Advertisement

ಸಿಎಂ ಹೆಸರಲ್ಲಿ ಡೆತ್‌ನೋಟ್‌ ಬರೆದಿಟ್ಟು ರೈತ ಆತ್ಮಹತ್ಯೆ

06:20 AM Nov 24, 2018 | |

ಮಂಡ್ಯ: ಸಾಲಬಾಧೆ ತಾಳಲಾರದೆ ತಾಲೂಕಿನ ಕನ್ನಹಟ್ಟಿ ಗ್ರಾಮದ ರೈತ ಜೈಕುಮಾರ್‌ (42) ಮುಖ್ಯಮಂತ್ರಿ ಹೆಸರಲ್ಲಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. 

Advertisement

15 ವರ್ಷಗಳ ಹಿಂದೆ ಮದುವೆಯಾಗಿರುವ ಜೈಕುಮಾರ್‌ಗೆ ರಕ್ಷಿತಾ (13) ಹಾಗೂ ರಾಜೇಶ್‌(10) ಎಂಬ ಇಬ್ಬರು ಮಕ್ಕಳಿದ್ದಾರೆ. 35 ಗುಂಟೆ ಜಮೀನು ಹೊಂದಿದ್ದ ಇವರು, ಕಬ್ಬು, ತರಕಾರಿ ಬೆಳೆದು ಜೀವನ ನಡೆಸುತ್ತಿದ್ದರು.ಡೆತ್‌ನೋಟ್‌ನಲ್ಲಿ “ಮುಖ್ಯಮಂತ್ರಿಗಳ ಸನ್ನಿಧಾನಕ್ಕೆ, ಕರ್ನಾಟಕ ಸರ್ಕಾರ’ ಎಂದು ಆರಂಭಿಸಿ, “ನಾನು ಎರಡು ಲಕ್ಷ ರೂ.ವರೆಗೆ ಸಾಲ ಮಾಡಿದ್ದೇನೆ. 80 ಸಾವಿರ ರೂ.ಹಣವನ್ನು ವ್ಯವಸಾಯಕ್ಕೆ ಹಾಕಿದ್ದೆ. ಅದೂ ನನ್ನ ಕೈ ಹಿಡಿಯಲಿಲ್ಲ. ನನಗೆ ಗಂಟಲು ಕ್ಯಾನ್ಸರ್‌ ಇದ್ದು, ಶಸ್ತ್ರಚಿಕಿತ್ಸೆಗೆ 3 ಲಕ್ಷ ರೂ.ಬೇಕು ಎಂದು ವೈದ್ಯರು ತಿಳಿಸಿದ್ದಾರೆ. ನಾಲ್ಕು ವರ್ಷದ ಸತತ ಬರಗಾಲದಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ನಮ್ಮ ಕುಟುಂಬಕ್ಕೆ ಸಹಾಯ ಮಾಡಿ’ ಎಂದು ಬರೆದಿಟ್ಟಿದ್ದಾರೆ. ನಂತರ, ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಕಂಡ ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದರು.

ಈ ಮಧ್ಯೆ, ಖುದ್ದು ಮುಖ್ಯಮಂತ್ರಿ ಆಗಮನಕ್ಕೆ ಬಿಗಿಪಟ್ಟು ಹಿಡಿದ ಗ್ರಾಮಸ್ಥರು, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನಿರಾಕರಿಸಿದರು. ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು, ಗ್ರಾಮಸ್ಥರನ್ನು ಸಮಾಧಾನಪಡಿಸಲು ಯತ್ನಿಸಿದರು. ಈ ವೇಳೆ, ಪುಟ್ಟರಾಜು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ, ಸ್ಥಳದಲ್ಲೇ ಮೃತ ರೈತ ಜೈಕುಮಾರ್‌ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂ.ಹಾಗೂ ವೈಯಕ್ತಿಕವಾಗಿ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದರು. ಸಂಜೆಯ ವೇಳೆ ಗ್ರಾಮದಲ್ಲಿ ರೈತನ ಅಂತ್ಯಕ್ರಿಯೆ ನಡೆಯಿತು.

ನನ್ನ ಬಳಿ ಬಂದಿದ್ದರೆ ಹಣ ಕೊಡುತ್ತಿದ್ದೆ: ಸಿಎಂ
ಮಂಡ್ಯ
: “ಮೃತ ರೈತ ಜೈಕುಮಾರ್‌, ನನ್ನ ಬಳಿ ಬಂದಿದ್ದರೆ ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ನಾನೇ ಭರಿಸುತ್ತಿದ್ದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರೈತನ ಸಾವಿಗೆ ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬರುತ್ತಿದ್ದಾರೆ ಅನ್ನೋ ಕಾರಣಕ್ಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸುಳ್ಳು. ಅವರಿಗೆ ಕಾಯಿಲೆ ಇತ್ತು ಎನ್ನುವುದು ವಾರದ ಹಿಂದಷ್ಟೇ ಗೊತ್ತಾಗಿದೆ. ಕುಟುಂಬಕ್ಕೆ ಆರ್ಥಿಕ ಸಹಾಯ ಸಿಗಬಹುದು ಎಂಬ ಕಾರಣಕ್ಕೆ ಅವರು ಸಾವಿಗೆ ಶರಣಾಗಿದ್ದಾರೆ. ಅದರ ಬದಲು ನನ್ನ ಬಳಿ ಬಂದಿದ್ದರೆ ಶಸ್ತ್ರಚಿಕಿತ್ಸೆಗೆ ಬೇಕಾದ ಹಣವನ್ನು ನಾನೇ ಭರಿಸುತ್ತಿದ್ದೆ. ಬೇಕಾದ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದ್ದೆ. ಅವರು ಆತುರ ಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಷಾದಿಸಿದರು.

Advertisement

ಸದ್ಯದ ಪರಿಸ್ಥಿತಿಯಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಅಸಾಧ್ಯದ ಮಾತು. ಅದಕ್ಕಾಗಿ ಹೊಸ ಕಾರ್ಖಾನೆಯನ್ನು ಸ್ಥಾಪಿಸಲು ಚಿಂತನೆ ನಡೆಸುತ್ತಿದ್ದೇವೆ. ಕಬ್ಬು ಅರೆಯುವಿಕೆ ಸ್ಥಗಿತಗೊಳಿಸಿರುವ ಪಿಎಸ್‌ಎಸ್‌ಕೆ ಕಾರ್ಖಾನೆಗೂ ಕಾಯಕಲ್ಪ ನೀಡಲು ಸರ್ಕಾರ ಸಿದ್ಧವಿದೆ. ಅದಕ್ಕೆ ಪೂರಕವಾದ ಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next