Advertisement

ಮಹಾಕಾವ್ಯ ರಚಿಸಲಿಲ್ಲ ಎಂಬ ಕೊರಗಿದೆ

12:58 PM Sep 23, 2018 | Team Udayavani |

ಬೆಂಗಳೂರು: ಕವಿತೆಗಳನ್ನು ರಚಿಸುವ ಮೂಲಕ ನನ್ನ ಹಾದಿಯನ್ನು ಸರಿಪಡಿಸಿಕೊಂಡೆ.ಆದರೂ,ನನ್ನ ಲೇಖನಿಯಿಂದ ಮಹಾಕಾವ್ಯವೊಂದು ಇನ್ನೂ ಹೊರಹೊಮ್ಮಲಿಲ್ಲ ಎಂಬ ಕೊರಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ ಡಾ. ದೊಡ್ಡರಂಗೇಗೌಡ ಹೇಳಿದ್ದಾರೆ.

Advertisement

ಕನ್ನಡ ಸಾಹಿತ್ಯ ಪರಿಷತ್ತುನಲ್ಲಿ ಶನಿವಾರ ಆಯೋಜಿಸಲಾಗಿದ್ದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ದೇಶೀಯ ಛಂದಸ್ಸನ್ನು ಲಾವಣಿ ಮುಖಾಂತರ ಹೇಳುವ ಮೂಲಕ ಮಹಾಕಾವ್ಯ ಬರೆಯಬೇಕೆಂದುಕೊಂಡಿದ್ದೇನೆ. ನನ್ನ ಜೀವಿತಾವಧಿಯಲ್ಲಿ ಅದನ್ನು ಸಾಧಿಸುತ್ತೇನೆ ಎಂದು ತಿಳಿಸಿದರು.

ಜೀವನದಲ್ಲಿ ಅನೇಕ ನಿಂದನೆಗಳನ್ನು ಅನುಭವಿಸಿದ್ದೇವೆ.ಆದರೂ,ಯಾವುದಕ್ಕೂ ನಾನು ತಲೆಕೆಡಸಿಕೊಂಡಿಲ್ಲ.ಟೀಕೆಗಳು ಇಲ್ಲದೇ ಸಾಧನೆ ಅಸಾಧ್ಯ.ಈ ಹಿಂದೆ ವಿಧಾನ ಪರಿಷತ್ತಿಗೆ ನಾನು ಆಯ್ಕೆಯಾದಾಗ ಹಲವರು ಒಳ್ಳೆಯ ಆಯ್ಕೆ, ಆದರೆ ಒಳ್ಳೆ ಪಾರ್ಟಿ ಅಲ್ಲ ಎಂದು ಟೀಕಿಸಿದ್ದರು. ಆದರೆ ನಾನು ಒಳ್ಳೆ ಪಾರ್ಟಿ ಮತ್ತು ಒಳ್ಳೆ ಆಯ್ಕೆ ಎಂದು ಉತ್ತರ ನೀಡಿದ್ದೇ ಎಂದು ಹೇಳಿದರು.

ಕನ್ನಡಪರ ಇಲ್ಲ: ಕನ್ನಡ ಅನುಷ್ಠಾನದ ವಿಚಾರದಲ್ಲಿ ನ್ಯಾಯಾಲಯಗಳು ಕನ್ನಡ ಪರ ಇಲ್ಲ. ಹೀಗಾಗಿ ಸಾಂವಿಧಾನಿಕ ವ್ಯವಸ್ಥೆಯಲ್ಲೇ ಇದಕ್ಕೆ  ಪರಿಹಾರ ಕಂಡುಕೊಳ್ಳಬೇಕು. ಸರ್ಕಾರ ಸಂವಿಧಾನದಲ್ಲಿ ತಿದ್ದುಪಡಿ ತಂದು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ಮೂಲಕ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು ಎಂದು ನುಡಿದರು.

ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಟೀಕಿಸಿದ ಅವರು, ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಬಾರದು. ಈ ಕೆಲಸ ಮಾಡುವ ಬದಲು ಜನಪ್ರತಿನಿಧಿಗಳಿಗೆ ಈ ಶಾಲೆಗಳನ್ನು ದತ್ತು ಪಡೆಯಲು ಮುಂದಾಗಬೇಕು.

Advertisement

ಸರ್ಕಾರಿ ಶಾಲೆಯಲ್ಲಿ ಓದಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು  ಕೂಡ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದೆ ಬರಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಗೌರವ ಕಾರ್ಯದರ್ಶಿ ವ.ಚ. ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ. ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.
 
ನನ್ನ ಚಿತ್ರಕ್ಕೇ ಗೀತೆ ರಚಿಸೋದಿಲ್ವಾ?: ದಶಕಗಳ ಹಿಂದೆ ಹಿರಿಯ ನಿರ್ಮಾಪಕ ವೀರಸ್ವಾಮಿ ಅವರು, ತಮ್ಮ ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಆ ಚಿತ್ರಕ್ಕೆ ಗೀತೆ ರಚನಾಕರನಾಗಿದ್ದೆ. ಹಾಗೇ ಸಿ.ಅಶ್ವತ್ಥ್ ಅವರು ಸಂಗೀತ ನಿರ್ದೇಶನ ಮಾಡಬೇಕಾಗಿತ್ತು. ಆದರೆ ನನಗೆ ಆ ಪ್ರಸಂಗಕ್ಕೆ ಸಾಹಿತ್ಯ ರಚಿಸಲು ಇಷ್ಟವಿರಲ್ಲಿಲ್ಲ.

ಹೀಗಾಗಿ, ನಾನು ಈ ಚಿತ್ರಕ್ಕೆ ಗೀತೆಗಳನ್ನು ರಚಿಸಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿಬಿಟ್ಟೆ. ಇದಕ್ಕೆ ಅಶ್ವತ್ಥ್ ಕೂಡ ನನ್ನದೇ ಹಾದಿ ಹಿಡಿದರು. ಆಗ ನಿರ್ಮಾಪಕರು “ನನ್ನ ಚಿತ್ರಕ್ಕೇ ನೀವು ಗೀತೆ ರಚಿಸೋದಿಲ್ವಾ’ ಎಂದು ಗಟ್ಟಿಧ್ವನಿಯಲ್ಲಿ ಪ್ರಶ್ನಿಸಿದ್ದರು. ಆ ಪ್ರಸಂಗ ಇನ್ನೂ ನನ್ನ ನೆನಪಿನಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next