ಮಂಡ್ಯ : ರಾಜ್ಯದಲ್ಲಿ ಕರಾಳ ದಿನವೆಂಬಂತೆ ಎರಡು ಭೀಕರ ಅಪಘಾತಗಳು ಸಂಭವಿಸಿ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, ಕಾರಿಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ(ಡಿಸೆಂಬರ್ 21) ಬೆಳಗ್ಗೆ ಮಳವಳ್ಳಿಯಲ್ಲಿ ನಡೆದಿದೆ.
ಬೋಸೇಗೌಡನದೊಡ್ಡಿಯ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಇನ್ನೊಬ್ಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಮೃತ ದುರ್ದೈವಿಗಳು ಬೆಂಗಳೂರಿನ ಐಐಟಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ವಾರಾಂತ್ಯದ ವೇಳೆ ತಲಕಾಡು ಪ್ರವಾಸಕಕ್ಕೆಂದು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತ ದುರ್ದೈವಿಗಳು ಪ್ರಣವ್, ಆಕಾಶ್, ಆದರ್ಶ್ ಎಂಬವರಾಗಿದ್ದು, ಪೃಥ್ವಿ ಸ್ಥಿತಿ ಗಂಭೀರವಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ. ಬದುಕುಳಿದ ಪೃಥ್ವಿ ಸ್ಥಳದಲ್ಲಿ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ಥಳಕ್ಕಾಗಮಿಸಿದ ಮಳವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿ, ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಐಷಾರಾಮಿ ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕಾರಿನಲ್ಲಿದ್ದ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನೆಲಮಂಗಲದ ತಾಳೇಕೆರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಶನಿವಾರ(ಡಿ.21) ಸಂಭವಿಸಿದೆ.
ಶನಿವಾರ ಸಂಜೆಯವರೆಗೆ ರಾಜ್ಯದ ವಿವಿಧೆಡೆಯಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 21 ಮಂದಿ ಪ್ರಾಣ ಕಳೆದುಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.