Advertisement

ಮಳೆಯಿಂದಾಗಿ ಬೆಲೆ ಕುಸಿದರೂ ಬಿಕರಿಯಾಗದ ಹೂವು-ಹಣ್ಣು

12:16 PM Oct 16, 2017 | |

ಬೆಂಗಳೂರು: ಪ್ರತಿ ಹಬ್ಬದಲ್ಲೂ ಹೂವಿನ ದರ ಗಗನಕ್ಕೇರುವುದು ಸಾಮಾನ್ಯ. ಆದರೆ ದೀಪಾವಳಿ ಹಬ್ಬವಿದ್ದರೂ ಮಳೆಯ ಹಿನ್ನೆಲೆಯಲ್ಲಿ ಹೂವು-ಹಣ್ಣಿನ ವಹಿವಾಟು ಪಾತಾಳಕ್ಕಿಳಿದಿದ್ದು, ವ್ಯಾಪಾರ ಶೇ.60ರಿಂದ 65ರಷ್ಟು ಕುಸಿದಿದೆ. ಅಷ್ಟೇ ಅಲ್ಲ ಮಾರುಕಟ್ಟೆಗೆ ಸರಬರಾಜಾಗುತ್ತಿದ್ದ ಹಣ್ಣು-ಹೂವಿನ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ. ಬೆಲೆ ಕಡಿಮೆಯಿದ್ದರೂ ಖರೀದಿಗೆ ಜನ ಆಸಕ್ತಿ ತೋರುತ್ತಿಲ್ಲ.

Advertisement

ದೀಪಾವಳಿ ಹಬ್ಬಕ್ಕೆ ಇನ್ನೇನು ಮೂರ್‍ನಾಲ್ಕು ದಿನಗಳು ಬಾಕಿ ಉಳಿದಿದ್ದು, ಕೆ.ಆರ್‌.ಮಾರುಕಟ್ಟೆ ಹೂವಿನ ಮಂಡಿಗಳ ಸಗಟು ಮಾರಾಟದಲ್ಲಿ ಪ್ರಸ್ತುತ ಕೆ.ಜಿ. ಮಲ್ಲಿಗೆ ಮೊಗ್ಗಿಗೆ 230ರಿಂದ 240 ರೂ.ಇದೆ. ಕಾಕಡ ಹೂವಿಗೆ 150 ರೂ. ಇದ್ದು, ಸುಗಂಧರಾಜ ಕೆಜಿ ಹೂವಿಗೆ 40ರಿಂದ 50 ರೂ. ಇದೆ. ಚೆಂಡು ಹೂವಿನ ದರ ಕೇವಲ 40 ರೂ., ಬಟನ್‌ ರೋಸ್‌ ಕೆ.ಜಿಗೆ 40ರಿಂದ 50 ರೂ. ಹಾಗೂ ಉತ್ತಮ ಗುಣಮಟ್ಟದ ಸೇವಂತಿಗೆ ಹೂವಿನ ಬೆಲೆ ಕೆ.ಜಿಗೆ 80ರಿಂದ 100 ರೂ. ಇದೆ.

ಗುಣಮಟ್ಟವಿಲ್ಲದ ಸೇವಂತಿಗೆ ಹೂಗಳನ್ನು ಕೆ.ಜಿಗೆ 20ರಿಂದ 30 ರೂ.ನಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೂವಿನ ವ್ಯಾಪಾರಿ  ದಿವಾಕರ್‌ ತಿಳಿಸಿದ್ದಾರೆ. ಚಿಲ್ಲರೆ ಮಾರಾಟದಲ್ಲಿ ಹೂವಿನ ದರ ಇದಕ್ಕೆ ದುಪ್ಪಟ್ಟು ಇದ್ದು, ಒಂದು ಮಾರು ಸೇವಂತಿಗೆ ಹೂವಿಗೆ 10 ರೂ. ಇದೆ. ಗುಣಮಟ್ಟದ ಸೇವಂತಿಗೆ ಮಾರಿಗೆ 30 ರೂ. ಇದ್ದು, ಮಾರುದ್ದ ಮಲ್ಲಿಗೆ ಹೂವನ್ನು 30ರಿಂದ 40 ರೂ.ಗೆ ಮಾರಾಟ ಮಾಡಲಾಗುತ್ತಿದೆ. 

“ದೀಪಾವಳಿಯಲ್ಲಿ ಪಟಾಕಿಗೆ ಇರುವ ಬೇಡಿಕೆ ಹೂವಿಗೆ ಇರದು. ಹಬ್ಬಕ್ಕೆ ಎರಡೇ ದಿನ ಬಾಕಿಯಿದ್ದರೂ ಹೂವನ್ನು ಕೇಳುವವರೇ ಇಲ್ಲ. ಜತೆಗೆ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಗುಣಮಟ್ಟದ ಹೂವು ಸರಬರಾಜಾಗುತ್ತಿಲ್ಲ. ಹೀಗಾಗಿ ಮುಂಗಡವಾಗಿ ಹೂವು ಖರೀದಿಸುವವರೇ ಇಲ್ಲದಂತಾಗಿದೆ. ಹಬ್ಬದ ದಿನ ಸ್ವಲ್ಪ ಮಟ್ಟಿಗೆ ವ್ಯಾಪಾರ ಆಗುವ ನಿರೀಕ್ಷೆ ಇದೆ,’ ಎನ್ನುತ್ತಾರೆ ಹೂವಿನ ವ್ಯಾಪಾರಿ ಶಿವಕುಮಾರ್‌ ಕಂಕಿ.

ಹಣ್ಣು ಮಾರಾಟಕ್ಕೂ ಮಳೆ ಮಾರಕ: ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಮಳೆಯಿಂದಾಗಿ ಹಣ್ಣಿನ ವ್ಯಾಪಾರವೂ ಕುಸಿದಿದೆ. ಹೊಸೂರು ಹಣ್ಣಿನ ಮಾರುಕಟ್ಟೆಯಿಂದ ತಮಿಳುನಾಡಿನ ಸೇಲಂ, ಕೊಯಮತ್ತೂರು, ಮಧುರೈ, ತಿರುಪ್ಪೂರು, ಆಂಧ್ರಪ್ರದೇಶ, ಕೇರಳ (ಬಂದ್‌ ಹಿನ್ನೆಲೆ) ಸೇರಿದಂತೆ ರಾಜ್ಯದ ಮಂಗಳೂರು, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಇತ್ಯಾದಿ ಕಡೆಗಳಿಗೆ ಸರಬರಾಜಾಗುತ್ತಿದ್ದ ಹಣ್ಣಿನ ಪ್ರಮಾಣದಲ್ಲಿ ಶೇ.60ರಿಂದ 70ರಷ್ಟು ಇಳಿಕೆಯಾಗಿದೆ.

Advertisement

ಹೊಸೂರು ಹಣ್ಣಿನ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಮೂಸಂಬಿ ದರ ಪ್ರತಿ ಕೆ.ಜಿಗೆ 30ರಿಂದ 35 ರೂ. ಇದೆ. ಗಾತ್ರಕ್ಕೆ ಅನುಗುಣವಾಗಿ 10ರಿಂದ 35 ರೂ.ವರೆಗೂ ನಾಲ್ಕು ದರ್ಜೆಯ ಮೂಸಂಬಿಗಳು ಲಭ್ಯವಿವೆ. 25 ಕೆ.ಜಿ ಸೇಬು ಬಾಕ್ಸ್‌ಗೆ 1700 ರೂ. ಇದ್ದ ಬೆಲೆ ಈಗ 1100 ರೂ.ಗೆ ಇಳಿದಿದೆ. “ಪಪ್ಪಾಯ ಕೆ.ಜಿಗೆ 10ರಿಂದ 11 ರೂ. ಇದ್ದು, ಚಿಲ್ಲರೆ ಮಾರಾಟದಲ್ಲಿ ಪ್ರತಿ ಕೆ.ಜಿಗೆ 25ರಿಂದ 33 ರೂ. ನಂತೆ ಮಾರಾಟ ಮಾಡಲಾಗುತ್ತಿದೆ.

ಕಲ್ಲಂಗಡಿ ಕೆ.ಜಿಗೆ 10ರಿಂದ 13 ರೂ. ಇದ್ದು, ಅನಾನಸ್‌ ಕೆ.ಜಿಗೆ 20 ರೂ., ದಾಳಿಂಬೆ ಗಾತ್ರಕ್ಕೆ ಅನುಸಾರವಾಗಿ 25ರಿಂದ 65 ರೂ. ವರೆಗೂ ಇದೆ. ಅತ್ಯುತ್ತಮ ಗುಣಮಟ್ಟದ ದಾಳಿಂಬೆಯನ್ನು ಕೆ.ಜಿಗೆ 70ರಿಂದ 80 ರೂ.ಗೆ ಮಾರಲಾಗುತ್ತಿದೆ,’ ಎಂದು ಬೆಂಗಳೂರು ಫ್ರೂಟ್‌ ಕಮಿಷನ್ಸ್‌ ಏಜೆಂಟ್ಸ್‌ ಅಸೋಸಿಯೇಷನ್‌ ಕಾರ್ಯದರ್ಶಿ ಸಿದ್ದಾರೆಡ್ಡಿ ಮಾಹಿತಿ ನೀಡಿದ್ದಾರೆ.

ಬಾಳೆ ಮಂಡಿಯಲ್ಲಿ ತಮಿಳುನಾಡು ಏಲಕ್ಕಿ ಬಾಳೆ ಪ್ರತಿ ಕೆ.ಜಿಗೆ 40ರಿಂದ 45 ರೂ. ಇದ್ದು, ಸ್ಥಳೀಯ ಏಲಕ್ಕಿ ಬಾಳೆಗೆ 50ರಿಂದ 55 ರೂ. ಬೆಲೆ ಇದೆ. ಪಚ್ಚಬಾಳೆ ಕೆಜಿಗೆ 18ರಿಂಧ 20 ರೂ.ಗೆ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಏಲಕ್ಕಿ ಬಾಳೆಗೆ 60ರಿಂದ 65 ರೂ.ಇದೆ.

ಹಾಪ್‌ಕಾಮ್ಸ್‌ ದರ(ಕೆಜಿಯಂತೆ)
-ಏಲಕ್ಕಿ ಬಾಳೆ  77 ರೂ.
-ಪಚ್ಚಬಾಳೆ 26 ರೂ.
-ನೇಂದ್ರ ಬಾಳೆ 65 ರೂ.
-ಚಂದ್ರ ಬಾಳೆ 80 ರೂ.
-ಸಪೋಟಾ 38 ರೂ.
-ಮೂಸಂಬಿ 60ರೂ.
-ಕಿತ್ತಳೆ ಹಣ್ಣು 72 ರೂ.
-ಪಪ್ಪಾಯ(ನಾಟಿ) 24 ರೂ.
-ಪಪ್ಪಾಯ ರೆಡ್‌ ಇಂಡಿಯನ್‌ 32 ರೂ.
-ಅನಾನಸ್‌ 46 ರೂ.
-ದಾಳಿಂಬೆ 116 ರೂ.

* ಸಂಪತ್‌ ತರೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next