ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಹಿನ್ನೆಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವಿನ ಎರಡನೇ ಬಾರಿಯ ಮೈತ್ರಿಯೂ ಬಹುತೇಕ ಅಂತ್ಯಗೊಂಡಂತಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನ ಗಳಿಸಿ ಬಿಜೆಪಿ 104 ಸ್ಥಾನ ಗಳಿಸಿದ್ದರಿಂದ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸರ್ಕಾರ ರಚನೆ ಮಾಡಿತ್ತು. ನಂತರ ಎದುರಾದ ಮೂರು ಲೋಕಸಭೆ, ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಮೈತ್ರಿ ಮುಂದುವರಿಸಿ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಾಗಿತ್ತು.
ಲೋಕಸಭೆ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ತಲಾ ಒಂದು ಸ್ಥಾನಕ್ಕೆ ಇಳಿದು ಹೀನಾಯವಾಗಿ ಸೋಲು ಅನುಭವಿಸಿತು. ಅಲ್ಲಿಂದ ಸಮ್ಮಿಶ್ರ ಸರ್ಕಾರದ ಬುಡ ಅಲ್ಲಾಡತೊಡಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ವಿಧಾನಸಭೆಯ ಸಂಖ್ಯಾಬಲ ಕಡಿಮೆಯಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡಿತು.
ಇದಾದ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೇರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಧಾಳಿ ನಡೆಸಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಅವರೇ ಕಾರಣ ಎಂದು ದೂರಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಸಿದ್ದರಾಮಯ್ಯ ಅವರು ದೇವೇಗೌಡರ ಕುಟುಂಬದ ಮೇಲೆ ಆರೋಪಗಳ ಸುರಿಮಳೆಗೈಯ್ದಿದ್ದಾರೆ. ಇದರೊಂದಿಗೆ ಹದಿನೈದು ತಿಂಗಳ ಮೈತ್ರಿ ಕಡಿತವಾದಂತಾಗಿದೆ.
ಇದು ಎರಡನೇ ಬಾರಿ: ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಇದೇ ಮೊದಲಲ್ಲ. 2004ರ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿತ್ತು. ಕಾಂಗ್ರೆಸ್‌ನಿಂದ ಧರ್ಮಸಿಂಗ್ ಮುಖ್ಯಮಂತ್ರಿಯಾಗಿ, ಸಿದ್ದರಾಮಯ್ಯ ಜೆಡಿಎಸ್‌ನಿಂದ ಉಪ ಮುಖ್ಯಮಂತ್ರಿಯಾಗಿದ್ದರು. ಇಪ್ಪತ್ತು ತಿಂಗಳ ನಂತರ ಎಚ್.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ವೈಮನಸ್ಯ ಉಂಟಾಗಿ ಸರ್ಕಾರ ಪತನಗೊಂಡಿತ್ತು. ನಂತರ ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಾಗಿತ್ತು.