Advertisement

ವಿದ್ಯುತ್‌ ಇಲಾಖೆ ಖಾಸಗೀಕರಣ ಬೇಡ

02:12 PM Jun 02, 2020 | Suhan S |

ಮುದ್ದೇಬಿಹಾಳ: ಕೇಂದ್ರ ಸರ್ಕಾರದ ಉದ್ದೇಶಿತ ಕರ್ನಾಟಕದ ವಿದ್ಯುತ್‌ ಇಲಾಖೆ ಖಾಸಗೀಕರಣ ಹುನ್ನಾರ ಖಂಡಿಸಿ ಇಲ್ಲಿನ ಹೆಸ್ಕಾಂ ನೌಕರರು ಸೋಮವಾರ ಶಾಖಾ ಕಚೇರಿ ಆವರಣದಲ್ಲಿ ತೋಳಿಗೆ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಮಾತನಾಡಿದ ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ, ಸೆಕ್ಷನ್‌ ಅಧಿಕಾರಿಗಳಾದ ಎಂ.ಎಸ್‌. ತೆಗ್ಗಿನಮಠ, ಬಿ.ಎಸ್‌. ಯಲಗೋಡ ಅವರು, ವಿದ್ಯುತ್‌ ಇಲಾಖೆ ಖಾಸಗೀಕರಣ ನೌಕರರಿಗೆ ಮಾರಕವಾದದ್ದಾಗಿದೆ. ಖಾಸಗೀಕರಣ ಆದಲ್ಲಿ 3600 ಗ್ರಾಮ ವಿದ್ಯುತ್‌ ಪ್ರತಿನಿಧಿಗಳು ಮತ್ತು ಅವರನ್ನೇ ನಂಬಿದ ಕುಟುಂಬ ಬೀದಿ ಪಾಲಾಗುವ ಸಂಭವ ಅಲ್ಲಗಳೆಯುವಂತಿಲ್ಲ. ಹೊಸದಾಗಿ ನೌಕರಿಗೆ ಸೇರಿದವರಿಗೆ ಖಾಸಗಿಯವರ ಕೈಯಲ್ಲಿ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಈಗಾಗಲೇ ವಿದ್ಯುತ್‌ ಇಲಾಖೆ ಖಾಸಗೀಕರಣ ಮಾಡಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದ್ದರೂ ಕೇಂದ್ರ ಸರ್ಕಾರ ಉದ್ದೇಶಿತ ಖಾಸಗೀಕರಣ ಕೈಬಿಡುವ ಲಕ್ಷಣಗಳು ಕಂಡು ಬರುತ್ತಿಲ್ಲ. ವಿದ್ಯುತ್‌ ಇಲಾಖೆ ಖಾಸಗೀಕರಣಗೊಂಡಿರುವ ರಾಜ್ಯಗಳಲ್ಲಿನ ಪರಿಸ್ಥಿತಿ ನಮ್ಮ ರಾಜ್ಯದಲ್ಲೂ ಬರಬಾರದೆಂದರೆ ನಾವೆಲ್ಲ ಒಗ್ಗಟ್ಟಾಗಿ ಖಾಸಗೀಕರಣ ವಿರೋಧಿಸಬೇಕು. ನಮ್ಮ ಸಿಬ್ಬಂದಿ ನಿಸ್ವಾರ್ಥದ ಸೇವೆ ಸಲ್ಲಿಸುತ್ತಾರೆ. ಆದರೆ ಖಾಸಗಿಯವರು ತಮ್ಮ ಲಾಭಕ್ಕಾಗಿ ಕೆಲಸ ಮಾಡುತ್ತಾರೆ. ಈ ಬಗ್ಗೆ ನಾವೆಲ್ಲ ಜಾಗೃತರಾಗಿರಬೇಕು ಎಂದರು.

ಕೆಪಿಟಿಸಿಎಲ್‌ ನೌಕರರ (659) ಪ್ರಾಥಮಿಕ ಸಂಘದ ಅಧ್ಯಕ್ಷ ಎಸ್‌.ಎಂ. ಆರೇಶಂಕರ, ಸೆಕ್ಷನ್‌ ಆಫೀಸರ್‌ಗಳಾದ ಎಸ್‌.ಎಸ್‌. ಪಾಟೀಲ, ಎಸ್‌.ಐ. ವಾಂಗಿ, ಆರ್‌.ಬಿ. ಹಿರೇಮಠ, ಹೆಸ್ಕಾಂ ನೌಕರರ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎಚ್‌.ಎ. ನಾಯ್ಯೋಡಿ, ಕೇಂದ್ರ ಸಮಿತಿ ಮಾಜಿ ಸದಸ್ಯ ಬಿ.ಡಿ. ಮ್ಯಾಗೇರಿ, ಎಸ್‌.ಎಂ. ಹಾಲ್ಯಾಳ, ಮುತ್ತು ನಾಯಕಮಕ್ಕಳ, ಎಂ.ವಿ. ಲಮಾಣಿ, ಮುದ್ದೇಬಿಹಾಳ, ತಂಗಡಗಿ, ನಾಲತವಾಡ, ಹುಲ್ಲೂರ, ಢವಳಗಿ ಶಾಖೆಯ ನೂರಾರು ಸಿಬ್ಬಂದಿ ಪಾಲ್ಗೊಂಡಿದ್ದರು.  ಕೋವಿಡ್‌-19 ನಿಯಮದ ಅನುಸಾರ ಆವರಣದಲ್ಲಿ ಸುಣ್ಣದ ಬಾಕ್ಸ್‌ ಹಾಕಿ ಅದರಲ್ಲಿ ನಿಂತು ಸಾಮಾಜಿಕ ಅಂತರ ಪಾಲಿಸಿದ್ದು ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next