ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್‌ನಲ್ಲಿ ಕರಾವಳಿಯ ಪ್ರವಾಸೋದ್ಯಮ, ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗಿದೆ. ಆದರೆ ಕೈಗಾರಿಕ ಕ್ಷೇತ್ರಕ್ಕೆ ಮತ್ತಷ್ಟು ಪ್ರತ್ಯೇಕ ಯೋಜನೆಗಳ ನಿರೀಕ್ಷೆ ಇತ್ತು.
ಆಳ ಸಮುದ್ರ ಮೀನುಗಾರಿಕೆಗೆ ಬಜೆಟ್‌ನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. 100 ಅಡಿ ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನ ಮಂತ್ರಿ ಮತ್ಸéಸಂಪದ ಯೋಜನೆಯೊಂದಿಗೆ ಸಂಯೋಜಿಸಿ ಮತ್ಸéಸಿರಿ ಯೋಜನೆಯನ್ನು ರೂಪಿಸಲಾಗಿದೆ. ಮೀನುಗಳ ರಫ್ತು ಮತ್ತು ಮೌಲ್ಯವರ್ಧನೆಗೂ ಹೆಚ್ಚಿನ ಒತ್ತು ನೀಡಲಾಗಿದೆ. ಮೀನುಗಾರರಿಗೆ ನೀಡುತ್ತಿರುವ ಸೀಮೆಎಣ್ಣೆ ಸಹಾಯಧನ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಡಿಬಿಟಿ ಮೂಲಕ ನೇರವಾಗಿ ಮೀನುಗಾರರ ಖಾತೆಗೆ ಜಮಾ ಮಾಡುವ ನಿರ್ಧಾರ ಮಾಡಲಾಗಿದೆ. ಅದೇ ರೀತಿ, ರಿಯಾಯಿತಿ ಬೆಲೆಯಲ್ಲಿ ನೀಡುತ್ತಿರುವ 1.5 ಲ.ಕಿ.ಲೀ. ಡೀಸೆಲ್ ಮಿತಿಯನ್ನು 2 ಲ.ಕಿ.ಲೀ.ಗೆ ಹೆಚ್ಚಿಸುವ ನಿರ್ಧಾರದಿಂದ ಅನೇಕ ಮಂದಿ ಮೀನುಗಾರರಿಗೆ ಉಪಯೋಗ ವಾಗುವ ನಿರೀಕ್ಷೆ ಇದೆ.
ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಜಲಸಾರಿಗೆ ಸಂಪರ್ಕ ಕಲ್ಪಿಸಲು ಬಾರ್ಜ್‌ಗಳ ಸೇವೆಗಳನ್ನು ಆರಂಭಿಸುವುದು, ಮಂಗಳೂರು-ಹಂಗಾರಕಟ್ಟೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಹೊಸ ಲೈಟ್ ಕಾರ್ಗೋ ಬೋಟ್ ಸೇವೆಯ ಆರಂಭವನ್ನು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. ಅದೇ ರೀತಿ, ಮಂಗಳೂರು-ಕಾರವಾರ-ಗೋವಾ-ಮುಂಬಯಿ ಜಲಸಾರಿಗೆ ಆರಂಭದ ಪ್ರಸ್ತಾವದಿಂದ ಕರಾವಳಿ ಭಾಗದ ವಾಣಿಜ್ಯ ವ್ಯವಹಾರಗಳು ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ. ಸಿಆರ್‌ಝಡ್ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ನಿರ್ಧಾರದಿಂದಾಗಿ ಕರಾವಳಿಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಂತಾಗಬಹುದು.
ಜಿಲ್ಲೆಯಲ್ಲಿ ಐಟಿ ಪಾರ್ಕ್ ಸ್ಥಾಪನೆ, ಮಂಗಳೂರಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಸ್ಥಾಪಿಸಬೇಕು ಎಂಬ ನಮ್ಮ ಬಹು ದಿನಗಳ ಬೇಡಿಕೆಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ಲಭಿಸಿಲ್ಲ. ಎಂಎಸ್‌ಎಂಇಗಳಿಗೆ ಆಸ್ತಿ ಅಡಮಾನದ ಮೇಲೆ ಮುದ್ರಾಂಕ ಶುಲ್ಕ ಕಡಿಮೆ ಮಾಡಬೇಕು ಎಂದು ಸರಕಾರಕ್ಕೆ ಈಗಾಗಲೇ ಮನವಿ ನೀಡಲಾಗಿತ್ತು. ಈ ಕುರಿತೂ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾವವಿಲ್ಲ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡುವ ನಿರೀಕ್ಷೆಯೂ ಈಡೇರಿಲ್ಲ.
– ಸಿಎ ಅನಂತೇಶ್ ವಿ. ಪ್ರಭು
ಕೆನರಾ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರು.