ರಾಮನಗರ: ಲೈಂಗಿಕ ಕ್ರಿಯೆ ನಂತರ ಮಹಿಳೆಯರನ್ನು ಅಮಾನುಷವಾಗಿ ಕೊಂದು ಪರಾರಿಯಾಗುತ್ತಿದ್ದ ಸೈಕೋ ಹಂತಕ, ದೊರೆ ಆಲಿಯಾಸ್ ಕಪ್ಪಲ್ ದೊರೆ (46) ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ತನ್ನ ಪತ್ನಿಯೂ ಸೇರಿ ಇದುವರೆಗೆ ಈತ 8 ಮಹಿಳೆಯರನ್ನು ಕೊಂದಿದ್ದಾನೆ.
ತಮಿಳುನಾಡಿನ ವಿ.ಪುರಂ ಜಿಲ್ಲೆಯ ಕಲ್ಲುಕುರ್ಚಿ ತಾಲೂಕಿನ ಕಪ್ಪಲ್ ದೊರೆ, 20 ವರ್ಷಗಳ ಹಿಂದೆ ಕೆಲಸಕ್ಕೆಂದು ಬೆಂಗಳೂರಿಗೆ ಬಂದು, ಆಂಧ್ರಹಳ್ಳಿಯಲ್ಲಿ ವಾಸವಿದ್ದ. ವಿಕೃತಕಾಮಿಯಾಗಿರುವ ಈತ, ಬ್ಯಾಡರಹಳ್ಳಿ, ಪೀಣ್ಯ ಪೊಲೀಸ್ ಠಾಣೆಗಳ ವ್ಯಾಪ್ತಿ ಮತ್ತು ತಮಿಳುನಾಡಿನ ವಿವಿಧೆಡೆ ಮಹಿಳೆಯರ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನ ಮೆಜೆಸ್ಟಿಕ್, ಮಾರ್ಕೆಟ್, ತಮಿಳುನಾಡಿನ ವಿ.ಪುರಂ ಜಿಲ್ಲೆಯ ಹಲವೆಡೆ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಸಂಪರ್ಕಿಸಿ ಹಣ ಕೊಡುವುದಾಗಿ, ಆಶ್ರಯ ನೀಡುವುದಾಗಿ ನಂಬಿಸಿ ಬ್ಯಾಡರಹಳ್ಳಿ ಮತ್ತು ಪೀಣ್ಯ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಕರೆದೊಯ್ದು ಅತ್ಯಾಚಾರ ಮಾಡುತ್ತಿದ್ದ. ನಂತರ ಉಸಿರುಗಟ್ಟಿಸಿ ಅಥವಾ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡುತ್ತಿದ್ದ. 2010ನೇ ಸಾಲಿನಿಂದ ಇಲ್ಲಿಯವರೆಗೆ ಇದೇ ಮಾದರಿಯಲ್ಲಿ ಎಂಟು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಮೂರು ವರ್ಷ ಜೈಲಿನಲ್ಲಿದ್ದ: ಆರೋಪಿಯನ್ನು ಸೆರೆಹಿಡಿದಿರುವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಬಿ.ರಮೇಶ್, 2002ರಲ್ಲಿ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಕೊಲೆಗೆ ಯತ್ನಿಸಿ ಕಪ್ಪಲ್ ದೊರೆ ಸಿಕ್ಕಿಬಿದ್ದಿದ್ದ. ಈ ವೇಳೆ 3 ವರ್ಷ ಜೈಲು ಶಿಕ್ಷೆ ಕೂಡ ಅನುಭವಿಸಿದ್ದ. 2013ರ ಫೆಬ್ರವರಿಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ 22 ವರ್ಷ ಯುವತಿ ಮೇಲೆ ಅತ್ಯಾಚಾರವೆಸಗಿ ಕೊಲೆಗೆ ಪ್ರಯತ್ನಿಸಿ, ಯುವತಿ ಸತ್ತು ಹೋಗಿದ್ದಾಳೆ ಎಂದು ಭಾವಿಸಿ ಓಡಿ ಹೋಗಿದ್ದ.
ಆದರೆ, ಸಾರ್ವಜನಿಕರು ಯುವತಿಯನ್ನು ರಕ್ಷಿಸಿದ್ದರು. ನಂತರ ಸಂತ್ರಸ್ತೆ ಆರೋಪಿಯ ಗುರುತು ಪತ್ತೆ ಹಚ್ಚಿದ್ದರಿಂದ ಪೊಲೀಸರು ಮತ್ತೆ ಈತನನ್ನು ಬಂಧಿಸಿದ್ದರು. ಪ್ರಕರಣ ಇದೀಗ ನ್ಯಾಯಾಲಯದಲ್ಲಿದೆ. ಜಾಮೀನಿನ ಮೇಲೆ ಹೊರ ಬಂದಿರುವ ಕಪ್ಪಲ್ ದೊರೆ, ನಂತರವೂ ತನ್ನ ಕುಕೃತ್ಯಗಳನ್ನು ಮುಂದುವರಿಸಿದ್ದ. ಈತ ತಮಿಳುನಾಡಿನಲ್ಲಿ ವಾಸವಿದ್ದ ವೇಳೆ ತನ್ನ ಪತ್ನಿಯನ್ನು ಕೊಲೆ ಮಾಡಿ ಕಾರಾಗೃಹವಾಸ ಅನುಭವಿಸಿದ್ದ. ಸದರಿ ಪ್ರಕರಣದ ಬಗ್ಗೆಯೂ ಮಾಹಿತಿ
ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.
ಸಿಕ್ಕಿ ಬಿದ್ದಿದ್ದು ಹೇಗೆ?
2018ರ ಮೇ 21ರಂದು ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಘವೇಂದ್ರ ನಗರದಲ್ಲಿ ಅಪರಿಚಿತ ಮಹಿಳೆ ಶವ ದೊರೆತಿತ್ತು. ಮಹಿಳೆಯ ಉಸಿರುಗಟ್ಟಿಸಿ ಕೊಂದಿರುವುದು ವೈದ್ಯಕೀಯ ವರದಿಯಿಂದ ಖಾತ್ರಿಯಾಗಿತ್ತು. ಪ್ರಕರಣ ದಾಖಲಾದ ನಂತರ ತನಿಖೆಗೆ ಪ್ರತ್ಯೇಕ ತಂಡ ರಚಿಸಲಾಗಿತ್ತು. ಆರೋಪಿ ಕಪ್ಪಲ್ ದೊರೆ ಈ ಕೊಲೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ತಮಿಳುನಾಡು ಗಡಿ ಭಾಗದ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಎಸ್ಪಿ ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಡಿವೈಎಸ್ಪಿ ಪುರುಷೋತ್ತಮ, ಸಿಪಿಐ
ಕೆ.ಪಿ.ಸತ್ಯನಾರಾಯಣ, ನಿಸ್ತಂತು ವಿಭಾಗದ ಸಿಪಿಐ ಶಿವಶಂಕರ್ ಮುಂತಾದವರು ಹಾಜರಿದ್ದರು.