ಬೆಂಗಳೂರು: ತಂತ್ರಜ್ಞಾನ ಯುಗದಲ್ಲಿ ನಾಗರಿಕ ಸೇವೆಯ ಉದ್ದೇಶ ಕೇವಲ ಉತ್ತಮ ಆಡಳಿತ ನೀಡುವುದಲ್ಲ; ಅದರ ಜತೆಗೆ ಜನರ ನಿರೀಕ್ಷೆಗಳನ್ನು ಈಡೇರಿಸುವುದೂ ಆಗಿದೆ ಎಂದು ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಭಿಪ್ರಾಯಪಟ್ಟರು.
ನಗರದ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ “ರಾಮಯ್ಯ ಆಫೀಸರ್ ಐಎಎಸ್ ಅಕಾಡೆಮಿ’ ಉದ್ಘಾಟಿಸಿ ಅವರು ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಮತ್ತು ಇಂಟರ್‌ನೆಟ್ ಕ್ರಾಂತಿ ಪರಿಣಾಮ ಜನರ ನಿರೀಕ್ಷೆಗಳು ಹೆಚ್ಚಿವೆ. ಹಾಗಾಗಿ, ಐಎಎಸ್ ಸೇರಿದಂತೆ ನಾಗರಿಕ ಸೇವೆಯ ಕಾರ್ಯವ್ಯಾಪ್ತಿ ಕೂಡ ವಿಸ್ತಾರಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಉತ್ತಮ ಆಡಳಿತ ನೀಡುವ ಜತೆಗೆ ಜನರ ನಿರೀಕ್ಷೆಗಳನ್ನು ಈಡೇರಿಸಬೇಕಿದೆ. ಇದು ನಾಗರಿಕ ಸೇವೆಗೆ ಬರುತ್ತಿರುವವರ ಮುಂದಿರುವ ದೊಡ್ಡ ಸವಾಲು ಎಂದು ಹೇಳಿದರು.
ಬೌದ್ಧಿಕ ವೃದ್ಧಿಗೆ ನೆರವು: ಗೋಕುಲ್ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ (ವೈದ್ಯಕೀಯ) ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಮಾತನಾಡಿ, ಒಂದು ಮ್ಯಾರಥಾನ್‌ನಲ್ಲಿ ಸಾವಿರಾರು ಜನ ಒಮ್ಮೆಲೆ ಓಡುತ್ತಾರೆ. ಅದರಲ್ಲಿ ಇಬ್ಬರು ಬಹುಮಾನ ಗಳಿಸಬಹುದು.
ಉಳಿದವರು ಬಹುಮಾನ ಗಳಿಸದಿದ್ದರೂ ಆರೋಗ್ಯ ಸುಧಾರಣೆಗೆ ಕಾರಣ ವಾಗುತ್ತದೆ. ಅದೇ ರೀತಿ, ಐಎಎಸ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಲ್ಲ ಅಭ್ಯರ್ಥಿಗಳು ಉತ್ತೀರ್ಣರಾಗದೇ ಇರಬಹುದು. ಆದರೆ, ಈ ಪರೀಕ್ಷಾ ಸಿದ್ಧತೆ ಅಭ್ಯರ್ಥಿಗಳ ಬೌದ್ಧಿಕ ಪ್ರಗತಿಗೆ ಕಾರಣವಾಗುತ್ತದೆ ಎಂದರು.
“ಐಎಎಸ್ ಪಾಸಾಗುವ ಮುನ್ನ ನಾನೇನೂ ಯಾವುದೋ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಆಗಿರಲಿಲ್ಲ. ಒಂದು ಸಣ್ಣ ಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಯಾಗಿದ್ದೆ. ಸರ್ಕಾರಿ ಕಾಲೇಜಿನಲ್ಲೇ ಶಿಕ್ಷಣ ಪೂರೈಸಿದೆ. ಆದರೆ, ಆಗ ಒಳ್ಳೆಯ ಶಿಕ್ಷಕರಿದ್ದರು.
ಅವರ ಮಾರ್ಗದರ್ಶನದಲ್ಲಿ ಚೆನ್ನಾಗಿ ಕಲಿತೆ’ ಎಂದು ಎಂ.ಆರ್. ಶ್ರೀನಿವಾಸಮೂರ್ತಿ ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡರು. ಗೋಕುಲ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್. ಜಯರಾಂ ಮಾತನಾಡಿದರು. ನಿವೃತ್ತ ಐಎಎಸ್ ಅಧಿಕಾರಿ ಆರ್.ಎ.ಇಸ್ರೇಲ್ ಜೆಬಾಸಿಂಗ್ ಮತ್ತಿತರರು ಉಪಸ್ಥಿತರಿದ್ದರು.