Advertisement

ಎಸ್ಸಿ ಮೀಸಲು ಕ್ಷೇತ್ರದ ಮೇಲೆ ಬೇಡ ಜಂಗಮರ ಕಣ್ಣು

06:15 AM Mar 23, 2018 | |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಯ ಸಂಘರ್ಷದ ನಡುವೆಯೇ ವೀರಶೈವ ಸಮುದಾಯದ ಜಂಗಮರು ಬೇಡ ಜಂಗಮ ಸಮುದಾಯದ ಪ್ರಮಾಣ ಪತ್ರ ಪಡೆದು ಪರಿಶಿಷ್ಠ ಜಾತಿಗೆ ಮೀಸಲಿರುವ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ.

Advertisement

ವೀರಶೈವ ಸಮಾಜದ ಆರಾಧ್ಯ ಕ್ಷೇತ್ರಗಳಾದ ಪಂಚಪೀಠಗಳ ಅನುಯಾಯಿಗಳಾಗಿರುವ ಜಂಗಮ (ಅಯ್ಯನೋರು) ಸಮುದಾಯದವರು ರಾಜ್ಯದ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿದ್ದಾರೆ. ಈಗಾಗಲೇ  ಬೆಂಗಳೂರು ನಗರ, ತುಮಕೂರು, ಬೆಳಗಾವಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಬೇಡ ಜಂಗಮ್‌ ಸಮುದಾಯದವರು ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.

ಡಾ.ಎಂ.ಪಿ.ದ್ವಾರಕೇಶ್ವರಯ್ಯ ಎನ್ನುವವರು ಅಖೀಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಮಾಡಿಕೊಂಡು, ಬೇಡ ಜಂಗಮ್‌ ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಚಿತ್ರದುರ್ಗ ಜಿಲ್ಲೆಯ ಮಾಯಕೊಂಡ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಅವರಂತೆ ವಾಗೀಶ್‌ ಹಿರೇಮs… ಹಾಗೂ ಸೋಮಶೇಖರ ಮಂಡಿಮs… ಎನ್ನುವವರೂ ಬೇಡ ಜಂಗಮ್‌ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದು, ಎಸ್ಸಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ನಿರ್ಧರಿಸಿದ್ದಾರೆ.

2013ರ ಚುನಾವಣೆಗೆ ಡಾ.ಎಂ.ಪಿ.ದ್ವಾರಕೇಶ್ವರಯ್ಯ ಅವರು ಮಾಯಕೊಂಡ ಮೀಸಲು ಕ್ಷೇತ್ರದಿಂದ ಎಸ್ಸಿ ಕೋಟಾದಡಿ ಸ್ಪರ್ಧಿಸಲು ಮುಂದಾಗಿದ್ದಾಗ ಅವರ ಜಾತಿ ಪ್ರಮಾಣ ತಿರಸ್ಕರಿಸಲಾಗಿತ್ತು. ನಂತರ, ತಾವು ಮೂಲ ಬೇಡ ಜಂಗಮರು ಮತ್ತು ಸ್ವಾತಂತ್ರ್ಯ ಪೂರ್ವದಿಂದಲೂ ಬೇಡ ಜಂಗಮ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿದೆ ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಇವರ ವಾದವನ್ನು ಪುರಸ್ಕರಿಸಿ ಆದೇಶ ನೀಡಿದೆ.

ಇದೇ ವೇಳೆ, ಬಳ್ಳಾರಿ, ರಾಯಚೂರು, ಬೀದರ್‌, ಕಲಬುರಗಿ ಸೇರಿದಂತೆ ಇತರ ಜಿಲ್ಲೆಗಳಲ್ಲಿಯೂ ಎಸ್ಸಿ ಮೀಸಲಾತಿ ಪ್ರಮಾಣ ಪತ್ರ ಪಡೆಯಲು ಬೇಡ ಜಂಗಮ ಸಮುದಾಯದವರು ಅರ್ಜಿ ಸಲ್ಲಿಸಿದ್ದು, ತಹಸೀಲ್ದಾರ್‌ರಿಂದ ಪ್ರಮಾಣ ಪತ್ರ ದೊರೆತರೆ, ಇನ್ನಷ್ಟು ಎಸ್ಸಿ ಮೀಸಲು ಕ್ಷೇತ್ರಗಳಿಗೆ ಸ್ಪರ್ಧೆ ಮಾಡುವ ಇಚ್ಛೆ ಹೊಂದಿದ್ದಾರೆ.

Advertisement

ಬೇಡ ಜಂಗಮ ಇತಿಹಾಸ
1935ರಲ್ಲಿ ಬೇಡ ಜಂಗಮ ಹಾಗೂ ಬುಡ್ಗ ಜಂಗಮ ಸಮುದಾಯವನ್ನು ಎಸ್ಸಿಗೆ ಸೇರಿಸಲಾಗಿತ್ತು. 1950ರಲ್ಲಿ ಪರಿಶಿಷ್ಟ ಜಾತಿಗೆ ಇವು ಸೇರ್ಪಡೆಯಾದವು. 1956ರಲ್ಲಿ ಬೀದರ್‌, ಕಲಬುರಗಿ, ರಾಯಚೂರಿನಲ್ಲಿ ಮಾತ್ರ ಬೇಡ ಜಂಗಮ ಸಮುದಾಯ ಇದೆ ಎಂದು ರಾಷ್ಟ್ರಪತಿ ಆದೇಶ ಹೊರಡಿಸಿದ್ದರು. 1976ರಲ್ಲಿ ರಾಜ್ಯದ ಎಲ್ಲ ಭಾಗದಲ್ಲಿಯೂ ಬೇಡ ಜಂಗಮರು ಇದ್ದಾರೆ ಎಂದು ಆದೇಶ ಹೊರಡಿಸಲಾಗಿದೆ. 1978ರಲ್ಲಿ ಬೇಡ ಜಂಗಮರು ದಲಿತರಲ್ಲ ಎಂದು ಸರ್ಕಾರ ಆದೇಶ ಹೊರಡಿಸಿತು. ಬೇಡ ಜಂಗಮರು ಹೈಕೋರ್ಟ್‌ ಮೆಟ್ಟಿಲೇರಿದರು. 27-10-1989ರಲ್ಲಿ ಸರ್ಕಾರದ ಆದೇಶವನ್ನು ಹೈಕೋರ್ಟ್‌  ರದ್ದುಪಡಿಸಿತು. ಅದರ ಆಧಾರದ ಮೇಲೆ ಬೇಡ ಜಂಗಮ ಸಮುದಾಯದವರು ಈಗ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಯಾರು ಬೇಡ ಜಂಗಮರು ?
ಶಸ್ತ್ರ ಹಾಗೂ ಜೋಳಿಗಿ ಹಾಕಿಕೊಂಡು ಮನೆ ಮನೆ ತಿರುಗಿ ಭಿಕ್ಷೆ ಬೇಡಿ ಜೀವನ ನಡೆಸುವ ಸಮುದಾಯ. ಪಂಚಪೀಠಾಧೀಶರ ಅನುಯಾಯಿಗಳಾಗಿರುವ ಇವರು ವೀರಭದ್ರನ ಆರಾಧಕರು.

ನಮ್ಮ ಸಮುದಾಯಕ್ಕೆ ಸ್ವಾತಂತ್ರ ಪೂರ್ವದಿಂದಲೂ ಬೇಡ ಜಂಗಮ್‌ ಎಂದು ಹೇಳಲಾಗಿದೆ. ನಮಗೆ ಮೊದಲಿಂದಲೂ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಈಗ ನಮ್ಮ ಹಕ್ಕನ್ನು ನಾವು ಪಡೆಯುತ್ತಿದ್ದೇವೆ. ನಾನು ಈ ಬಾರಿ ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ. ಇನ್ನೂ 2-3 ಕ್ಷೇತ್ರಗಳಲ್ಲಿ  ನಮ್ಮವರು ಸ್ವರ್ಧಿಸಲು ಮುಂದಾಗಿದ್ದಾರೆ.
– ಡಾ.ಎಂ.ಪಿ.ದ್ವಾರಕೇಶ್ವರಯ್ಯ, ಅಖೀಲ ಕರ್ನಾಟಕ ಡಾ. ಅಂಬೇಡ್ಕರ್‌ ಬೇಡ ಜಂಗಮ್‌ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ

ವೀರಶೈವ ಲಿಂಗಾಯತ ಜಂಗಮರಿಗೆ ಬೇಡ ಜಂಗಮ ಪ್ರಮಾಣ ಪತ್ರ ನೀಡಲು ಬರುವುದಿಲ್ಲ. ಆ ರೀತಿ ಜಾತಿ ಪ್ರಮಾಣ ಪತ್ರ ಪಡೆದರೆ ಅದು ಕಾನೂನು ಬಾಹಿರವಾಗುತ್ತದೆ. ಆದರೆ, ನಿಜವಾದ ಬೇಡ ಜಂಗಮ ಸಮುದಾಯಕ್ಕೆ ಎಸ್ಸಿ ಪ್ರಮಾಣ ಪತ್ರ ಪಡೆಯಲು ಅವಕಾಶ ಇದೆ.
– ರವಿವರ್ಮಕುಮಾರ್‌, ನ್ಯಾಯವಾದಿ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next