Advertisement

ಫೆಬ್ರವರಿಯಿಂದ ಸಾಲುಸಾಲು ಪರೀಕ್ಷೆ;9ರಿಂದ ಪಿಯುಸಿವರೆಗಿನ ಪರೀಕ್ಷೆ ಪದ್ಧತಿ ಈ ವರ್ಷದಿಂದ ಬದಲು

11:20 AM Oct 12, 2023 | Team Udayavani |

ಉಡುಪಿ: ರಾಜ್ಯ ಸರಕಾರ 9ರಿಂದ 12ನೇ ತರಗತಿ ವರೆಗಿನ ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಕೆಲವು ಮಾರ್ಪಾಡು ಮಾಡಿರುವುದರಿಂದ ಪರೀಕ್ಷೆಗಳು ಹೆಚ್ಚಾಗಿವೆ.

Advertisement

ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿಗೆ ಮೂರು ವಾರ್ಷಿಕ ಪರೀಕ್ಷೆ, 11 ಹಾಗೂ 9ನೇ ತರಗತಿಗೆ ಏಕರೂಪ ಪರೀಕ್ಷೆ ನಡೆಯಲಿದೆ. 2024ರ ಫೆಬ್ರವರಿಯಿಂದ ಜುಲೈ ಅಂತ್ಯದ ವರೆಗೂ ಪರೀಕ್ಷೆಗಳು ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳ ಜತೆಗೆ ಶಿಕ್ಷಕ, ಉಪನ್ಯಾಸಕರಿಗೂ ಪರೀಕ್ಷೆಯ ಒತ್ತಡ ಹೆಚ್ಚಲಿದೆ ಮತ್ತು ಪೂರ್ಣವಾಗಿ ಪರೀಕ್ಷೆಯ ಕಾರ್ಯದಲ್ಲೇ ತೊಡಗಿಸಿ ಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಫೆಬ್ರವರಿಯಲ್ಲಿ 9 ಮತ್ತು 11ನೇ ತರಗತಿಯ ವಾರ್ಷಿಕ ಏಕರೂಪ ಪರೀಕ್ಷೆ ಆರಂಭವಾಗಲಿದೆ. ಅನಂತರ ದ್ವಿತೀಯ ಪಿಯುಸಿ, ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ -1 ನಡೆಯಲಿದೆ. ಬಳಿಕ ವಾರ್ಷಿಕ ಪರೀಕ್ಷೆ-2 ಮತ್ತು 3 ನಡೆಯಲಿದೆ. ಎಲ್ಲ ಪರೀಕ್ಷೆಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಲಿದೆ.

ಎಸೆಸೆಲ್ಸಿ, ದ್ವಿತೀಯ ಪಿಯುಸಿ: ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಸಿ, ಅದರಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆ ನಡೆಸಲಾಗುತ್ತಿತ್ತು. 2023-24ನೇ ಸಾಲಿನಿಂದ ಪೂರಕ ಪರೀಕ್ಷೆಯ ಬದಲಿಗೆ 2 ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಎಸೆಸೆಲ್ಸಿ, ದ್ವಿತೀಯ ಪಿಯುಸಿಗೆ ತಲಾ ಮೂರು ವಾರ್ಷಿಕ ಪರೀಕ್ಷೆ ಇರಲಿದೆ.

ಪರೀಕ್ಷೆ ಬರೆಯುವವರಿಗೆ ಈ ಹಿಂದಿನಂತೆ ಶೇ.75ರಷ್ಟು ಹಾಜರಾತಿ ಕಡ್ಡಾಯ. ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ಹೊಸಬರು, ಖಾಸಗಿ ಅಭ್ಯರ್ಥಿಗಳು ಎಲ್ಲ ವಿಷಯಗಳಲ್ಲಿ ಪರೀಕ್ಷೆ-1ನ್ನು ಬರೆಯುವುದು ಕಡ್ಡಾಯ. ನೇರವಾಗಿ ಪರೀಕ್ಷೆ-2, ಪರೀಕ್ಷೆ-3ಕ್ಕೆ ಹಾಜರಾಗಲು ಅವಕಾಶವಿಲ್ಲ. ಪರೀಕ್ಷೆ-1ರಲ್ಲಿ ತೇರ್ಗಡೆ ಹೊಂದಿದವರು 2 ಮತ್ತು 3ನೇ ಪರೀಕ್ಷೆ ತೆಗೆದುಕೊಳ್ಳಲು ಆಸಕ್ತಿ ಹೊಂದಿರದಿದ್ದರೆ ಅಂಕಪಟ್ಟಿ ಪಡೆಯಬಹುದು. ಪರೀಕ್ಷೆ-2, 3 ಬರೆಯಲು ಬಯಸುವವರಿಗೆ ಅಂತಿಮವಾಗಿ ಅಂಕಪಟ್ಟಿ ಸಿಗಲಿದೆ. ಈ ಮೂರು ಪರೀಕ್ಷೆಯಲ್ಲಿ ವಿಷಯವಾರು ಅತ್ಯುತ್ತಮ ಅಂಕವನ್ನು ಆಯ್ಕೆ ಮಾಡಲು ಅವಕಾಶವಿದೆ. ಅಂಕ ಪಟ್ಟಿಗೆ ಒಮ್ಮೆ ಮಾತ್ರ ಶುಲ್ಕ ಇರಲಿದೆ.

Advertisement

ತನಿಖೆ ತಂಡ:  ವಿದ್ಯಾರ್ಥಿಗಳಿಗೆ ಆಂತರಿಕೆ ಅಂಕಗಳನ್ನು ನೀಡುವ ಸಂಬಂಧ ಜಿಲ್ಲಾ ಉಪ ನಿರ್ದೇಶಕರು ಅಗತ್ಯ ತನಿಖಾ ತಂಡವನ್ನು ರಚಿಸಿ ಪ್ರತಿ ಪ್ರೌಢಶಾಲೆ/ ಕಾಲೇಜುಗಳಿಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳ ಹಾಜರಾತಿ, ಗೈರು ಹಾಜರಾತಿ, ನೋಂದಣಿ ಮಾಡಿ ಕೊಂಡ ವಿದ್ಯಾರ್ಥಿಗಳ ಮಾಹಿತಿ ಪರಿ ಶೀಲಿಸಲು ನಿರ್ದೇಶಿಸಿ, ಇಲಾಖೆಗೆ ವರದಿ ಸಲ್ಲಿಸಬೇಕು.

ರಾಜ್ಯ ಪಠ್ಯಕ್ರಮದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯ ಮಾಪನ-2 (ಎಸ್‌ಎ-2) ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಯನ್ನು ಮಂಡಳಿಯಿಂದ ಶಾಲಾ ಮತ್ತು ಕಾಲೇಜು ಹಂತದಲ್ಲಿ ಏಕರೂಪ ವ್ಯವಸ್ಥೆಯಲ್ಲಿ ನಡೆಸಲಾಗುತ್ತದೆ. ಪ್ರಶ್ನೆ ಪತ್ರಿಕೆಯನ್ನು ಮಂಡಳಿಯಿಂದಲೇ ಸಿದ್ಧಪಡಿಸಿ, ಬಿಇಪಿ ಹಾಗೂ ಉಪ ನಿರ್ದೇಶಕರಿಗೆ ಕಳುಹಿಸಲಾಗುತ್ತದೆ.

9ನೇ ತರಗತಿ ಪರೀಕ್ಷೆಗೆ ಸಮೀಪದ ಶಾಲೆಯ ಶಿಕ್ಷಕರು ಕೊಠಡಿ ಮೇಲ್ವಿಚಾರಕರಾಗಿ, 11ನೇ ತರಗತಿ ಪರೀಕ್ಷೆಗೆ ಆಯಾ ಕಾಲೇಜಿನ ಉಪನ್ಯಾಸಕರು ಕೊಠಡಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಲಿದ್ದಾರೆ. 9ನೇ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನ ತಾಲೂಕು ಹಂತದಲ್ಲಿ ಹಾಗೂ 11ನೇ ತರಗತಿ ಉತ್ತರ ಪತ್ರಿಕೆ ಮೌಲ್ಯಮಾಪನವು ಕಾಲೇಜು ಹಂತದಲ್ಲೇ ನಡೆಯಲಿದೆ.

ಅನುತ್ತೀರ್ಣತೆ ಇಲ್ಲ:  ಮೌಲ್ಯಮಾಪನವಾದ ತತ್‌ಕ್ಷಣವೇ ಫ‌ಲಿತಾಂಶವನ್ನು ಮುಖ್ಯ ಶಿಕ್ಷಕರು/ ಪ್ರಾಂಶುಪಾಲರು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡಬೇಕು. 9ನೇ ತರಗತಿ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡುವಂತಿಲ್ಲ, ಫ‌ಲಿತಾಂಶವನ್ನು ಆಯಾ ವಿದ್ಯಾರ್ಥಿ, ಪೋಷಕರಿಗೆ ಮಾತ್ರ ನೀಡಬೇಕು. 11ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಆಯಾ ಕಾಲೇಜು ಹಂತದಲ್ಲೇ ಪೂರಕ ಪರೀಕ್ಷೆ ನಡೆಸಲು ಮಂಡಳಿಯು ಎಲ್ಲ ಪ್ರೌಢ ಶಾಲೆ ಹಾಗೂ ಪಿಯು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.

9 ಮತ್ತು 11ನೇ ತರಗತಿ ವಾರ್ಷಿಕ ಪರೀಕ್ಷೆ  ಮುಗಿದ ಬಳಿಕ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಗೂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ ನಡೆಸಲಿದ್ದೇವೆ. ಈಗಾಗಲೇ ಎಲ್ಲ ಪ್ರೌಢಶಾಲೆ, ಪಿಯು ಕಾಲೇಜುಗಳಿಗೆ ನಿರ್ದೇಶನ ಕಳುಹಿಸಲಾಗಿದೆ. ಮೂರು ವಾರ್ಷಿಕ ಪರೀಕ್ಷೆಗಳಲ್ಲೂ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶ ವಿದೆ. -ರಾಮಚಂದ್ರನ್‌ ಆರ್‌., ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ

Advertisement

Udayavani is now on Telegram. Click here to join our channel and stay updated with the latest news.

Next