ತೀರ್ಥಹಳ್ಳಿ: ಮಲೆನಾಡಿನಾದ್ಯಂತ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಜೊತೆಗೆ ಚುನಾವಣೆಯ ಕಾವು ರಂಗೇರತೊಡಗಿದೆ. ಈ ಕ್ಷೇತ್ರದಲ್ಲಿ ಪ್ರಮುಖ ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಭೇಟಿ ನೀಡಿ ಓಟಿನ ಬೇಟೆ ನಡೆಸುತ್ತಿದ್ದಾರೆ.
ಕ್ಷೇತ್ರದ ಗ್ರಾಮೀಣ ಪ್ರದೇಶಗಳ ಮನೆಮನೆಗಳಿಗೆ ದೌಡಾಯಿಸಿರುವ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮನೆ ಅಂಗಳದ ಅಡಕೆ ಚಪ್ಪರದ ಕೆಳಗೆ ಅಕ್ಕಪಕ್ಕದ ಗ್ರಾಮಸ್ಥರನ್ನು ಸೇರಿಸಿಕೊಂಡು ತಮ್ಮ ಪಕ್ಷಗಳ ಸಾಧನೆ, ವಿರೋಧಿಗಳ ವೈಫಲ್ಯಗಳ ಬಗ್ಗೆ ಭರ್ಜರಿ ಭಾಷಣ ಮಾಡುತ್ತ ಓಟಿನ ಶಿಕಾರಿಯಲ್ಲಿ ತೊಡಗಿದ್ದಾರೆ.
ಕ್ಷೇತ್ರದ ಪ್ರಮುಖ ನಾಲ್ಕು ಹೋಬಳಿಗಳಲ್ಲೂ ಕಾಂಗ್ರೆಸ್, ಬಿಜೆಪಿ, ಮತ್ತು ಜೆಡಿಎಸ್‌ನ ಕಾರ್ಯಕರ್ತರು ಗ್ರಾಪಂ ವ್ಯಾಪ್ತಿಯ ಮನೆ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ತಮ್ಮ ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಚುನಾವಣೆಗೆ 13 ದಿನ ಬಾಕಿ ಉಳಿದಿದ್ದು, ಮತದಾರರನ್ನು ಆಕರ್ಷಿಸುವ ಕೆಲಸವನ್ನು ತಂತ್ರಗಾರಿಕೆಯೊಂದಿಗೆ ಮುಂದುವರಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾತ್ರ ಮನೆಗೆ ಬಂದು ಬಣ್ಣದ ಮಾತುಗಳನ್ನು ಆಡಿ ಓಟಿಗಾಗಿ ಕೈ ಮುಗಿಯುವ ಅಭ್ಯರ್ಥಿಗಳ ಬಗ್ಗೆಯೂ ಹಲವೆಡೆ ಮತದಾರರಲ್ಲಿ ಆಕ್ರೋಶ ಕಂಡು ಬಂದಿದೆ. ರಸ್ತೆ, ನೀರು, ವಿದ್ಯುತ್, ಆಶ್ರಯ ಮನೆ, ಸೇತುವೆ ಕಾಮಗಾರಿ, ಸಾಲಮನ್ನಾ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮತದಾರರ ಮನವೊಲಿಸುವ ಕೆಲಸ ರಾಜಕೀಯ ಪಕ್ಷಗಳಲ್ಲಿ ಭರ್ಜರಿಯಾಗಿ ಮುಂದುವರಿದಿದೆ.
ಮೂರು ಪಕ್ಷಗಳಲ್ಲೂ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರೇ ಆಯಾ ಪಕ್ಷಗಳ ಸ್ಟಾರ್ ಪ್ರಚಾರಕರಾಗಿ ಕಂಗೊಳಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳ ಪಕ್ಕದ ಖಾಲಿ ಜಾಗದಲ್ಲಿ ಕುರ್ಚಿಗಳನ್ನು ಹಾಕಿ ಪ್ರಚಾರ ಸಭೆಯನ್ನು ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿರುವ ದೇವಸ್ಥಾನಗಳಿಗೆ ಬೇಟಿ ನೀಡಿ ಮುಖಂಡರು, ಕಾರ್ಯಕರ್ತರು ಗೆಲುವಿಗಾಗಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳಿಗೆ ಮೊರೆ ಹೋಗಿದ್ದಾರೆ. ತೀರ್ಥಹಳ್ಳಿ ಕ್ಷೇತ್ರದ ಈ ಬಾರಿಯ ಚುನಾವಣಾ ಆಖಾಡ ಪಕ್ಷದ ಅಭಿವೃದ್ಧಿಯ ಬಗೆಗಿನ ಪ್ರಚಾರಕ್ಕಿಂತ ವೈಯಕ್ತಿಕ ಟೀಕೆ ಟಿಪ್ಪಣಿಗಳಿಗೆ ಮೂರು ಪಕ್ಷದ ಕಾರ್ಯಕರ್ತರು ಮುಖಂಡರು ಹೆಚ್ಚು ಒತ್ತು ನೀಡುತ್ತಿದ್ದಾರೆ.
ಒಟ್ಟಾರೆ ಈ ಬಾರಿಯ ವಿಧಾನಸಭಾ ಚುನಾವಣೆಯ ಪ್ರಚಾರದ ರಂಗಿನಾಟ ಮಲೆನಾಡಿನಾದ್ಯಂತ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೂರು ಪಕ್ಷಗಳ ಕಾರ್ಯಕರ್ತರು ಕೆಲವು ದಿನಗಳಿಂದ ವಲಸೆ ಹೋಗಿ ಮತ್ತೆ ಹಳೆ ಪಕ್ಷಕ್ಕೆ ವಾಪಸ್ ಆಗಿರುವುದು ಕಂಡು ಬಂದಿದೆ. ಕಾರ್ಯಕರ್ತರನ್ನೇ ಹೆಚ್ಚು ನಂಬಿರುವ ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಆಮಿಷ ನೀಡಿದಂತೆ ಕಾರ್ಯಕರ್ತರಿಗೂ ಆಕರ್ಷಕ ಆಮಿಷ ನೀಡಿದ ಹಲವು ಸಂದರ್ಭಗಳು ಕಂಡು ಬಂದಿದೆ. ಇನ್ನೊಂದೆಡೆ ಪ್ರಮುಖ ಸಮುದಾಯಗಳ ಮುಖಂಡರು ತಮ್ಮ ಮುಷ್ಠಿಯಲ್ಲಿ ಹಿಡಿದುಕೊಂಡು ಜಾತಿ ಸಂಘಟನೆಗಳ ಮೂಲಕ ಮತವನ್ನು ಸೆಳೆಯುವ ಪ್ರಯತ್ನ ಹಲವೆಡೆ ನಡೆಯುತ್ತಿದೆ.
ಮೂರು ಪಕ್ಷಗಳಲ್ಲಿಯೂ ಸಹ ಪಕ್ಷದ ಕಾರ್ಯಕರ್ತರು ಬೇರೆ ಪಕ್ಷಕ್ಕೆ ವಲಸೆ ಹೋಗದಂತೆ ತಡೆ ಹಿಡಿದುಕೊಳ್ಳುವುದು ಕಷ್ಟದ ಕೆಲಸವಾಗಿದೆ. ಆದರೆ ಕ್ಷೇತ್ರದ ಮತದಾರರು ಮಾತ್ರ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರುಗಳ ರಂಗಿನಾಟವನ್ನು ಗಮನಿಸುತ್ತಿದ್ದಾರೆ.
ರಾಂಚಂದ್ರ ಕೊಪ್ಪಲು