Advertisement

ಆನೆಯ ಕಿವಿಯು ಕೆಲವು ದಿನ ಸೊಳ್ಳೆ ರಾಜನ ಅರಮನೆ

11:37 PM Dec 14, 2020 | mahesh |

ಇದು ಟಿಬೆಟ್‌ನ ಒಂದು ಹಳೆಯ ಕತೆ. ಒಂದು ಸಣ್ಣ ಸೊಳ್ಳೆ ಇತ್ತು. ಈ ಕತೆ ರಚಿಸಿದವರು ನಮ್ಮ ನಿಮ್ಮ ಹಾಗೆಯೇ ಮನುಷ್ಯರಾದ್ದರಿಂದ ಸಣ್ಣ ಸೊಳ್ಳೆ ಎಂದರು. ಆದರೆ ಸೊಳ್ಳೆಗಳ ಪಾಲಿಗೆ ಅದು ದೊಡ್ಡದೇ ಆಗಿತ್ತು, ಏಕೆಂದರೆ ಅದು ಸೊಳ್ಳೆಗಳ ರಾಜ.

Advertisement

ಆ ಕಾಲದಲ್ಲಿ ಕೆಲವು ಸೊಳ್ಳೆಗಳು ತಿಪ್ಪೆಯಲ್ಲಿ, ಇನ್ನು ಕೆಲವು ಮರದ ಬುಡ ದಲ್ಲಿ, ಮತ್ತೆ ಕೆಲವು ಬಚ್ಚಲು ಗುಂಡಿಯಲ್ಲಿ- ಹೀಗೆ ಸಿಕ್ಕಸಿಕ್ಕಲೆಲ್ಲ ವಾಸವಾಗಿದ್ದವು. ಆದರೆ ರಾಜನಿಗೆ ಹಾಗೆ ಇರುವುದಕ್ಕಾಗುತ್ತದೆಯೇ! ಹಾಗಾಗಿ ಸೊಳ್ಳೆ ರಾಜನಿಗೆ ಸೂಕ್ತವಾದ ಒಂದು ವಾಸಸ್ಥಳಕ್ಕಾಗಿ ಸೊಳ್ಳೆಗಳೆಲ್ಲ ಹುಡುಕಾಟ ಆರಂಭಿಸಿದವು. ಆ ಶೋಧದಲ್ಲಿ ಆನೆಯ ಕಿವಿಯೇ ಶ್ರೇಷ್ಠ ಸ್ಥಳ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಸೊಳ್ಳೆಗಳು ರಾಜನಲ್ಲಿ ಆನೆಯ ಕಿವಿಯಲ್ಲಿ ವಾಸ ಮಾಡುವಂತೆ ವಿನಂತಿಸಿ ದವು. ರಾಜ ಅದಕ್ಕೆ ಒಪ್ಪಿ ಆನೆಯ ಬಳಿಗೆ ಹೋದ. ಅದರ ಎದುರು ಎದೆ ಸೆಟೆಸಿ ನಿಂತು, “ಓ ಆನೆಯೇ, ನಾನು ಸೊಳ್ಳೆಗಳ ದೊರೆ, ನಿನ್ನ ಕಿವಿಯನ್ನು ಅಲಂಕರಿಸಲು ಬಂದಿದ್ದೇನೆ. ಇದು ನಿನ್ನ ಭಾಗ್ಯ ಎಂದು ತಿಳಿದುಕೋ’ ಎಂದು ಹೇಳಿತು. ಆನೆಯಿಂದ ಹಾಂ -ಹೂಂ ಏನೂ ಪ್ರತಿಕ್ರಿಯೆ ಬರಲಿಲ್ಲ. ಮೌನವೇ ಸಮ್ಮತಿಯ ಲಕ್ಷಣ ಎಂದುಕೊಂಡು ಸೊಳ್ಳೆ ರಾಜ ಆನೆಕಿವಿಯಲ್ಲಿ ವಾಸ ಆರಂಭಿಸಿತು.

ದಿನಗಳು ಉರುಳಿದವು. ತಿಂಗಳುಗಳು ಕಳೆದವು. ಸೊಳ್ಳೆರಾಜನ ಸಂತತಿ ವೃದ್ಧಿಸಿತು. ಆದರೂ ಆನೆಕಿವಿಯಲ್ಲಿ ಅವೆಲ್ಲವುಗಳಿಗೂ ಬೇಕಾದಷ್ಟು ಸ್ಥಳ ಇತ್ತು. ಕೊನೆಗೊಂದು ದಿನ ಇಲ್ಲಿ ವಾಸ ಸಾಕು ಎಂದುಕೊಂಡ ಸೊಳ್ಳೆರಾಜ ಹೊಸ ವಾಸಸ್ಥಳ ಹುಡುಕಲು ಇತರ ಸೊಳ್ಳೆಗಳಿಗೆ ಆಣತಿ ಇತ್ತಿತು. ಮತ್ತೂಮ್ಮೆ ಆನೆಯ ಎದುರು ನಿಂತು, “ಇಗೋ ನಾನು ಹೊರಟಿದ್ದೇನೆ’ ಎಂದು ಹೇಳಿತು.

ಈಗಲೂ ಆನೆಯ ಹಾಂ -ಹೂಂ ಇಲ್ಲ. ಆನೆಗೆ ಕೇಳಿಸಿಲ್ಲವೇ ಎಂಬ ಸಂಶಯ ಹುಟ್ಟಿತು ಸೊಳ್ಳೆ ರಾಜನಿಗೆ. ಮತ್ತೂ ಧ್ವನಿಯೇರಿಸಿ ಬೊಬ್ಬಿರಿಯಿತು. ಮತ್ತಷ್ಟು ಜೋರಾಗಿ ಕೂಗಿತು. ಅಷ್ಟು ಹೊತ್ತಿಗೆ ಆನೆ, “ಓ ನೀನಾ! ನೀನು ಬಂದು ನನ್ನ ಕಿವಿಯಲ್ಲಿ ವಾಸವಿದ್ದೆಯಾ! ನನಗೆ ಗೊತ್ತೇ ಇರಲಿಲ್ಲ. ಹಾಗಾಗಿ ಈಗ ನೀನು ಹೋದರೂ ನನಗೇನೂ ಅಡ್ಡಿ ಇಲ್ಲ’ ಎಂದು ಹೇಳಿತು.

Advertisement

ಈ ಟಿಬೆಟಿಯನ್‌ ಕಥೆ ಹಲವು ರಹಸ್ಯಗಳನ್ನು ಗರ್ಭದಲ್ಲಿ ಇರಿಸಿಕೊಂಡಿದೆ. ನಾವು ಅಂದರೆ ಮನುಷ್ಯರು ಈ ಭೂಮಿಯಲ್ಲಿ ಜನ್ಮ ತಾಳು ತ್ತೇವೆ. ನಮ್ಮ ನಮ್ಮದೇ ಆದ ತಣ್ತೀ, ಸಿದ್ಧಾಂತ, ದೇವ- ದೇವತೆಗಳು, ಧರ್ಮ, ಸಂಘ ಸಂಸ್ಥೆಗಳು… ಇನ್ನೂ ಏನೇನೆಲ್ಲವನ್ನು ಸೃಷ್ಟಿಸಿಕೊಳ್ಳುತ್ತೇವೆ. ಆ ಬಗ್ಗೆ ಬೊಬ್ಬೆ ಹೊಡೆಯುತ್ತೇವೆ, ಪ್ರಚಾರ ಮಾಡುತ್ತೇವೆ.

ನಾಲೆಸೆಗಳು ಮೌನವಾಗಿರುತ್ತವೆ. ಭೂಮಿ ತುಟಿಬಿಚ್ಚುವುದಿಲ್ಲ. ಅನಂತ ಸೃಷ್ಟಿಗೆ ನಮ್ಮ ಹಕೀಕತ್ತುಗಳ ಅರಿವಿಲ್ಲ, ಹಂಗಿಲ್ಲ. ಆನೆ ಯಾದರೋ ಸೊಳ್ಳೆಯ ಕಿರುಗಾತ್ರವನ್ನು ಲೆಕ್ಕಿಸದೆ ಅದರ ಜತೆಗೆ ಮಾತನಾಡಿತು. ಆದರೆ ನಮ್ಮ ಮತ್ತು ಅನಂತ ಸೃಷ್ಟಿಯ ನಡುವೆ ಅಂತಹ ಸಂವಹನವಾದರೂ ಇದೆಯೇ – ಅದೂ ನಮಗೆ ಗೊತ್ತಿಲ್ಲ. ವಿಶಾಲ ಆಕಾಶ, ಪ್ರಕೃತಿ, ಸೃಷ್ಟಿಗೆ ನಾವು ಹುಟ್ಟಿದ್ದೂ ಗೊತ್ತಿಲ್ಲ, ನಾವು ಹೋಗುವುದೂ ಗೊತ್ತಿಲ್ಲ. ಆದರೆ ನಾವು ಇಂತಹ ಸಂದರ್ಭಗಳನ್ನು ಧ್ವನಿವರ್ಧಕ ಇರಿಸಿ, ಸುಡುಮದ್ದು ಸಿಡಿಸಿ ಆಚರಿಸುತ್ತೇವೆ ಅಥವಾ ರೋದಿಸುತ್ತೇವೆ. ನಮ್ಮ ಹುಟ್ಟು -ಅಳಿವು ನೀರಿನ ಮೇಲೆ ಗೆರೆ ಹಾಕಿದ ಹಾಗೆ, ಎಳೆಯುವುದರ ಹಿಂದೆಯೇ ಅಳಿಯುತ್ತ ಹೋಗುತ್ತದೆ.

ಇರುವ ಇಷ್ಟೇ ಇಷ್ಟು ಸಮಯದಲ್ಲಿ ನಮ್ಮ ನಮ್ಮ ಸಂತೃಪ್ತಿಗಾದರೂ ಒಂದಿಷ್ಟು ಚೆನ್ನಾಗಿ ಬದುಕಬಾರದೆ!

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next