ಬೆಳ್ಮಣ್: ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ಡಿ. 23ರಂದು ನಡೆದ ಸಿರಿ ಧಾನ್ಯಗಳ ಕೃಷಿ ಸಮ್ಮೇಳನದಲ್ಲಿ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಕಡಂದಲೆಗುತ್ತು ಸುದರ್ಶನ ಶೆಟ್ಟಿ ಅವರಿಗೆ ಭಾರೀ ಅವಮಾನ ನಡೆದಿದೆ.
ಉತ್ತಮ ಪ್ರಗತಿಪರ ಕೃಷಿಕರಾಗಿದ್ದ ಸುದರ್ಶನ ಶೆಟ್ಟಿ ಅವರು ಅತ್ಯುತ್ತಮ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ತಿಳಿಸಿ ಸಮ್ಮೇಳನಕ್ಕೆ ಮುಂಚಿತವಾಗಿ ಆಹ್ವಾನ ನೀಡಲಾಗಿತ್ತು. ಅಲ್ಲದೆ ಪ್ರಯಾಣದ ವ್ಯವಸ್ಥೆಯನ್ನೂ ಮಾಡುವುದಾಗಿ ಇಲಾಖೆ ತಿಳಿಸಿತ್ತು. ಆದರೂ ಸುದರ್ಶನ ಶೆಟ್ಟಿ ಅವರು ತಮ್ಮ 20 ಮಂದಿ ಗೆಳೆಯರ ಬಳಗದ ಜತೆ ಕಾರ್ಯಕ್ರಮಕ್ಕೆ ಸಾಕಷ್ಟು ಮುಂಚಿತವಾಗಿ ಸ್ವಂತ ಖರ್ಚಿನಲ್ಲಿ ತೆರಳಿದ್ದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸಹಿತ ಶಾಸಕರು, ಜನಪ್ರತಿನಿಧಿಗಳಿದ್ದರು. ಕಾರ್ಯಕ್ರಮ ನಡೆದು ಧನ್ಯವಾದದೊಂದಿಗೆ ಮುಕ್ತಾಯ ಕಂಡರೂ ಅತ್ಯುತ್ತಮ ಕೃಷಿಕ ಪ್ರಶಸ್ತಿ ವಿತರಣೆ ನಡೆಯಲೇ ಇಲ್ಲ. ಬಳಿಕ ಇಲಾಖೆಯ ಸಿಬಂದಿಯೋರ್ವರು ಸಭೆಯಲ್ಲಿ ಸುದರ್ಶನ ಶೆಟ್ಟಿ ಅವರು ಕುಳಿತಿದ್ದಲ್ಲಿಗೆ ಬಂದು ಇಲಾಖೆ ಪ್ರಶಸ್ತಿಯಾಗಿ ಘೋಷಿಸಿದ್ದ ಪ್ರಶಸ್ತಿ ಹಣ 10,000 ರೂ.ಗಳ ಚೆಕ್ ನೀಡಿದ್ದರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಗಣ್ಯರ ಸಹಿತ ಬಹುತೇಕ ಮಂದಿ ನಿರ್ಗಮಿಸಿಯಾಗಿತ್ತು. ಇಂತಹ ಕಾಟಾಚಾರದ ಪ್ರಶಸ್ತಿ ಪ್ರದಾನ ಅಗತ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸುದರ್ಶನ ಶೆಟ್ಟಿ ಅವರು, ದೇಶದ ಬೆನ್ನೆಲುಬೆನಿಸಿರುವ ರೈತರ ಬಗ್ಗೆ ಸರಕಾರ, ಜನಪ್ರತಿನಿಧಿಗಳು ಹಾಗೂ ಇಲಾಖೆಯ ನಿರ್ಲಕ್ಷ್ಯಕ್ಕೆ ಈ ಘಟನೆ ಕೈಗನ್ನಡಿ ಎಂದು ಆರೋಪಿಸಿದ್ದಾರೆ.
ಕೃಷಿ ಚಟುವಟಿಕೆಗಳ ಬಗ್ಗೆ ಈಗಿನ ಮಂದಿ ನಿರಾಸಕ್ತಿ ತೋರುತ್ತಿರುವ ಈ ಕಾಲಘಟ್ಟದಲ್ಲಿ ಉತ್ಸಾಹದಿಂದ ಕೃಷಿ ಕಾಯಕ ನಡೆಸಿ ಇತರರಿಗೆ ಮಾದರಿ ಎನಿಸುತ್ತಿರುವ ಕೃಷಿಕರನ್ನೂ ಈ ರೀತಿ ನಿರ್ಲಕ್ಷಿಸುತ್ತಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದರ್ಶನ ಶೆಟ್ಟಿ ಅವರು ಭತ್ತ ಬೇಸಾಯದ ಜತೆಗೆ ಅಡಿಕೆ, ತೆಂಗು, ಕಾಳುಮೆಣಸು, ಮಾವು, ಗೇರು ಇತ್ಯಾದಿ ಕೃಷಿ, ಅಲ್ಲದೆ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಇಂತಹ ಕೃಷಿಕನ ಅವಗಣನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.