Advertisement

ವಿಸರ್ಜನೆಗೆ ಬಿಡಲ್ಲ

10:49 AM Jun 09, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಇಲ್ಲ. ಮತದಾರರು ನಮಗೆ 105 ಸ್ಥಾನ ಕೊಟ್ಟಿರುವುದು ಐದು ವರ್ಷ ಆಡಳಿತ ನಡೆಸಲು ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿ ಯೂರಪ್ಪ ಅವರು ಸಮ್ಮಿಶ್ರ ಸರ್ಕಾರ ಪತನವಾದರೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

Advertisement

ಈ ಮೂಲಕ, ಬಿಜೆಪಿಗೆ ಹೋದರೆ ಹೊಸ ಸರ್ಕಾರ ರಚನೆಯಾಗುವ ಬದಲಿಗೆ ವಿಧಾನಸಭೆ ವಿಸರ್ಜನೆಯಾಗಿ ಮತ್ತೆ ಚುನಾವಣೆ ಎದುರಾಗಬಹುದು ಎಂಬ ಆತಂಕದಲ್ಲಿದ್ದವರಿಗೆ ಸಮ್ಮಿಶ್ರ ಸರ್ಕಾರ ಪತನವಾದರೆ ನಾವು ಸರ್ಕಾರ ರಚಿಸುತ್ತೇವೆ ಎಂಬ ಅಭಯ ನೀಡಿದ್ದಾರೆ ಎಂದು ವಿಶ್ಲೇಷಣೆಗಳು ಕೇಳಿಬರುತ್ತಿವೆ.

ನಿಖೀಲ್ ಕುಮಾರಸ್ವಾಮಿಯವರು ಯಾವುದೇ ಸಂದರ್ಭದಲ್ಲಿ ಚುನಾವಣೆ ಎದುರಾಗಬಹುದು, ಸಜ್ಜಾಗಿರಿ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ, ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ನಡೆಸಲು ಬಿಡಲ್ಲ. ನಾವು 105 ಸ್ಥಾನ ಗೆದ್ದಿದ್ದೇವೆ. ಜನರು ಐದು ವರ್ಷ ಆಡಳಿತ ನಡೆಸಲು ಶಾಸಕರನ್ನು ಆರಿಸಿ ಕಳುಹಿಸಿದ್ದಾರೆ. ಚುನಾವಣೆ ಏನಿದ್ದರೂ ಐದು ವರ್ಷದ ನಂತರವೇ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರ ಈ ಹೇಳಿಕೆ ಕಾಂಗ್ರೆಸ್‌ನ ಅತೃಪ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಿಂದ ತಮಗೆ ಅವಕಾಶ ಸಿಗಬಹುದು ಎಂದು ಕಾದುಕುಳಿತಿದ್ದವರು ಸದ್ಯಕ್ಕೆ ವಿಸ್ತರಣೆ ಅಥವಾ ಪುನಾರಚನೆ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿರುವುದರಿಂದ ಮತ್ತೆ ಬಿಜೆಪಿಯತ್ತ ಚಿತ್ತ ಹರಿಸಿದ್ದಾರೆ ಎಂದು ಹೇಳಲಾಗಿದೆ.

ರಮೇಶ್‌ ಸಭೆ?: ಕಾಂಗ್ರೆಸ್‌ನ ಬಂಡಾಯ ನಾಯಕ ರಮೇಶ್‌ ಜಾರಕಿಹೊಳಿ ಬೆಂಗಳೂರಿನಲ್ಲಿ ಮತ್ತೆ ಬೆಂಬಲಿಗರ ಸಭೆ ಕರೆದಿದ್ದಾರೆ. ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಶುಕ್ರವಾರ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರುವ ನಿರೀಕ್ಷೆಯಿದೆ.

Advertisement

ಸಮ್ಮಿಶ್ರ ಸರ್ಕಾರದಲ್ಲಿ ಅತೃಪ್ತರಾಗಿರುವ ಕಾಂಗ್ರೆಸ್‌ ಶಾಸಕರು ಅವರಾಗಿಯೇ ರಾಜೀನಾಮೆ ನೀಡಿದರೆ ಆಗ ಮಧ್ಯಪ್ರವೇಶ ಮಾಡಿ ಸರ್ಕಾರ ರಚನೆ ಕಸರತ್ತು ಪ್ರಾರಂಭಿಸಲು ರಾಜ್ಯ ಬಿಜೆಪಿ ನಾಯಕರು ಈಗಲೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಹೈಕಮಾಂಡ್‌ ಬೇರೆಯದೇ ಯೋಚನೆಯಲ್ಲಿದೆ ಎಂದೂ ಹೇಳಲಾಗಿದೆ.

ವಿಧಾನಸಭೆ ವಿಸರ್ಜಿಸಿದರೆ ಸ್ವಾಗತಾರ್ಹ. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನ ಗೆದ್ದಿರುವ ನಾವು 157 ವಿಧಾನಸಭೆ ಕ್ಷೇತ್ರಗಳಲ್ಲಿ ಲೀಡ್‌ ಗಳಿಸಿದ್ದೇವೆ. ಈಗ ಚುನಾವಣೆ ನಡೆದರೆ 150ರಿಂದ 160 ಸ್ಥಾನ ಗೆಲ್ಲಲಿದ್ದೇವೆ ಎಂದು ಹೇಳಿದ್ದರು. ಆ ನಂತರ ಆಪರೇಷನ್‌ ಕಮಲ ಮಾಡಲು ವರಿಷ್ಠರು ಸೂಚನೆ ಕೊಟ್ಟಿಲ್ಲ. ನಾವು ಪ್ರತಿಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದರು. ಈ ಬೆಳವಣಿಗೆಯಿಂದ ಬಿಜೆಪಿ ಆಪರೇಷನ್‌ ಕಮಲ ಕೈ ಬಿಟ್ಟು ಮೌನವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದಾದ ನಂತರ ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ನಡೆಸಿದ್ದ ಸಂಪುಟ ವಿಸ್ತರಣೆ, ಪುನಾರಚನೆ ಕಸರತ್ತಿಗೂ ಬ್ರೇಕ್‌ ಬಿದ್ದಿತ್ತು. ಸಾಕಷ್ಟು ಆಕಾಂಕ್ಷಿಗಳು ಹುಟ್ಟಿಕೊಂಡ ಕಾರಣ ಜೇನುಗೂಡಿಗೆ ಕಲ್ಲು ಎಸೆದಂತಾಗಬಹುದು ಎಂದು ಎರಡೂ ಪಕ್ಷಗಳು ಕಸರತ್ತಿಗೆ ತಾತ್ಕಾಲಿಕ ವಿರಾಮ ಹಾಕಿವೆ.

ಇದರ ಬೆನ್ನಲ್ಲೇ ನಿಖೀಲ್ ಕುಮಾರಸ್ವಾಮಿ, ಚುನಾವಣೆ ಯಾವಾಗಲಾದರೂ ಬರಬಹುದು. ನೀವು ಸಜ್ಜಾಗಿರಿ ಎಂದು ಹೇಳಿದ್ದರು. ಕಾಂಗ್ರೆಸ್‌ನ ಅತೃಪ್ತರು ಬಿಜೆಪಿ ಕಡೆ ಹೋಗದಂತೆ ತಡೆಯುವುದು ಇದರ ಉದ್ದೇಶ ಎಂಬ ಮಾತುಗಳು ಕೇಳಿಬಂದಿದ್ದವು.

ಯಡಿಯೂರಪ್ಪ ಅವರು ಹುಬ್ಬಳ್ಳಿಯಲ್ಲಿ ಹೇಳಿಕೆ ಕೊಟ್ಟ ನಂತರ ಸಿಎಂ ಕುಮಾರಸ್ವಾಮಿಯವರು ಸಹ ನಿಖೀಲ್ ಹೇಳಿಕೆಗೆ ಸ್ಪಷ್ಟನೆ ನೀಡಿ, ಪಕ್ಷವನ್ನು ಚುರುಕಾಗಿಟ್ಟಿರಬೇಕು ಎಂಬ ಉದ್ದೇಶದಿಂದ ನಿಖೀಲ್ ಆ ರೀತಿ ಹೇಳಿಕೆ ಹೇಳಿದ್ದಾರೆ. ಮೈತ್ರಿ ಸರ್ಕಾರ ತನ್ನ 5 ವರ್ಷ ಪೂರ್ಣಗೊಳಿಸುತ್ತದೆ. ಮಧ್ಯಂತರ ಚುನಾವಣೆ ವಿಷಯವೇ ಈಗ ಅಪ್ರಸ್ತುತ ಎಂದು ಹೇಳಿದ್ದಾರೆ.

ರಮೇಶ್‌ ರಂಗಪ್ರವೇಶ?
ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದ ಅತೃಪ್ತರನ್ನು ರಮೇಶ್‌ ಜಾರಕಿಹೊಳಿ ಸಂಪರ್ಕ ಮಾಡಿದ್ದು ಅವರೆಲ್ಲರೂ ಮತ್ತೆ ಸಭೆ ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಿದ್ದಾರೆ. ಕನಿಷ್ಠ 10 ರಿಂದ 15 ಶಾಸಕರನ್ನು ಬಿಜೆಪಿಯತ್ತ ಸೆಳೆಯಲು ಶತ ಪ್ರಯತ್ನ ನಡೆಸುತ್ತಿರುವ ರಮೇಶ್‌ ಜಾರಕಿಹೊಳಿ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುಂದಕ್ಕೆ ಹೋಗಿರುವುದರಿಂದ ಮತ್ತೆ ‘ರಂಗಪ್ರವೇಶ’ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಂ ಬಾಂಬ್‌ ಫಿಕ್ಸ್‌ ಮಾಡಿದ್ದಾರೆ ಎಂದು ಹೇಳಿದ್ದೆ. ಈಗ ಅವರದ್ದೇ ಪಕ್ಷದ ನಾಯಕರೇ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಶಾಸಕ ರೋಷನ್‌ ಬೇಗ್‌ ಅವರು ಸಿದ್ದರಾಮಯ್ಯ, ದಿನೇಶ ಗುಂಡೂರಾವ್‌, ರಾಜ್ಯ ಉಸ್ತುವಾರಿ ವೇಣುಗೋಪಾಲ ಬಗ್ಗೆ ತೀರಾ ನಿಕೃಷ್ಟವಾಗಿ ಮಾತನಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗದಂತಹ ದಯನೀಯ ಸ್ಥಿತಿ ಕಾಂಗ್ರೆಸ್‌ಗೆ ಎದುರಾಗಿದೆ.
 ಜಗದೀಶ್‌ ಶೆಟ್ಟರ್‌, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next