Advertisement

ಫ್ರೂಟ್ಸ್‌ ತಂತ್ರಾಂಶ: ಜಿಲ್ಲೆಯಲ್ಲಿ ಶೇ. 48.55ರಷ್ಟು ಮಾತ್ರ ಪ್ರಗತಿ

07:31 PM Oct 18, 2021 | Team Udayavani |

ಕಾರ್ಕಳ: ಕೃಷಿ ಇಲಾಖೆ ಅಭಿವೃದ್ಧಿಗೊಳಿಸಿರುವ ಫ್ರೂಟ್ಸ್‌ ತಂತ್ರಾಂಶದಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದ್ದು, ನೋಂದಣಿ ಆರಂಭಗೊಂಡಿದೆ. ರೈತರಲ್ಲಿ ಮಾಹಿತಿ ಕೊರತೆ, ನಿರಾಸಕ್ತಿಯ ಕಾರಣಕ್ಕೆ ಜಿಲ್ಲೆಯಲ್ಲಿ ಇದುವರೆಗೆ ಶೇ. 48.55ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಈ ತಂತ್ರಾಂಶದಲ್ಲಿ ಮಾಹಿತಿ ನೀಡಿದರೆ ಅಧಿಕ ಲಾಭಾಂಶ ಪಡೆಯಲು ರೈತರಿಗೆ ಅನುಕೂಲವಾಗಲಿದೆ.

Advertisement

ಇಲಾಖೆಯಿಂದ ಪ್ರಚಾರ ನಡೆದಿದ್ದರೂ ಎಲ್ಲರನ್ನು ತಲುಪಲು ಸಾಧ್ಯವಾಗಿಲ್ಲ. 2020-21ರ ಸರ್ವೇಯಂತೆ ಜಿಲ್ಲೆಯಲ್ಲಿ 9,12,936 ಲಕ್ಷ ಮಂದಿ ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೇ 4,43,245 ಲಕ್ಷ ಮಂದಿ ಮಾತ್ರ ನೋಂದಣಿ ಮಾಡಿದ್ದು, 4,69,691 ಲಕ್ಷ ಮಂದಿ ಬಾಕಿ ಉಳಿದಿದ್ದಾರೆ. ನೋಂದಣಿ ಆಗದಿದ್ದಲ್ಲಿ ಬಹುತೇಕ ರೈತರಿಗೆ ಸರಕಾರದಿಂದ ಕೃಷಿ ಇಲಾಖೆಯಡಿ ಸಿಗುವ ಸೌಲಭ್ಯ ಕೈತಪ್ಪುವ ಆತಂಕ ಇದೆ.

ಈ ತಂತ್ರಾಂಶದ ಮೂಲಕ ಬಿತ್ತನೆ ಬೀಜ, ಕೀಟನಾಶಕ, ರಾಸಾಯನಿಕ, ಗೊಬ್ಬರ, ಕಂದಾಯ, ಕೃಷಿ, ತೋಟಗಾರಿಕೆ ಉಪಕರಣ, ಹೈನುಗಾರಿಕೆ, ರೇಷ್ಮೆ, ಸಹಕಾರ ಇಲಾಖೆಗಳಿಂದ ಪಡೆಯುವ ವಿವಿಧ ಸವಲತ್ತು ಪಡೆಯಲು ಅನುಕೂಲವಾಗುತ್ತದೆ. ಸಸ್ಯ ಸಂರಕ್ಷಣ ಉಪಕರಣಗಳನ್ನು ಸಹಾಯ ಧನದಲ್ಲಿ ಪಡೆಯಬಹುದು. ಬ್ಯಾಂಕ್‌ ಸಾಲ, ಬೆಳೆ ವಿಮೆ ಸವಲತ್ತು ಪಡೆಯಲು ಸಹ ಅನುಕೂಲವಾಗುತ್ತದೆ. ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳದ ರೈತರಿಗೆ ಇಲಾಖೆಯಿಂದ ಯಾವುದೇ ಸೌಲಭ್ಯ, ರಿಯಾಯಿತಿ ದರದಲ್ಲಿ ನೀಡಲು ಅವಕಾಶ ಇರುವುದಿಲ್ಲ.

ನೋಂದಣಿಯಾದ ರೈತರಿಗೆ ಯೂನಿಕ್‌ ನಂಬರ್‌ ಇರುವ ಗುರುತಿನ ಸಂಖ್ಯೆ ನೀಡಲಾಗುತ್ತದೆ. ರೈತರ ಎಲ್ಲ ಮಾಹಿತಿ ಆನ್‌ಲೈನ್‌ನಲ್ಲೆ ನೋಂದಣಿಯಾಗುತ್ತದೆ. ಯೂನಿಕ್‌ ನಂಬರ್‌ ಇದ್ದಲ್ಲಿ ಎಲ್ಲ ವಿವರ ಅಲ್ಲಿಯೇ ಸಿಗುತ್ತದೆ. ಇಲಾಖೆಯಿಂದ ನೀಡಿರುವ ಎಲ್ಲ ಸೌಲಭ್ಯಗಳ ಮಾಹಿತಿ ಲಭ್ಯವಾಗಲಿದೆ. ಇದರಿಂದ ಸೌಲಭ್ಯಗಳ ದುರುಪಯೋಗವೂ ತಪ್ಪಲಿದೆ.

ರೈತರು ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ, ತಹಶೀಲ್ದಾರ್‌ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ನ್ಯಾಯಬೆಲೆ ಅಂಗಡಿ, ಕೃಷಿ ತೋಟಗಾರಿಕೆ, ರೇಷ್ಮೆ ಇಲಾಖೆ ಇದರಲ್ಲಿ ಯಾವುದಾದರೊಂದು ಕಚೇರಿಯಲ್ಲಿ ಪಹಣಿ, ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ಜೆರಾಕ್ಸ್‌, ಐಎಫ್ಸಿ ಕೋಡ್‌ ಸಹಿತ ಪ್ರತಿ, ಪಾಸ್‌ ಪೋರ್ಟ್‌ ಅಳತೆಯ ಫೊಟೋ, ಪ. ಜಾತಿ, ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಜೆರಾಕ್ಸ್‌ ಪ್ರತಿ ಸೇರಿದಂತೆ ಸೂಕ್ತ ದಾಖಲೆ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.

Advertisement

ಇದನ್ನೂ ಓದಿ:ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್-2021 ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಸಚಿವ ನಾರಾಯಣಗೌಡ

ಫ್ರೂಟ್ಸ್‌ ತಂತ್ರಾಂಶ ಏಕೆ?
ಕೃಷಿ ಇಲಾಖೆ ಕಳೆದ ಹಲವು ವರ್ಷಗಳಿಂದ ಕೆ-ಕಿಸಾನ್‌ ಯೋಜನೆಯಡಿ ನಾನಾ ಸವಲತ್ತು ನೀಡಲು ದತ್ತಾಂಶ ಸಂಗ್ರಹಿಸುತ್ತಿತ್ತು. ರೈತರ ವಿವರ ಸಂಗ್ರಹಣೆಯಲ್ಲಿ ಸಮಾಧಾನಕರ ಪ್ರಗತಿಯಾಗದ ಕಾರಣ ಇ-ಆಡಳಿತ ಇಲಾಖೆಯಿಂದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಗಳಲ್ಲಿ ಏಕರೂಪವಾಗಿ ರೈತರ ದತ್ತಾಂಶ ಒಂದು ಬಾರಿ ಸಂಗ್ರಹಿಸಿಡಲು ಫ್ರೂಟ್ಸ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಇದುವರೆಗೂ ತಂತ್ರಾಂಶದಲ್ಲಿ ನಮೂದಿಸಿಕೊಳ್ಳದೆ ಇರು ವವರು ಈಗ ನೋಂದಾಯಿಸಿ ಕೊಳ್ಳಬಹುದು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಇತರ ಸಂಬಂಧಿಸಿದ ಇಲಾಖೆಗಳಿಂದ ದೊರೆಯುವ ಸಹಾಯಧನ ಸೌಲಭ್ಯ ಗಳನ್ನು ಪಡೆಯಲು , ಬೆಂಬಲ ಬೆಲೆ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಹಾನಿ, ಪರಿಹಾರ, ಯೋಜನೆಗಳಿಗೆ ಫ್ರೂಟ್ಸ್‌ ಸಂಖ್ಯೆಯನ್ನು ಬಳಸಲಾಗುತ್ತದೆ. ನೋಂದಣಿ ಯಾಗದೆ ಇರುವ ರೈತರು ಕೂಡಲೇ ನೋಂದಾಯಿಸಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳು ಸೂಚನೆ ನೀಡುತ್ತಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೆಲವೆಡೆ ಸ್ಥಳಿಯಾಡಳಿತಗಳು ಜನರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿವೆ.

ರೈತರಿಗೆ ಮಾಹಿತಿ
ಫ್ರೂಟ್ಸ್‌ ತಂತ್ರಾಂಶದ ಬಗ್ಗೆ ರೈತರಲ್ಲಿ ಮಾಹಿತಿ ಕೊರತೆ ಇದೆ. ಅದಕ್ಕೆಂದು ಪರಿಸರದ ಮನೆಗಳಿಗೆ ತೆರಳಿ ರೈತರಿಗೆ ಮಾಹಿತಿ ನೀಡಿ ರೈತರು ಈ ತಂತ್ರಾಂಶದ ಸೌಲಭ್ಯದಿಂದ ವಂಚಿತರಾಗದಂತೆ ಪ್ರಯತ್ನಿಸಲಾಗುತ್ತಿದೆ.
-ಪ್ರಕಾಶ್‌ ರಾವ್‌ ಕಾರ್ಕಳ,
ಪುರಸಭಾ ಮಾಜಿ ಸದಸ್ಯ

ವಿಶೇಷ ಅಭಿಯಾನ
ಅನ್ಯ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಶೇಕಡಾವಾರು ನೋಂದಣಿ ಹೆಚ್ಚಿದೆ. ತಿಂಗಳ ಹಿಂದೆ ಶೇ. 36 ಇತ್ತು. ಇದೀಗ ಶೇ. 46ಕ್ಕೆ ತಲುಪಿದೆ. ಹಳ್ಳಿಗಳಲ್ಲಿ ನೋಂದಣಿಗೆ ವಿಶೇಷ ಅಭಿಯಾನ ಆರಂಭಿಸಿದ್ದು, ಗ್ರಾಮಲೆಕ್ಕಾಧಿಕಾರಿ ಮೂಲಕ ಪ್ರತಿ ರೈತರನ್ನು ನೋಂದಣಿಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.
-ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next