Advertisement

ನಿತ್ಯನೂತನ ಉಪವನ

12:28 PM Feb 19, 2018 | Team Udayavani |

ಪಾರ್ಕ್‌ ಎಂದರೆ ಬರಿ ಗಿಡ ಮರ, ಎಲೆ ಬಳ್ಳಿ ಅಲ್ಲ. ಅಲ್ಲಿನ ಕಲ್ಲುಬೆಂಚಿನ ಮೇಲೆ ಕೂತು ಸ್ನೇಹಿತರ ಜತೆ ಪಟ್ಟಾಂಗ ಹೊಡೆಯುವುದಲ್ಲ. ಪ್ರೇಯಸಿ, ಪ್ರಿಯತಮರ ಜತೆ ಕೂಡಿ ಮರಸುತ್ತುವುದಲ್ಲ. ಬೋರಾದಾಗ, ದಣಿವಾದಾಗ ಹುಲ್ಲು ಹಾಸನ್ನೇ ಹಾಸಿಗೆ ಮಾಡಿಕೊಂಡು ಗಂಟೆಗಟ್ಟಲೆ ಪವಡಿಸುವುದಲ್ಲ. ಅವುಗಳಿಗೆಲ್ಲಕ್ಕೂ ಮಿಗಿಲಾದ ಅಸಂಖ್ಯ ಚಟುವಟಿಕೆಗಳು ಅಲ್ಲಿ ನಡೆಯುತ್ತಿರುತ್ತವೆ. ಅವುಗಳನ್ನು ಕಾಣುವುದಕ್ಕೂ ಅದೃಷ್ಟ ಬೇಕು.

Advertisement

ಅವುಗಳು ಧಿಗ್ಗನೆ ಕಣ್ಣಿಗೆ ಗೋಚರಿಸುವುದಿಲ್ಲ. ಒಂದು ಕ್ಷಣ ಪ್ರಶಾಂತ ಮನಸ್ಸಿನಿಂದ, ಕಲ್ಲಿನಂತೆ ಕುಳಿತಾಗ ಮಾತ್ರ ಕಾಡು ಕಾಣುತ್ತದೆ ಎಂದ ತೇಜಸ್ವಿಯ ಮಾತು ಇಲ್ಲಿಗೂ ಅನ್ವಯಿಸುತ್ತೆ. ಮರುಭೂಮಿಯ ನಡುವಿನ ಓಯಸಿಸ್‌ನಂತೆ ಇರುವ ಕಬ್ಬನ್‌ ಪಾರ್ಕಿನಲ್ಲಿ ವೈವಿಧ್ಯಮಯ, ಕುತೂಹಲಕರ ಚಟುವಟಿಕೆಗಳು, ಪ್ರಯೋಗಗಳು ನಡೆಯುತ್ತಿರುತ್ತವೆ. ಬೆಂಗಳೂರಿಗರು ಈ ಪಾರ್ಕನ್ನು ಹೇಗೆಲ್ಲಾ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಮೇಲಿನ ಪುಟ್ಟ ನೋಟ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ…

ಬ್ಯಾಲೆನ್ಸ್‌ ಮಾಡ್ತೀರಾ?: ಲೈಫ‌ಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಅಂದರೆ ಬ್ಯಾಲೆನ್ಸ್‌ ಮಾಡಿಕೊಂಡು ಹೋಗಬೇಕು ಅನ್ನುತ್ತಾರೆ. ಅದು ಎಷ್ಟು ಮಂದಿಗೆ ಸಾಧ್ಯವಾಗುತ್ತದೋ ಗೊತ್ತಿಲ್ಲ, ಆದರೆ ಕಬ್ಬನ್‌ ಪಾರ್ಕಿನಲ್ಲಿ ಬ್ಯಾಲೆನ್ಸ್‌ ಮಾಡುವವರದ್ದೇ ಒಂದು ತಂಡವಿದೆ. ಇವರು ಹಗ್ಗದ ಮೇಲೆ ನಡೆಯುತ್ತಾ ಬಾಡಿ ಬ್ಯಾಲೆನ್ಸ್‌ ಮಾಡುವವರು. ಇದೊಂದು ವ್ಯಾಯಾಮ, ಕ್ರೀಡೆ. ಇದನ್ನು ಸ್ಲಾಕ್‌ ಲೈನಿಂಗ್‌ ಎನ್ನುತ್ತಾರೆ. ಅದೆಷ್ಟು ಜನರಿಗೆ ಇದರ ಕುರಿತು ತಿಳಿದಿದೆಯೋ ಗೊತ್ತಿಲ್ಲ. ಇದರದ್ದೇ ವಿಶ್ವಕಪ್‌ ಕೂಡಾ ನಡೆಯುತ್ತೆ.

ಎರಡು ಮರಗಳ ನಡುವೆ, ನೆಲದಿಂದ 3- 4 ಅಡಿ ಎತ್ತರದಲ್ಲಿ ವಿಶೇಷ ಹಗ್ಗವನ್ನು ಕಟ್ಟಲಾಗುತ್ತೆ. ಅದರ ಮೇಲೆ ಯಾವುದೆ ಉಪಕರಣಗಳ ಸಹಾಯವಿಲ್ಲದೆ ಬೆನ್ನು ತಗ್ಗಿಸಿ, ಮೊಣಕಾಲೂರಿ ಎರಡು ತುದಿಗಳ ನಡುವೆ ನಡೆಯುವುದೇ ಸ್ಲಾéಕ್‌ಲೈನಿಂಗ್‌. ಇದರಲ್ಲಿ ಬಹಳಷ್ಟು ಹಂತಗಳಿವೆ. ಎತ್ತರ ಹೆಚ್ಚಿಸುವುದು, ಹಗ್ಗದ ಉದ್ದ ಹೆಚ್ಚಿಸುವುದು, ಇವೆಲ್ಲವೂ ಅಡ್ವಾನ್ಸ್‌ಡ್‌ ಲೆವೆಲ್‌. ಕಬ್ಬನ್‌ಪಾರ್ಕಿನಲ್ಲಿ ಸ್ಲಾéಕ್‌ ಲೈನಿಂಗ್‌ ಚಟುವಟಿಕೆಯಲ್ಲಿ ತೊಡಗಿರುವ ಸ್ಲಾéಕ್‌ ಡಾಟ್‌ ಇನ್‌ ತಂಡದ ಕ್ರಿಯಾಶೀಲ ಸದಸ್ಯರಲ್ಲೊಬ್ಬರು ಫ್ರೀಲ್ಯಾನ್ಸ್‌ ವೆಬ್‌ಡೆವೆಲಪರ್‌ ಆಗಿರುವ ಲೋಚನ್‌.

ನಾವು ಅಭ್ಯಾಸ ಮಾಡುತ್ತಿದ್ದಾಗ ಕುತೂಹಲದಿಂದ ನೋಡುತ್ತಿದ್ದ ಅನೇಕರು ಈಗ ನಮ್ಮ ತಂಡದ ಸದಸ್ಯರಾಗಿದ್ದಾರೆ. ಯಾರು ಬೇಕಾದರೂ ನಮ್ಮ ಜೊತೆ ಪಾಲ್ಗೊಳ್ಳಬಹುದು. ಆನ್‌ಲೈನ್‌ ನೋಂದಣಿ ಇಲ್ಲ. ಕಬ್ಬನ್‌ಪಾರ್ಕಿಗೆ ಬಂದು ಒಮ್ಮೆ ನಮ್ಮ ತಂಡವನ್ನು ಭೇಟಿ ಮಾಡಿದವರು ನಮ್ಮ ವಾಟ್ಸಾಪ್‌ ಗ್ರೂಪಿನ ಸದಸ್ಯರಾಗಬಹುದು. ಯಾವುದೇ ಶುಲ್ಕವಿಲ್ಲ. ಹೆಚ್ಚು ಜನರು ಬಂದಷ್ಟೂ ನಮಗೆ ಖುಷಿ  ಹೆಚ್ಚು’ ಎನ್ನುತ್ತಾರೆ ಲೋಚನ್‌. ಅಂದ ಹಾಗೆ ಸ್ಲಾéಕ್‌ಲೈನಿಂಗ್‌ನಿಂದ ಏಕಾಗ್ರತೆ ಹೆಚ್ಚುತ್ತದೆ, ಬೆನ್ನಿನ ಸ್ನಾಯು, ಮಂಡಿ ಬಲಗೊಳ್ಳುತ್ತವೆ ಎನ್ನುವುದು ಅವರ ಅಭಿಪ್ರಾಯ.

Advertisement

ಹಸಿರು ಸಿರಿಯ ಯೋಗ: ಹಸಿರು ವಾತಾವರಣದಲ್ಲಿ, ಶುದ್ಧ ಗಾಳಿಯನ್ನು ಉಸಿರಾಡುತ್ತಾ ಯೋಗಾಭ್ಯಾಸ ಮಾಡಬೇಕೆಂದವರಿಗೂ ಕಬ್ಬನ್‌ ಪಾರ್ಕಿನಲ್ಲಿ ಜಾಗವಿದೆ. ನೀತೂ ಮನೀಶ್‌ ಎನ್ನುವವರು ಆಸಕ್ತರಿಗೆ ಉಚಿತ ಯೋಗಾಭ್ಯಾಸ (oga in the park) ಹೇಳಿಕೊಡುತ್ತಾರೆ. ಕಳೆದ 3- 4 ವರ್ಷಗಳಿಂದ ವಾರಾಂತ್ಯದಂದು ಬೆಳಗ್ಗೆ 7 ಗಂಟೆಗೆ ಕಬ್ಬನ್‌ಪಾರ್ಕಿನಲ್ಲಿ ಯೋಗಾಭ್ಯಾಸ ಹೇಳಿಕೊಡುತ್ತಾ ಬಂದಿದ್ದಾರೆ.

ಕಬ್ಬನ್‌ಪಾರ್ಕಿನಲ್ಲಿರುವ ಕ್ವೀನ್‌ ವಿಕ್ಟೋರಿಯಾ ವಿಗ್ರಹದ ಬಳಿ ಬೆಳಗ್ಗೆ ಆ ಸಮಯಕ್ಕೆ ಯೋಗ ಮ್ಯಾಟ್‌ ಒಂದನ್ನು ಕೈಯಲ್ಲಿ ಹಿಡಿದುಕೊಂಡು ಹೋದವರು ಯಾರು ಬೇಕಾದರೂ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಬಹುದು. ವಾರದ ದಿನಗಳಲ್ಲಿ ಕಾರ್ಪೊರೇಟ್‌ನಲ್ಲಿರುವವರಿಗೆ ಯೋಗಾಭ್ಯಾಸ ಕಾರ್ಯಾಗಾರಗಳನ್ನು ನೀತೂ ಅವರು ಹಮ್ಮಿಕೊಳ್ಳುತ್ತಾರೆ. “ಯೋಗಾಬ್ಯಾಸ ಮಾಡುವಾಗ ಸುತ್ತ ನೋಡುತ್ತಾ ನಿಂತವರನ್ನೂ ನಾನು ಯೋಗ ಮಾಡಲು ಆಹ್ವಾನಿಸುತ್ತೇನೆ. ಆ ರೀತಿಯಿಂದಾದರೂ ಯೋಗದಲ್ಲಿ ಜನರನ್ನು ತೊಡಗಿಸುವ ಉದ್ದೇಶ ನನ್ನದು’ ಎನ್ನುತ್ತಾರೆ ಯೋಗ ಶಿಕ್ಷಕಿ ನೀತೂ ಮನೀಶ್‌. 

ಸೋಷಿಯಲ್‌ ಎಕ್ಸ್‌ಪೆರಿಮೆಂಟ್‌: ಕಬ್ಬನ್‌ ಪಾರ್ಕಿನಲ್ಲಿ ವಿನೂತನ ಸಾಮಾಜಿಕ ಪ್ರಯೋಗಗಳೂ ನಡೆಯುತ್ತಿರುತ್ತವೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಕಣ್ಣಿಗೆ ಬಟ್ಟೆ ಕಟ್ಟಿ ಅಪರಿಚಿತರೊಂದಿಗೆ ಮಾತುಕತೆ ನಡೆಸುವ (ಬ್ಲೆ„ಂಡ್‌ಫೋಲ್ಡ್‌ ಸೆಷನ್ಸ್‌) ಪ್ರಯೋಗವಿದು. ಜಾನೆಟ್‌ ಎನ್ನುವ ಹೆಣ್ಣುಮಗಳು ಈ ಪ್ರಯೋಗದ ರೂವಾರಿ. ಏನಪ್ಪಾ ಇದು, ಕೇಳಲು ವಿಚಿತ್ರವಾಗಿದೆ ಎಂದು ತೋರಬಹುದು. ಆದರೆ ಈ ಪರಿಕಲ್ಪನೆಯ ಹಿಂದೆ ಒಂದು ರಹಸ್ಯ ಅಡಗಿದೆ.

ಜೀವನದಲ್ಲಿ ನಾವು ವ್ಯಕ್ತಿಗಳನ್ನು ಅವರ ಉಡುಗೆ ತೊಡುಗೆ, ಮೇಲ್ನೋಟದ ಆಧಾರದ ಮೇಲೆ ಜಡ್ಜ್ ಮಾಡುತ್ತೇವೆ. ಎಷ್ಟೋ ಬಾರಿ ಈ ಅಭಿಪ್ರಾಯ ಸುಳ್ಳೇ ಆಗಿರುತ್ತದೆ. ಹೀಗಾಗಿ ಕಣ್ಣಿದ್ದೂ ಕುರುಡರಾಗಿ, ಮನುಷ್ಯನ ನಿಜವಾದ ಆಂತರಿಕ ಮೌಲ್ಯವನ್ನು ಅರಿಯಲಾರದೆ ಹೋಗುತ್ತೇವೆ. ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿ ಮಾತನಾಡುವ ಪ್ರಯೋಗ ಫ‌ಲಪ್ರದವಾಗುವುದು. ಯಾವುದೇ ಪೂರ್ವಗ್ರಹಗಳಿಲ್ಲದೆ ಮಾತುಕತೆಯಲ್ಲಿ ತೊಡಗುವುದರಿಂದ ಮನಸ್ಸು ನಿಜಕ್ಕೂ ಹಗುರಾಗುತ್ತದೆ ಎನ್ನುವುದು ಪಾಲ್ಗೊಂಡವರ ಅಭಿಪ್ರಾಯ. ಇಲ್ಲಿ ಭಾಷೆಯ ತೊಡಕಿಲ್ಲ.

ಪಾಲ್ಗೊಳ್ಳುವವರು ಯಾವ ಬಾಷೆಯಲ್ಲಿ ಮಾತನಾಡಲಿಚ್ಚಿಸುವರೋ ಅದೇ ಭಾಷಿಕರನ್ನು ಜೊತೆ ಮಾಡಿ ಕೂರಿಸಲಾಗುತ್ತೆ. “ಚಪ್ಪಲಿ ಶೂಗಳನ್ನು ಬದಿಗಿಟ್ಟು, ಬರಿಗಾಲನ್ನು ಹುಲ್ಲಿನ ಮೇಲಿಟ್ಟಾಗ ಸಿಗುವ ಆನಂದದ ಮುಂದೆ ಬೇರೇನೂ ಬೇಡ ಎನ್ನಿಸುತ್ತೆ. ಅದಕ್ಕೇ ಕಬ್ಬನ್‌ ಪಾರ್ಕನ್ನು ಈ ಪ್ರಯೋಗಕ್ಕೆ ಆರಿಸಿಕೊಂಡೆ’ ಎನ್ನುತ್ತಾರೆ ಬರಹಗಾರ್ತಿ ಮತ್ತು ರಂಗಭೂಮಿ ಕಲಾವಿದೆಯೂ ಆಗಿರುವ ಆಯೋಜಕಿ ಜಾನೆಟ್‌. ಇವರ ತಂಡದ ಫೇಸ್‌ಬುಕ್‌ ಪೇಜನ್ನು ಗಮನಿಸುತ್ತಾ ಇದ್ದರೆ ಮುಂದಿನ ಸಲ ಕಾರ್ಯಕ್ರಮ ಆಯೋಜಿಸಿದಾಗ ಮಾಹಿತಿ ಸಿಗುತ್ತೆ. bit.ly/2nrc8vL

ಪಾರ್ಕಿನಲ್ಲಿ ಕಾಮಿಡಿ ಕಿಲಾಡಿಗಳು: ಕಬ್ಬನ್‌ ಪಾರ್ಕಿನಲ್ಲಿ ಹಾಸ್ಯ ನಾಟಕವನ್ನು ನೋಡಲೂ ಸಿಗುತ್ತೆ. ಕೆಲ ತಂಡಗಳು ತಯಾರಿ ನಡೆಸಲೆಂದು ಬಂದಿದ್ದರೆ ಇನ್ನು ಕೆಲ ನಾಟಕ ತಂಡಗಳು ಪ್ರದರ್ಶನವನ್ನೇ ಪಾರ್ಕಿನಲ್ಲಿ ಏರ್ಪಡಿಸುತ್ತವೆ. ಅಂಥದ್ದೊಂದು ತಂಡ “ಯೂ ಕ್ಯಾನ್‌ ಲಾಫ್ ಕ್ಲಬ್‌’. ಅವರ ವೈಶಿಷ್ಟéತೆ ಇಂಪ್ರೊವ್‌ ಹಾಸ್ಯಪ್ರಕಾರ. ಈ ಪ್ರಕಾರದಲ್ಲಿ ಸಿದ್ಧ ನಿರೂಪಣೆಯಾಗಲಿ, ಕಥೆಯಾಗಲಿ ಇರುವುದಿಲ್ಲ.

ವೇದಿಕೆಯಲ್ಲಿ ಲೈವ್‌ ಆಗಿ ಸಮಯಕ್ಕೆ ತಕ್ಕಂತೆ ಕಾಮಿಡಿ ಮಾಡುತ್ತಾ ಹೋಗುವುದು ಈ ಪ್ರಕಾರದ ಶೈಲಿ. “ಯೂ ಕ್ಯಾನ್‌ ಲಾಫ್ ಕ್ಲಬ್‌’ ಹಲವು ವರ್ಷಗಳಿಂದ ಕಬ್ಬನ್‌ ಪಾರ್ಕಿನಲ್ಲಿ ಹಾಸ್ಯ ಪ್ರದರ್ಶನ ನೀಡುತ್ತಾ ಬಂದಿದೆ. ನೋಡುವ ಇಚ್ಚೆಯಿದ್ದವರು ಈ ಶನಿವಾರ ಬೆಳಗ್ಗೆ ಸುಮಾರು 10 ಗಂಟೆಯ ಹೊತ್ತಿಗೆ ಕಬ್ಬನ್‌ ಪಾರ್ಕಿಗೆ ಬರಬಹುದು. ತಂಡದ ವಾಟ್ಸಾಪ್‌ ಗ್ರೂಪ್‌ ಒಂದಿದ್ದು, ತಂಡಕ್ಕೆ ಸೇರಲಿಚ್ಚಿಸುವವರು, ಅಥವಾ ಪ್ರದರ್ಶನ ನೋಡಲಿಚ್ಚಿಸುವವರು ಗ್ರೂಪ್‌ಗೆ ಸೇರಬಹುದು. bit.ly/2BEPXqO

ಪೆನ್ಸಿಲ್‌ ಮತ್ತು ಚಾಯ್‌: ಚಿತ್ರಕಲೆಯನ್ನು ಪ್ರಚುರಪಡಿಸುವ ಉದ್ದೇಶದಿಂದ ಪಾರ್ಕಿನಲ್ಲಿ ನುರಿತ ಶಿಕ್ಷಕರಿಂದ ಉಚಿತವಾಗಿ ಚಿತ್ರಕಲೆ ಹೇಳಿಕೊಡುವ ತಂಡದ ಹೆಸರೇ ಪೆನ್ಸಿಲ್‌ ಮತ್ತು ಚಾಯ್‌. ಅವರದ್ದೇ ಒಂದು ಕಲಾಶಾಲೆಯೂ ಇದೆ. ವಾರಾಂತ್ಯದಂದು ಇವರ ಕಾರ್ಯಾಗಾರದಲ್ಲಿ ಭಾಗವಹಿಸುವ ಇಚ್ಚೆಯಿದ್ದವರು ಬೆಳಗ್ಗೆ 10 ಗಂಟೆಯ ಸಮಯಕ್ಕೆ ಕಬ್ಬನ್‌ ಪಾರ್ಕಿನಲ್ಲಿರುವ ಸೆಂಟ್ರಲ್‌ ಲೈಬ್ರರಿಯ ಹಿಂದೆ ಸೇರುತ್ತಾರೆ. ಅಲ್ಲಿಂದ ಒಟ್ಟಾಗಿ ಗಿಡಮರಗಳಿರುವಲ್ಲಿ ಹೋಗುತ್ತಾರೆ.

“ನಾಲ್ಕು ಗೋಡೆಯ ನಡುವೆ ಚಿತ್ರಗಳನ್ನು ಬಿಡಿಸುವುದು ಒಂದು ರೀತಿಯ ಸವಾಲಾದರೆ, ಪ್ರಕೃತಿಯ ನಡುವೆ ಇದ್ದು ಕಣ್ಣ ಮುಂದೆ ಇರುವುದನ್ನು ಬಿಳಿ ಹಾಳೆ ಮೇಲೆ ಸೆರೆಹಿಡಿಯುವುದು ಮತ್ತೂಂದು ರೀತಿಯ ಸವಾಲು’ ಎನ್ನುತ್ತಾರೆ ಕಾರ್ಯಾಗಾರದ ಆಯೋಜಕರಲ್ಲೊಬ್ಬರಾದ ಗಾಯತ್ರಿ. 20ರಿಂದ 25 ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಾರೆ. ಆ ಸಂದರ್ಭದಲ್ಲಿ ಆ ಸ್ಥಳದಲ್ಲಿ ಹಾಜರಿದ್ದವರು ಪಾಲ್ಗೊಳ್ಳಬೇಕೆಂದು ಇಚ್ಚಿಸಿದರೆ ಪಾಲ್ಗೊಳ್ಳಬಹುದು.

ಮುಂಚಿತವಾಗಿ ನೋಂದಣಿ(bit.ly/2FtM9eH) ಮಾಡಿಸಿದರೆ ಅಭ್ಯರ್ಥಿಗಳ ಆಸಕ್ತಿಯನ್ನು ತಿಳಿದುಕೊಂಡು ಕಲಾಶಿಕ್ಷಕರು ಅವರಿಗೆ ಕಲಿಯಲು ಸುಲಭವಾಗುವಂತೆ ಚಿತ್ರಕಲೆಯಲ್ಲಿ ತೊಡಗುವ ಮಾರ್ಗಗಳನ್ನು ರೂಪಿಸುತ್ತಾರೆ. ಕಬ್ಬನ್‌ ಪಾರ್ಕಿನ ಸೆಂಟ್ರಲ್‌ ಲೈಬ್ರರಿ, ಗಿಡ ಮರಗಳು, ವಾಯುವಿಹಾರಕ್ಕೆ ಬರುವ ಜನರು ಕಾರ್ಯಾಗಾರದಲ್ಲಿ ಚಿತ್ರಗಳಿಗೆ ವಸ್ತುವಾಗಿದ್ದಾರೆ. ಲ್ಯಾಂಡ್‌ಸ್ಕೇಪ್‌, ಪೋರ್ಟ್‌ರೇಟ್‌ ಮತ್ತು ರಿಯಲಿಸ್ಟಿಕ್‌ ಶೈಲಿಯ ಚಿತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತೆ. ಮೊದಲನೆ ಬಾರಿ ಪಾಲ್ಗೊಳ್ಳುತ್ತಿರುವವರು ಚಿತ್ರಕಲೆಯಲ್ಲಿ ನುರಿತರಾಗಿರಬೇಕೆಂಬ ಯಾವುದೇ ನಿಯಮವಿಲ್ಲ.

ಇನ್‌ಫಾರ್ಮಲ್‌ ಸಂಗೀತ ಕಛೇರಿ: ಸಂಗೀತ ಕಛೇರಿ ಎಂದರೆ ಸಾಮಾನ್ಯವಾಗಿ ಗಂಭೀರವಾದ ವಾತಾವರಣವಿರುತ್ತದೆ ಎಂಬುದು ನಮ್ಮ ಕಲ್ಪನೆಯಲ್ಲಿರುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾದ ಇನ್‌ಪಾರ್ಮಲ್‌ ಸಂಗೀತ ಕಛೇರಿ ಕಬ್ಬನ್‌ ಪಾರ್ಕಿನಲ್ಲಿ ಆಗಾಗ ನಡೆಯುತ್ತಾ ಇರುತ್ತೆ. ಈ ಸಂಗೀತ ಕಛೇರಿಯಲ್ಲಿ ಧ್ವನಿವರ್ಧಕಗಳು ಇರುವುದಿಲ್ಲ. ಗಿಟಾರ್‌, ಕೊಳಲು ಮತ್ತಿತರ ಅಕೌಸ್ಟಿಕ್‌ ವಾದ್ಯಗಳು ಮಾತ್ರ ಇರುತ್ತವೆ.

ಕೆಲವೇ ವಾದ್ಯಗಳ ಸಂಯೋಜನೆಯಲ್ಲಿ ಸಂಗೀತ ಅದ್ಬುತವಾಗಿ ಮೂಡಿಬರುತ್ತೆ. ಇಲ್ಲಿ ಸಂಗೀತಗಾರರು ತಮಗೆ ಹಿತವೆನಿಸುವ ಭಂಗಿಯಲ್ಲಿ ಕೂತೋ, ನಿಂತುಕೊಂಡೋ, ಹಾಡಿಗೆ ತಕ್ಕಂತೆ ಅನುಭವಿಸುತ್ತಾ ಸಂಗೀತ ಸೃಷ್ಟಿಸುತ್ತಾ ಜನರಿಗೆ ಮನರಂಜನೆ ಒದಗಿಸುತ್ತಾರೆ. ಕೆಲವೇ ವಾದ್ಯಗಳು ಇರುವುದರಿಂದ ಸಂಗೀತ ಹಿತವಾಗಿ ಮತ್ತು ಮಿತವಾಗಿರುತ್ತೆ. ಮ್ಯೂಸಿಕ್‌ ಜಾಮ್‌ ಎನ್ನುವ ಹೆಸರಿನಲ್ಲಿ ಏರ್ಪಡುವ ಈ ಕಾರ್ಯಕ್ರಮವನ್ನು ಕಣ್ಣಾರೆ ಕಾಣಬೇಕೆಂದರೆ ಆಯೋಜಕರ ವೆಬ್‌ಪೇಜನ್ನು ಆಗಾಗ್ಗೆ ಗಮನಿಸುತ್ತಾ ಇರಬೇಕಾಗುತ್ತೆ.

ಪಾರ್ಕಿನಲ್ಲಿದ್ದವರು ಸಂಗೀತ ಕೇಳುವುದಷ್ಟೇ ಅಲ್ಲ ತಾವೇ ಸ್ವತಃ ವಾದ್ಯಗಳನ್ನು ನುಡಿಸಬಹುದು. ಅಥವಾ ಹಾಡುವ ಆಸೆಯಿದ್ದರು ಅಲ್ಲಿ ತಮ್ಮ ಗಾಯನವನ್ನು ಪ್ರದರ್ಶಿಸಬಹುದು. ಇಂಥದ್ದೇ ಭಾಷೆಯ ಹಾಡಾಗಬೇಕೆಂದೇನೂ ಇಲ್ಲ. ಕನ್ನಡ, ಹಿಂದಿ, ಇಂಗ್ಲೀಷ್‌ ಭಾ,ಎಯ ಹಾಡುಗಳು ಇಲ್ಲಿ ಹಾಡಲ್ಪಡುತ್ತವೆ. ಎಷ್ಟೋ ಸಲ ವಾಕಿಂಗ್‌ ಮಾಡುತ್ತಿದ್ದ ಹಳೆ ತಲೆಮಾರಿನ ಸಂಗೀತಗಾರರು ಕಿರಿಯ ಸಂಗೀತಗಾರರ ಜೊತೆ ಸೇರಿಕೊಂಡಾಗ ಹಳೆಯ ಮತ್ತು ಹೊಸ ಸಂಗೀತ ಪ್ರಕಾರಗಳು ಮಿಳಿತಗೊಂಡು ಅದ್ಭುತವನ್ನು ಸೃಷ್ಟಿಸಿದ ಉದಾಹರಣೆಯೂ ಇದೆ ಎನ್ನುತ್ತಾರೆ ಆಯೋಜಕರು. ವೆಬ್‌ಪೇಜಿಗೆ ಕೊಂಡಿ- bit.ly/2nrc8vL

* ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next