ಕೊರೊನಾದಿಂದಾಗಿ ಇಡೀ ಜಗತ್ತಿನ ಎಲ್ಲ ವ್ಯವಸ್ಥೆಗಳು ಅದಲುಬದಲಾಗಿವೆ. ಭಾರತವೂ ಇದಕ್ಕೆ ಹೊರತಲ್ಲ. ಅದರಲ್ಲೂ ಇಡೀ ಶಿಕ್ಷಣ ವ್ಯವಸ್ಥೆಯ ಆವರ್ತನೆಯೇ ಬದಲಾಗಿ ಬಿಟ್ಟಿದೆ. ಪ್ರತೀ ವರ್ಷವೂ ಜೂನ್‌ನಲ್ಲಿ ಆರಂಭವಾಗುತ್ತಿದ್ದ ಶೈಕ್ಷಣಿಕ ವರ್ಷ, ಈ ಕೊರೊನಾದಿಂದಾಗಿ ಯಾವಾಗ ಆರಂಭವಾಗಿ, ಯಾವಾಗ ಮುಗಿಯುತ್ತಿದೆ ಎಂದು ಹೇಳಲೂ ಆಗದಷ್ಟು ಗೊಂದಲಕ್ಕೀಡಾಗಿದೆ.
ಅದರಲ್ಲೂ ಕೊರೊನಾ ಶುರುವಾದಾಗಿನಿಂದಲೂ ಶಾಲಾ-ಕಾಲೇಜುಗಳು ಸರಿಯಾಗಿ ನಡೆದೇ ಇಲ್ಲ. ಆನ್‌ಲೈನ್ ಪಾಠ, ಪರೀಕ್ಷೆ ಇಲ್ಲದೇ ವಿದ್ಯಾರ್ಥಿಗಳು ಉತ್ತೀರ್ಣದಂಥ ನಿಯಮಗಳೂ ಜಾರಿಯಾಗಿವೆ. ಅದರಲ್ಲೂ ಪ್ರಾಥಮಿಕ ಹಂತದ ಶಾಲೆಗಳು ಒಂದೂವರೆ ವರ್ಷದ ಬಳಿಕ ಇತ್ತೀಚೆಗಷ್ಟೇ ಆರಂಭವಾಗಿವೆ.
ಇಂಥ ಸಂಕಷ್ಟದ ಕಾಲದಲ್ಲಿ ರಾಜ್ಯ ಸರಕಾರ ವೈದ್ಯ ಕನಸುಹೊತ್ತ ವಿದ್ಯಾರ್ಥಿಗಳಿಗೆ ಆಘಾತ ನೀಡಿದೆ. ಇದೇ ಡಿ.31ರ ಒಳಗೆ ಎಂಜಿನಿಯರಿಂಗ್ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಬಳಿಕ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಾಕ್ ನೀಡಿದೆ. ರಾಜ್ಯ ಸರಕಾರದ ಈ ನಿರ್ಧಾರ, ವೈದ್ಯ ಕಾಲೇಜು ಸೇರ್ಪಡೆಗಾಗಿ ಕಾದು ಕುಳಿತಿರುವ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಬಹಳಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದು, ವೈದ್ಯಕೀಯ ಕೌನ್ಸೆಲಿಂಗ್‌ಗಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹಲವರು ವೈದ್ಯಕೀಯ ಸೀಟ್ ಸಿಗದಿದ್ದರೆ, ಎಂಜಿನಿಯರಿಂಗ್ ಕಾಲೇಜಿಗೆ ಸೇರುವ ಆಸೆ ಇರಿಸಿಕೊಂಡಿದ್ದರು. ಈಗ ಡಿ.31ಕ್ಕೇ ಎಂಜಿನಿಯರಿಂಗ್ ಪ್ರಕ್ರಿಯೆ ಮುಗಿದು ಬಿಟ್ಟರೆ, ಇವರು ಅನಿವಾರ್ಯವಾಗಿ ವೈದ್ಯರಾಗುವ ಕನಸು ಬಿಟ್ಟು, ಎಂಜಿನಿಯರಿಂಗ್ ಕಾಲೇಜಿಗೆ ಸೇರಬೇಕಾಗುತ್ತದೆ.
ಕೊರೊನಾಗೆ ಮುಂಚೆ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟ್‌ಗಳನ್ನು ಜತೆಜತೆಯಾಗಿ ಹಂಚಿಕೆ ಮಾಡಿ, ಜು.31 ಅಥವಾ ಆ.15ರ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸುತ್ತಿತ್ತು. ಆದರೆ ಈ ವರ್ಷ ಸುಪ್ರೀಂಕೋರ್ಟ್‌ನ ನೀಟ್‌ನ ವಿವಾದದ ಸಂಬಂಧ ವಿಚಾರಣೆ ಚಾಲ್ತಿಯಲ್ಲಿದ್ದು, ವೈದ್ಯಕೀಯ ಸೀಟ್‌ಗಳ ಹಂಚಿಕೆ ಪ್ರಕ್ರಿಯೆಯೇ ಆರಂಭವಾಗಿಲ್ಲ. ಈ ಮಧ್ಯೆ ಡಿ.31ಕ್ಕೇ ಎಂಜಿನಿಯರಿಂಗ್ ಆಯ್ಕೆ ಪ್ರಕ್ರಿಯೆ ಮುಗಿಸಬೇಕು ಎಂದು ರಾಜ್ಯ ಸರಕಾರ ಆದೇಶ ನೀಡಿರುವುದು ಯಾವ ನ್ಯಾಯ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈಗ ಎಂಜಿನಿಯರಿಂಗ್ ಸೀಟ್ ಅನ್ನೂ ಬಿಟ್ಟು, ಮುಂದೆ ವೈದ್ಯಕೀಯ ಸೀಟ್ ಸಿಗದೇ ಹೋದರೆ ನಾವೇನು ಮಾಡಬೇಕು ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.
ಒಂದು ಲೆಕ್ಕಾಚಾರದಲ್ಲಿ ವಿದ್ಯಾರ್ಥಿಗಳ ಪ್ರಶ್ನೆ ಉಚಿತವಾಗಿಯೇ ಇದೆ. ಏಕೆಂದರೆ ನೀಟ್ ಮತ್ತು ಸಿಇಟಿ ಸೀಟ್ ಹಂಚಿಕೆ ಪ್ರಕ್ರಿಯೆ ಜತೆಯಾಗಿಯೇ ನಡೆಯಬೇಕು. ಇದು ನಡೆಯದಿದ್ದರೆ ವೈದ್ಯಕೀಯ ಸೀಟ್ ಸಿಗದೇ ಹೋದರೆ ವಿದ್ಯಾರ್ಥಿಗಳು ಏನು ಮಾಡಬೇಕು? ಅಲ್ಲದೆ ಇದುವರೆಗೆ ಸುಮ್ಮನೇ ಇದ್ದ ಸರಕಾರ ದಿಢೀರನೇ ಡಿ.31ರ ಒಳಗೆ ಪ್ರಕ್ರಿಯೆ ಮುಗಿಸಿ ಎಂದು ಹೇಳಿರುವುದರ ಉದ್ದೇಶವಾದರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ.
ಹೀಗಾಗಿ ರಾಜ್ಯ ಸರಕಾರ ನೀಟ್ ಬರೆದ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಮುಗಿಸಿದ ಬಳಿಕ, ಅಲ್ಲಿ ಸೀಟ್ ಸಿಗದೇ ಇರುವವರಿಗೆ ಮುಂದೆ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಸಿಗುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಅವರ ಭವಿಷ್ಯ ಡೋಲಾಯಮಾನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.