Advertisement

ಚುನಾವಣ ಕಾಲ ಮುಗಿಯಿತು; ಅಭಿವೃದ್ಧಿಯ ಕೆಲಸ ಶುರುವಾಗಲಿ

12:42 AM Dec 15, 2021 | Team Udayavani |

ಒಂದಾದ ಮೇಲೊಂದರಂತೆ ರಾಜ್ಯದಲ್ಲಿ ಚುನಾವಣ ಪರ್ವವೇ ನಡೆದಿದ್ದು, ಕೆಲವು ದಿನಗಳಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಇದಕ್ಕೆ ಪ್ರಮುಖ ಕಾರಣವೇ ನೀತಿ ಸಂಹಿತೆ. ಚುನಾವಣ ಕಾಲದಲ್ಲಿನ ನೀತಿ ಸಂಹಿತೆಯಿಂದಾಗಿ ರಾಜ್ಯ ಸರಕಾರಕ್ಕೆ ಪ್ರವಾಹವೂ ಸೇರಿದಂತೆ ಹಲವಾರು ಪ್ರಮುಖ ಸಮಸ್ಯೆಗಳ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ. ಈಗ ಪರಿಷತ್‌ ಚುನಾವಣೆ ಮುಗಿದು, ಫ‌ಲಿತಾಂಶವೂ ಬಂದಿದೆ. ಸ್ಥಳೀಯ ಸಂಸ್ಥೆಗಳಿಗೆ ಇದೇ ತಿಂಗಳ ಅಂತ್ಯದಲ್ಲಿ ಚುನಾವಣೆ ನಡೆಯುತ್ತಿದ್ದರೂ ಅದು ಆಯಾ ಸ್ಥಳೀಯ ಮಟ್ಟಕ್ಕೇ ನೀತಿ ಸಂಹಿತೆ ಅನ್ವಯವಾಗುವುದರಿಂದ ಅಭಿವೃದ್ಧಿ ಕೆಲಸ ಕೈಗೊಳ್ಳಲು ಯಾವುದೇ ಅಡ್ಡಿ ಇಲ್ಲ.

Advertisement

ರಾಜ್ಯದಲ್ಲಿ ಮುಂಗಾರು ಅಷ್ಟೇ ಅಲ್ಲ, ಹಿಂಗಾರು ಅವಧಿಯಲ್ಲೂ ಭಾರೀ ಮಳೆಯಾಗಿದೆ. ಹಲವಾರು ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಹೆಕ್ಟೇರ್‌ ಬೆಳೆ ನಾಶವಾಗಿದೆ. ಹಾಗೆಯೇ ಸಾವಿರಾರು ಮನೆಗಳು ಬಿದ್ದಿವೆ, ಜಾನುವಾರುಗಳು ಸಾವಿಗೀಡಾಗಿವೆ. ಇವರಿಗೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಇನ್ನೂ ಸರಿಯಾದ ಪ್ರಮಾಣದಲ್ಲಿ ಪರಿಹಾರ ಸಿಕ್ಕಿಲ್ಲ.  ವಿಪಕ್ಷಗಳು ಸೇರಿದಂತೆ ಸಾರ್ವಜನಿಕರ ಕಡೆಯಿಂದಲೂ ಮಳೆ ಪರಿಹಾರಕ್ಕಾಗಿ ಒತ್ತಡ ಕೇಳಿಬರುತ್ತಲೇ ಇತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾವು ಯಾವುದೇ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದಿದ್ದ ಸರಕಾರ, ನೀತಿ ಸಂಹಿತೆ ಮುಗಿಯಲಿ ಎಂದಿತ್ತು.

ಸದ್ಯ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ರಾಜ್ಯ ಸರಕಾರ ಮತ್ತು ವಿಪಕ್ಷಗಳು ಮಳೆ ಪರಿಹಾರವೂ ಸೇರಿದಂತೆ ರಾಜ್ಯ ಎದುರಿಸುತ್ತಿರುವ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಾಗಿದೆ. ಬಳಿಕ ಜನರಿಗೆ ಪರಿಹಾರ ಘೋಷಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿ.

ಹಾಗೆಯೇ ಕೊರೊನಾದಿಂದ ಸಾವನ್ನಪ್ಪಿದವರಿಗೂ ಇನ್ನೂ ಪರಿಹಾರ ಸಿಕ್ಕಿಲ್ಲ. ಇದಕ್ಕೂ ನೀತಿ ಸಂಹಿತೆಯೇ ಕಾರಣವಿದ್ದಿರಬೇಕು. ಈಗಾಗಲೇ ಘೋಷಿಸಿರುವಂತೆ ರಾಜ್ಯ ಸರಕಾರ ಒಂದು ಲಕ್ಷ ರೂ. ಪರಿಹಾರವನ್ನು ನೀಡುವ ಕೆಲಸ ಮಾಡಬೇಕು.

ಇದನ್ನೂ ಓದಿ:ಖಡಕ್‌ ಟೀ ಆಗದ್ದಕ್ಕೆ ನೆಟ್ಟಿಗರ ಕೋಪ; ಎನ್‌ಆರ್‌ಐ ವೈದ್ಯ ಸಂಜಯ ಗುಪ್ತಾರಿಂದ ಮಕ್ಕಳಿಗೆ ಪಾಠ

Advertisement

ಇದಷ್ಟೇ ಅಲ್ಲ ಗ್ರಾಮೀಣ ಪ್ರದೇಶದಲ್ಲೂ ಹೆಚ್ಚು ಕಡಿಮೆ ಎಲ್ಲ ಅಭಿವೃದ್ದಿ ಕಾಮಗಾರಿಗಳು ಸ್ಥಗಿತವಾಗಿವೆ. ಇದಕ್ಕೂ ನೀತಿ ಸಂಹಿತೆಯೇ ಅಡ್ಡಿಯಾಗಿತ್ತು. ಅಂದರೆ ಮಳೆಯಿಂದ ಹಾಳಾಗಿರುವ ರಸ್ತೆಗಳು, ಶಾಲಾ ಕಟ್ಟಡಗಳು, ಕುಡಿಯುವ ನೀರು ಒದಗಿಸುವುದು ಸೇರಿದಂತೆ ಇತರ ಮೂಲಸೌಕರ್ಯ ಕಾಮಗಾರಿಗಳು ಸ್ಥಗಿತವಾಗಿದ್ದವು. ಈ ಯೋಜನೆಗಳಿಗೆ ರಾಜ್ಯ ಸರಕಾರ ಯಾವುದೇ ಅನುದಾನವನ್ನೂ ಬಿಡುಗಡೆ ಮಾಡಿರಲಿಲ್ಲ. ಈಗ ರಾಜ್ಯ ಸರಕಾರ, ತ್ವರಿತಗತಿಯಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಎಲ್ಲ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು.

ಇವೆಲ್ಲ ಸಂಗತಿಗಿಂತ ಹೆಚ್ಚಾಗಿ, ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಚುನಾವಣ ವಿಚಾರ ಕೋರ್ಟ್‌ ಅಂಗಳದಲ್ಲಿದೆ. ಒಮ್ಮೆ ಇಲ್ಲಿ  ಶೀಘ್ರವೇ ಚುನಾವಣೆ ನಡೆಸಿ ಎಂಬ ತೀರ್ಪು ಬಂದರೆ ಮತ್ತೂಮ್ಮೆ ನೀತಿ ಸಂಹಿತೆ ಜಾರಿಯಾಗಬಹುದು. ಆಗ ಮತ್ತೆ ರಾಜ್ಯ ಸರಕಾರಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಅನನುಕೂಲವಾಗಬಹುದು. ಹೀಗಾಗಿ, ಈಗಿನಿಂದಲೇ ಎಲ್ಲ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಗಿಸುವುದು ಒಳಿತು.

Advertisement

Udayavani is now on Telegram. Click here to join our channel and stay updated with the latest news.

Next