Advertisement
ಭತ್ತ, ಅಡಕೆ, ಬಾಳೆ, ತೆಂಗು, ಕಾಳು ಮೆಣಸು ಕರಾವಳಿಯಲ್ಲಿ ಸಾಮಾನ್ಯ ಕೃಷಿಯಾಗಿದ್ದು, ಕಳೆದ ಐದಾರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಕೃಷಿಕರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಸಾಹಸ ಆರಂಭಿಸಿದ್ದರು. ಹವಾಮಾನ, ನೀರು ಮೊದಲಾದ ದೃಷ್ಟಿಯಿಂದ ಬಯಲು ಸೀಮೆ ಪ್ರದೇಶಗಳಲ್ಲಿ ಮಾತ್ರ ಡ್ರ್ಯಾಗನ್ ಫ್ರೂಟ್ ಸಮರ್ಪಕವಾಗಿ ಬೆಳೆಯುತ್ತದೆ. ಕರಾವಳಿ ಹವಾಮಾನವು ಈ ಬೆಳೆಗೆ ತದ್ವಿರುದ್ಧವಾಗಿದ್ದರೂ ಇಲ್ಲಿನ ಕೆಲವು ಕೃಷಿಕರು ಲಾಭದಾಯಕ ದೃಷ್ಟಿಕೋನವಲ್ಲದೇ ಪ್ರಯೋಗಾತ್ಮಕವಾಗಿ ಬೆಳೆದು ಒಳ್ಳೆಯ ಇಳುವರಿ ಪಡೆದಿದ್ದಾರೆ.
Related Articles
Advertisement
ಕೃಷಿ ವಿಜ್ಞಾನಿಗಳು ಏನು ಹೇಳುತ್ತಾರೆ?
ನೀರಿನಾಂಶ ಕಡಿಮೆ ಇರುವ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಉತ್ತಮ ಇಳುವರಿ ಕೊಡುತ್ತದೆ. ಇದು ಜೂನ್-ಜುಲೈ ತಿಂಗಳಿನಲ್ಲಿ ಹಣ್ಣು ಬರುವ ಬೆಳೆ. ಕರಾವಳಿ ಭಾಗದಲ್ಲಿ ಮಳೆ ಹೆಚ್ಚಿರುವುದರಿಂದ ಬೆಳೆಗೆ ಸಮಸ್ಯೆಗಳಾಗುವ ಸಾಧ್ಯತೆ ಹೆಚ್ಚು. ಫಂಗಸ್ ಕಾಟ, ನೀರಿನಾಂಶ ಹೆಚ್ಚಳದಿಂದ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆಯು ಇದೆ. ಇದಕ್ಕೆ ಕೆಲವು ಪರಿಹಾರಗಳು ಲಭ್ಯವಿದೆ. ನೈಸರ್ಗಿಕವಾಗಿ ವಾತಾವರಣ ಅನುಕೂಲವಾಗಿದ್ದರೆ ಅಧಿಕ ವೆಚ್ಚದ ಅಗತ್ಯವಿಲ್ಲ. ಉತ್ಪಾದನೆ ವೆಚ್ಚ ಅಧಿಕವಾಗಿ ಬೆಳೆಗಾರರಿಗೆ ಆರ್ಥಿಕ ನಷ್ಟವು ಆಗಬಹುದು. ಯೂಟ್ಯೂಬ್ ವೀಡಿಯೋಗಳನ್ನು ನೋಡಿಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆಯುವ ಮುನ್ನ ಅಗತ್ಯ ಮಾಹಿತಿಗಳನ್ನು ತಜ್ಞರು, ಬೆಳೆಗಾರರಿಂದ ಪಡೆಯಬೇಕು. ಮಾರುಕಟ್ಟೆ ಮೌಲ್ಯವನ್ನು ತಿಳಿಯಬೇಕು. ಈಗಾಗಲೇ ಬೆಳೆ ಬೆಳೆದ ಕೃಷಿಕರೊಂದಿಗೆ ಮುಕ್ತವಾಗಿ ಚರ್ಚಿಸಿ ಮುಂದುವರಿಯಬೇಕು ಎಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದ ವಿಜ್ಞಾನಿ ಡಾ| ಚೈತನ್ಯ ಎಚ್. ಎಸ್. ತಿಳಿಸಿದ್ದಾರೆ.
ಆರೋಗ್ಯ ದೃಷ್ಟಿಯಿಂದ ಉತ್ತಮ
ಡ್ರ್ಯಾಗನ್ ಫ್ರೂಟ್ ಬಾಯಿಗೆ ರುಚಿಕರವಲ್ಲದಿದ್ದರೂ ಆರೋಗ್ಯ ದೃಷ್ಟಿಯಿಂದ ಉತ್ತಮ ಬೇಡಿಕೆ ಹೊಂದಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು ಕ್ಯಾಲ್ಸಿಯಂ, ಕಬ್ಬಿನಾಂಶ ಹಾಗೂ ವಿಟಮಿನ್ ಅಂಶಗಳನ್ನು ಹೊಂದಿರುವ ಈ ಹಣ್ಣು ಹೆಚ್ಚಾಗಿ ಜ್ಯೂಸ್ ಮಾಡಿ ಉಪಯೋಗಿಸಲಾಗುತ್ತದೆ.
ಮಾಹಿತಿ ತಿಳಿದು ಬೆಳೆಯಬೇಕುನಾಲ್ಕು ವರ್ಷಗಳಿಂದ ಅರ್ಧ ಎಕರೆ ಜಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆಯುತ್ತಿದ್ದೇವೆ. ಈ ಬೆಳೆಯ ನಿರ್ವಹಣೆ ಬಾಯಿ ಮಾತಿಗೆ ಹೇಳುವಷ್ಟು ಸುಲಭ ಇರುವುದಿಲ್ಲ. ಹೆಚ್ಚು ಮಳೆ ಸುರಿದಾಗ ಬೆಳೆಗೆ ತೊಂದರೆಯಾಗುತ್ತದೆ. ಹಣ್ಣುಗಳು ಕೊಳೆತು ನಷ್ಟವು ಸಂಭವಿಸುತ್ತದೆ. ಕೀಟ ಬಾಧೆಯೂ ಇರುತ್ತದೆ. ಹೆಚ್ಚು ಸೂಕ್ಷ್ಮ ಮುತುವರ್ಜಿಯಿಂದ ಎಲ್ಲ ಮಾಹಿತಿ ತಿಳಿದು ಬೆಳೆಯಬೇಕು. ಅಂಗಡಿ, ಮಾರುಕಟ್ಟೆಗೆ ಮಾರಾಟ ಮಾಡುವುದಿಲ್ಲ. ಮನೆಯಲ್ಲಿಯೇ ಗ್ರಾಹಕರಿಗೆ ಕೆಜಿಗೆ 250-300 ರೂ.ಗೆ ಮಾರಾಟ ಮಾಡುತ್ತೇವೆ.
-ಇಗ್ನೇಶಿಯಸ್ ಡಿ’ಸೋಜಾ, ಪಾಂಬೂರು ಯಶಸ್ವಿಯಾಗುವ ವಿಶ್ವಾಸ
ಒಂದು ಎಕ್ರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆದಿದ್ದು, ಈಗಾಗಲೇ 1 ವರ್ಷ 10 ತಿಂಗಳು ಕಳೆದಿದೆ. ಆರಂಭದಲ್ಲಿ ಮಳೆಯಿಂದಾಗಿ 1.50 ಕ್ವಿಂಟಲ್ ಕಾಯಿ ಕೊಳೆತು ಹೋಗಿತ್ತು. ಇದೀಗ ಮತ್ತೆ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ. ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯಿಂದಲೂ ಮಾಹಿತಿಗಳನ್ನು ಪಡೆದಿದ್ದೇನೆ. ಕರಾವಳಿ ಹವಾಮಾನವು ಈ ಬೆಳೆಗೆ ಕೆಲವು ಸಮಸ್ಯೆಗಳು ತಂದೊಡ್ಡುತ್ತವೆ. ಆದರೆ ನಿರ್ವಹಣೆ ಬಗ್ಗೆ ಹೆಚ್ಚಿನ ಒತ್ತು ನೀಡುತ್ತ, ಪೂರಕ ಕ್ರಮಗಳನ್ನು ಕೈಗೊಂಡಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಸ್ಥಳೀಯವಾಗಿ ಒಂದಿಷ್ಟು ಪ್ರಮಾಣದ ಬೆಳೆಯನ್ನು ಕೆಜಿಗೆ 150 ರೂ.ನಂತೆ ಮಾರಾಟ ಮಾಡಿದ್ದೇನೆ.
– ವಾಸು ಜೆ. ಕೆ., ಜಡ್ಕಲ್