ಬೆಂಗಳೂರು: ನಗರದಲ್ಲಿ ಯುವತಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಹೇಳಿರುವ ರಾಜ್ಯಸಭಾ ಸದಸ್ಯ ಡಾ. ರಾಜೀವ್ ಚಂದ್ರಶೇಖರ್, ಸರ್ಕಾರ ತನ್ನ ಕೊನೆ ವರ್ಷದ ಅವಧಿಯಲ್ಲಾದರೂ ಎಚ್ಚೆತ್ತು ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಯುವತಿಯರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಮಧ್ಯೆ ಗೃಹ ಸಚಿವರು, ಸಂತ್ರಸ್ತರ ನೆರವಿಗೆ ಧಾವಿಸುವ ಬದಲಿಗೆ ಸಂತ್ರಸ್ತರನ್ನೇ ದೂಷಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ತಕ್ಷಣ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ಚುನಾಯಿತ ಸರ್ಕಾರ ಮತ್ತು ಅದರ ಸಚಿವರು ಹಾಗೂ ಪೊಲೀಸ್ ಇಲಾಖೆ ಎಲ್ಲ ನಾಗರಿಕರಿಗೆ ಕಾನೂನು, ಸುವ್ಯವಸ್ಥೆ, ಮತ್ತು ರಕ್ಷಣೆ ನೀಡಲು ಬದ್ಧರಾಗಿರಬೇಕು.
ಇದೊಂದು ಸಂವಿಧಾನಾತ್ಮಕ ಆದೇಶ ಮತ್ತು ಯಾವುದೇ ಆತ್ಮಗೌರವವುಳ್ಳ ಚುನಾಯಿತ ಸರ್ಕಾರ ತಾನೇ ವಹಿಸಿಕೊಳ್ಳುವ ಜವಾಬ್ದಾರಿ. ಈ ಹೊಣೆಗಾರಿಕೆ ಪುರುಷ, ಮಹಿಳೆ, ಮಕ್ಕಳು, ಹಿರಿಯರಿಗೂ ಅನ್ವಯಿಸುವಂತಹದ್ದು. ಆದರೆ, ಗೃಹ ಸಚಿವರ ಹೇಳಿಕೆ ನೋಡಿದರೆ, ಸರ್ಕಾರ ತನ್ನ ಜವಾಬ್ದಾರಿ ಮರೆತಂತಿದೆ.
ಸಂವಿಧಾನದಲ್ಲಾಗಲಿ ಅಥವಾ ಈ ನೆಲದ ಕಾನೂನಿನಲ್ಲಾಗಲಿ ತಮ್ಮ ಜವಾಬ್ದಾರಿಯನ್ನು ಕ್ಷೀಣಿಸುವ, ವ್ಯಕ್ತಿಯ ಲಿಂಗ ಅಥವಾ ಧರಿಸಿದ ಬಟ್ಟೆಯ ಆಧಾರದ ಮೇಲೆ ಸುರಕ್ಷತೆ ನೀಡುವ ಬಗ್ಗೆ ಉಲ್ಲೇಖವಿಲ್ಲ. ಇದನ್ನು ಗೃಹ ಸಚಿವರು ತಿಳಿಯುವ ಪ್ರಯತ್ನ ಮಾಡಬೇಕು ಎಂದು ರಾಜೀವ್ ಪತ್ರದಲ್ಲಿ ಹೇಳಿದ್ದಾರೆ.