ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ “ಸಾಹಿತ್ಯ ಸದಾ ಜನಪರವೇ’ ಗೋಷ್ಠಿ ಚರ್ಚೆಗೆ ಗ್ರಾಸವಾಯಿತು. ಹಲವು ಪ್ರಶ್ನೆಗಳನ್ನು ಮೂಡಿಸಿತಲ್ಲದೇ ಎಡ-ಬಲ ಪಂಥಗಳ ಮಧ್ಯದ ರೋಚಕ ಚರ್ಚೆಗೂ ಕಾರಣವಾಯಿತು. ಜನಪರ ಸಾಹಿತ್ಯ ಎಂದರೆ ಯಾವುದು? ಜನರ ಮಧ್ಯೆ ಇದ್ದು ಬರೆವ ಸಾಹಿತ್ಯವೇ? ಅಥವಾ ಜನರು ಇಷ್ಟಪಡುವ ಸಾಹಿತ್ಯವೇ? ಎಂಬ ಬಗ್ಗೆ ವ್ಯಾಪಕ ವಿಚಾರ ವಿನಿಮಯ ನಡೆಯಿತು.
ಕುಂ. ವೀರಭದ್ರಪ್ಪ ಹಾಗೂ ಮಲ್ಲಿಕಾ ಘಂಟಿ ಶೋಷಿತರು ರಚನೆ ಮಾಡಿದ ಸಾಹಿತ್ಯ ಜನಪರ ಸಾಹಿತ್ಯ ಎಂದು ವಾದ ಮಂಡಿಸಿದರು. ಆದರೆ ಇದನ್ನು ಆಕ್ಷೇಪಿಸಿದ ಪ್ರೇಕ್ಷಕರೊಬ್ಬರು ಶೋಷಿತರೆಂದರೆ ಕೇವಲ ದಲಿತರಷ್ಟೇ ಅಲ್ಲ, ವಿವಿಧ ರೀತಿಯ ಶೋಷಣೆಗೊಳಗಾದವರೂ ಸಾಕಷ್ಟಿದ್ದಾರೆ. ಅವರಲ್ಲಿ ಕೆಲವರು ಬಲ ಪಂಥಿಯರು ಆಗಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ವೇದಿಕೆ ಮೇಲಿದ್ದ ಯಾರೂ ಸಮರ್ಪಕ ಉತ್ತರ ನೀಡಲಿಲ್ಲ.
ಗೋಷ್ಠಿ ಪ್ರೇಕ್ಷಕರ ಪ್ರಶ್ನೆಗಳಲ್ಲೇ ಕೊನೆಗೊಂಡಿತು. ಸಂವಾದಕ್ಕೆ ಹೆಚ್ಚು ಅವಕಾಶ ಲಭಿಸಿದ್ದರಿಂದ ಗೋಷ್ಠಿಯಲ್ಲಿ ಪ್ರೇಕ್ಷಕರು ಆಸಕ್ತಿಯಿಂದ ಪಾಲ್ಗೊಂಡರು. ಕುಂ.ವೀರಭದ್ರಪ್ಪ ಮಾತನಾಡಿ, ಕಳೆದ 40 ವರ್ಷಗಳಿಂದ ಜನರ ಮಧ್ಯೆ ಇದ್ದುಕೊಂಡೇ ಬರೆದಿದ್ದೇನೆ. ಹಿಂದುಳಿದ ಪ್ರದೇಶದಿಂದ ಬಂದಿದ್ದರಿಂದ ವಿಮಶಾì ಲೋಕ ನನ್ನನ್ನು ದೂರ ಇಟ್ಟಿತು. ವಿಮರ್ಶಕರ ಕೈಗೆ ಸಿಗಲಾರದ್ದು ಒಳ್ಳೆಯದೇ ಆಗಿದೆ. ಇಲ್ಲದಿದ್ದರೆ 18 ಕಾದಂಬರಿಗಳನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ.
ನಾನು ಬರೆದಿದ್ದೆಲ್ಲ ಜನಪರ ಸಾಹಿತ್ಯ. ನನಗೆ ಸಾಹಿತ್ಯಕ್ಕಿಂತ ಶಿಕ್ಷಕ ವೃತ್ತಿ ಶ್ರೇಷ್ಠ ಎನಿಸುತ್ತದೆ. ನಾನು ಕಲಿಸಿದ ದಲಿತ ವಿದ್ಯಾರ್ಥಿಗಳು ಈಗ ಶಾಲೆಗಳಲ್ಲಿ ಶಿಕ್ಷಕರಾಗಿ, ಕಚೇರಿಗಳಲ್ಲಿ ಗುಮಾಸ್ತರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಇವರು ನನ್ನ ಸಾಹಿತ್ಯ ಕೃತಿಗಳಿಗಿಂತ ಶ್ರೇಷ್ಠ ಎಂದರು. ಚಳವಳಿಗಳ ಹಿನ್ನೆಲೆಯಿಂದ ಬಂದ ನನ್ನಂಥ ಲೇಖಕರು ಯಾವುದೇ ವಿಶ್ವವಿದ್ಯಾÇಯದ ಹಂಗಿಲ್ಲದೇ ಸಾಹಿತ್ಯ ಲೋಕಕ್ಕೆ ಬಂದೆವು ಎಂದರು.
ಚಳವಳಿಗೆ ಇದು ಸೂಕ್ತ ಕಾಲ: ಸತ್ಯ ಹೇಳಿದರೆ ರಾಷ್ಟ್ರದ್ರೋಹಿ ಎನ್ನುತ್ತಾರೆ. ದೇಶದಲ್ಲಿ ಅಘೋಷಿತ ತುರ್ತು ಜಾರಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕುವುದು ಸುಲಭವಲ್ಲ. ಸಾಹಿತಿಗಳು ನಮಗೆ ಅನಿಸಿದ್ದನ್ನು ಬರೆಯಬೇಕು. ಚಳವಳಿಗೆ ಇದುಸೂಕ್ತ ಸಂದರ್ಭವಾಗಿದೆ ಎಂದರು. ಜನಪರ ಎಂಬುದು ಪಂಪನ ಕಾಲದಿಂದಲೂ ಇದೆ. ವ್ಯವಸ್ಥೆ ವಿರುದ್ಧ ಪ್ರತಿಭಟನೆ ಪ್ರತಿ ಕಾಲಘಟ್ಟದಲ್ಲೂ ಇತ್ತು. ಸಮಾಜ ಜೀವಂತವಾಗಿದೆ ಎಂಬುದನ್ನು ತಿಳಿಯಲು ಚಳವಳಿ ಅವಶ್ಯ ಎಂದರು.
ಮಲ್ಲಿಕಾ ಘಂಟಿ ಮಾತನಾಡಿ, ಶೋಷಿತರಿಗೆ ತಮ್ಮಲ್ಲಿನ ಸಾಮರ್ಥ್ಯದ ಅರಿವಿಲ್ಲ. ಅವರ ಸಾಮರ್ಥ್ಯದ ಅರಿವಾಗದಂತೆ ಮೇಲ್ವರ್ಗದವರು ಷಡ್ಯಂತ್ರ ನಡೆಸಿದರು. ವಿಮರ್ಶೆ ಮಾಡಲು ವಿಮರ್ಶಕರಿಗೆ ಜಾತಿ ಅಹಂಕಾರ ಕಾಡಿತು. ಕೆಲವರು ನಮ್ಮ ಸಾಹಿತ್ಯಕ್ಕೆ ಜನಪ್ರಿಯ ಹಣೆಪಟ್ಟಿ ಹಚ್ಚಿದರು ಎಂದರು. ದಾಮೋದರ ಶೆಟ್ಟಿ ಮಾತನಾಡಿ, ಯಾವ ಸಾಹಿತ್ಯವೂ ಶಾಶ್ವತ ಸಾಹಿತ್ಯವಲ್ಲ. ಕಾಲಕ್ಕೆ ತಕ್ಕಂತೆ ರಾಮಾಯಣ, ಮಹಾಭಾರತ ಮಾರ್ಪಾಡಾಗುತ್ತ ಬಂದಿವೆ.
ಸಂಚಾರಿ ಭಾವಗಳಿದ್ದಾಗ ಸಾಹಿತ್ಯದ ಆಯಸ್ಸು ಹೆಚ್ಚಾಗುತ್ತದೆ. ವಚನ ಸಾಹಿತ್ಯ ಹಾಗೂ ಬೇಂದ್ರೆ ಸಾಹಿತ್ಯ ಜನಪ್ರಿಯವೂ ಹೌದು, ಜನಪರವೂ ಹೌದು ಎಂದು ತಿಳಿಸಿದರು. ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಜಗದೀಶ ಕೊಪ್ಪ ಮಾತನಾಡಿ, ಸಾಹಿತ್ಯ ಸೃಷ್ಟಿ ಆದಾಗಿನಿಂದ ಸಾಹಿತ್ಯ ಜನಪರವೇ ಎಂಬ ಜಿಜ್ಞಾಸೆ ನಡೆದಿದೆ. ಜನಪರ ಕಾಳಜಿ ಇರುವ ಸಾಹಿತ್ಯವೇ ಜನಪರ ಸಾಹಿತ್ಯವಾಗಿದೆ ಎಂದರು.