್ಲಿ ನೀರು ನಿರ್ವಹಣೆಗೆ ಒತ್ತು ನೀಡುವ ಕುರಿತು ಚರ್ಚೆ ಸಂವಾದ ನಡೆಯಲಿವೆ ಎಂದರು.
ದಸರಾ ಮಹೋತ್ಸವ ಆಚರಣಾ ಸಮಿತಿ ನಿರ್ಧಾರದಂತೆ ಈ ವರ್ಷ ತಾಲೂಕು ಮಟ್ಟದಲ್ಲಿ ಆಯೋಜಿಸುತ್ತಿದ್ದ ರೈತ ಕ್ರೀಡಾಕೂಟ ಹಾಗೂ ಕೆಸರುಗದ್ದೆ ಓಟವನ್ನು ಕೈಬಿಡಲಾಗಿದೆ ಎಂದು ಹೇಳಿದರು. ಸೆ.22ರ ಬೆಳಗ್ಗೆ 9.30ಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ರೈತ ದಸರಾ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ.
ಕಂಸಾಳೆ, ಡೊಳ್ಳು ಕುಣಿತ ಸೇರಿದಂತೆ ಜಾನಪದ ಕಲಾತಂಡಗಳು, ಅಲಂಕೃತ ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಜೆ.ಕೆ.ಮೈದಾನದಲ್ಲಿ ಮೆರವಣಿಗೆ ಅಂತ್ಯವಾಗಲಿದ್ದು, ಬೆಳಗ್ಗೆ 10.30ಕ್ಕೆ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ, ಪಶುಪಾಲನಾ ಇಲಾಖೆ ಹಾಗೂ ಕೃಷಿ ಯಂತ್ರೋಪಕರಣ ಮಳಿಗೆಗಳ ವಸ್ತು ಪ್ರದರ್ಶನ ಹಾಗೂ ರೈತ ದಸರಾ ಕಾರ್ಯಕ್ರಮಗಳನ್ನು ಕೃಷಿ ಸಚಿವ ಕೃಷ್ಣ ಭೈರೇಗೌಡ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ 3ಕ್ಕೆ ಸಂವಾದ ನಡೆಯಲಿದ್ದು, ಕೃಷಿ ವಿವಿಗಳ ವಿಶ್ರಾಂತ ಕುಲಪತಿಗಳು, ವಿ.ಸಿ.ಫಾರಂನ ಕೃಷಿ ವಿಜಾnನಿಗಳನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸಲಾಗುವುದು ಎಂದು ಹೇಳಿದರು. ಸೆ.23ರಂದು ಜೆ.ಕೆ.ಮೈದಾನದಲ್ಲಿ ಬೆಳಗ್ಗೆ 9ಕ್ಕೆ ಕಾಲಿಗೆ ಗೋಣಿಚೀಲ ಕಟ್ಟಿ ಕುಪ್ಪಳಿಸುವ ಸ್ಪರ್ಧೆ, 11.30ಕ್ಕೆ ರೈತರಿಗೆ ಗುಂಡು ಎತ್ತುವ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ರೈತರಿಗೆ 50 ಕೆ.ಜಿ ತೂಕದ ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಧ್ಯಾಹ್ನ 1ಕ್ಕೆ ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಡುವ ಸ್ಪರ್ಧೆ ಹಾಗೂ ಚಮಚದಲ್ಲಿ ನಿಂಬೆಹಣ್ಣು ಇಟ್ಟು ಓಡುವ ಸ್ಪರ್ಧೆ ನಡೆಯಲಿದೆ ಎಂದರು.
ಸೆ.24ರ ಬೆಳಗ್ಗೆ 6.30ಕ್ಕೆ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಲಾಗಿದ್ದು, ಹಸುಗಳ ಮಾಲಿಕರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ ಬಹುಮಾನ 40 ಸಾವಿರ ರೂ., ತೃತೀಯ ಬಹುಮಾನ 30 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
ಸಂಜೆ 5.30ಕ್ಕೆ ನಡೆಯುವ ರೈತ ದಸರಾ ಸಮಾರೋಪದಲ್ಲಿ ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಎ.ಮಂಜು ಬಹುಮಾನ ವಿತರಣೆ ಮಾಡಲಿದ್ದಾರೆಂದರು. ಇದೇ ವೇಳೆ ದಸರಾ ವಿಶೇಷಾಧಿಕಾರಿಗಳಾದ ಜಿಲ್ಲಾಧಿಕಾರಿ ರಂದೀಪ್ ಡಿ., ರೈತ ದಸರಾ ಭಿತ್ತಿಪತ್ರ ಬಿಡುಗಡೆ ಮಾಡಿದರು. ದಸರಾ ಉಪ ವಿಶೇಷಾಧಿಕಾರಿ ಕೆ.ಎಸ್.ಶಿವಕುಮಾರಸ್ವಾಮಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ.ಪ್ರಸಾದ್ ಮೂರ್ತಿ ಸುದ್ದಿಗೋಷ್ಠಿಯಲ್ಲಿ ಇದ್ದರು.